Advertisement

ಕಿರಾಣಿ ಅಂಗಡಿ ಮಾಲಿಕ, ವೃದ್ಧ ವ್ಯಕ್ತಿಗೆ ಕೋವಿಡ್ 19 ಸೋಂಕು ಪಾಸಿಟಿವ್!

09:03 AM Apr 03, 2020 | Hari Prasad |

ಬಾಗಲಕೋಟೆ: ಜಿಲ್ಲೆಯ ಹಳೆಯ ಬಾಗಲಕೋಟೆಯಲ್ಲಿ ಕಿರಾಣಿ ಅಂಗಡಿ ಹೊಂದಿರುವ 71 ವರ್ಷದ ವೃದ್ಧರೊಬ್ಬರಲ್ಲಿ ಕೋವಿಡ್ 19 ವೈರಸ್ ಪಾಸಿಟಿವ್ ಪತ್ತೆಯಾಗಿದೆ. ಜಿಲ್ಲೆಯಲ್ಲಿ ಕೋವಿಡ್ 19 ಸೋಂಕು ಪೀಡಿತ ಮೊದಲ ಪ್ರಕರಣ ಇದಾಗಿದೆ.

Advertisement

ಕೆಮ್ಮು, ನೆಗಡಿ ಹಾಗೂ ಜ್ವರದಿಂದ ಬಳಲುತ್ತಿದ್ದ ಇವರು ಮೂರು ದಿನಗಳ ಹಿಂದೆ ಜಿಲ್ಲಾ ಆಸ್ಪತ್ರೆಗೆ ತಪಾಸಣೆಗಾಗಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ಕಿರಾಣಿ ಅಂಗಡಿಯ ಮಾಲಿಕರ ರಕ್ತದ ಮಾದರಿ ಮತ್ತು ಗಂಟಲ ದ್ರವ ಮಾದರಿಯನ್ನು  ಪರೀಕ್ಷೆಗೆ ಕಳುಹಿಸಿಕೊಡಲಾಗಿತ್ತು.

ಈ ಮಾದರಿಯ ಪರೀಕ್ಷಾ ವರದಿ ಗುರುವಾರ ರಾತ್ರಿ ಬಂದಿದ್ದು ಇದರಲ್ಲಿ ಈ 71 ವರ್ಷ  ಪ್ರಾಯದ ಈ ವ್ಯಕ್ತಿಯಲ್ಲಿ ಸೋಂಕಿನ ಪಾಸಿಟಿವ್ ಲಕ್ಷಣಗಳಿರುವುದು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ| ಕೆ. ರಾಜೇಂದ್ರ ಅವರು ಮಾಹಿತಿ ನೀಡಿದ್ದಾರೆ.

ಇದೀಗ ಸೋಂಕು ಪೀಡಿತರಾಗಿರುವ ವ್ಯಕ್ತಿ ಅವಿವಾಹಿತರಾಗಿದ್ದು, ನಗರದ ಅಡತ ಬಜಾರ್‌ನ ಮುಖ್ಯ ರಸ್ತೆಯಲ್ಲಿ ಸ್ವಂತ ಮನೆಯನ್ನು ಹೊಂದಿದ್ದಾರೆ. ಈ ಮನೆಯಲ್ಲಿ ಅವರ ಸಹೋದರರ ಮಕ್ಕಳು, ಸೊಸೆಯಂದಿರು ಹಾಗೂ ಮೊಮ್ಮಕ್ಕಳು ಸಹಿತ ಒಟ್ಟು ಹತ್ತಕ್ಕೂ ಹೆಚ್ಚಿನ ಸದಸ್ಯರಿದ್ದಾರೆ. ಅಲ್ಲದೇ ಮತ್ತೊಬ್ಬ ಸಹೋದರನ ಮನೆಯು ನವ ನಗರದ ಸೆಕ್ಟರ್ ನಂ.8ರಲ್ಲಿದ್ದು, ಅವರೆಲ್ಲರನ್ನೂ ಇದೀಗ ತಪಾಸಣೆಗೆ ಒಳಪಡಿಸಲು ಜಿಲ್ಲಾಡಳಿತ ನಿರ್ಧರಿಸಿದೆ.

ಪೂರ್ತಿ ಪ್ರದೇಶಕ್ಕೆ ನಿರ್ಬಂಧ:
ನಗರದ ಹೊಳೆ ಆಂಜನೆಯ ದೇವಸ್ಥಾನ ಎದುರಿನಿಂದ ತರಕಾರಿ ಮಾರುಕಟ್ಟೆಗೆ ತೆರಳುವ ರಸ್ತೆಯಲ್ಲಿ ಈ ವ್ಯಕ್ತಿಯ ಅಂಗಡಿ ಇದ್ದು, ಆ ಏರಿಯಾ ಹಾಗೂ ಅವರ ಸ್ವಂತ ಮನೆಯ ಇರುವ ಅಡತ್ ಬಜಾರ ಮುಖ್ಯ ರಸ್ತೆಯ ಎಲ್ಲ ಏರಿಯಾಗೆ ಜನರ ಪ್ರವೇಶ, ತಿರುಗಾಟ ಸಂಪೂರ್ಣ ನಿರ್ಬಂಧ ವಿಧಿಸಲಾಗಿದೆ. ಇದೀಗ ಈ ಅಂಗಡಿ ಮಾಲಿಕನಿಗೆ  ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಅವರ ಸಂಬಂಧಿಕರು, ಮನೆಯ ವ್ಯಕ್ತಿಗಳನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ.

Advertisement

ಎಲ್ಲಿಯೂ ಹೋಗಿರದ ಅಜ್ಜ:
ಇದೀಗ ಕೋವಿಡ್ 19 ಸೋಂಕು ಪೀಡಿತರಾಗಿರುವ ಈ ಕಿರಾಣಿ ಅಂಗಡಿಯ ಮಾಲಿಕ ವೃದ್ಧ ವ್ಯಕ್ತಿ ಸದ್ಯ ಎಲ್ಲಿಯೂ ಹೋಗಿರಲಿಲ್ಲ. ಆದರೆ, ಅವರ ಸಹೋದರನ ಪುತ್ರ ಹೋಳಿ ಹುಣ್ಣಿಮೆಯ ಬಣ್ಣದವೇಳೆ ಆತನ ಸ್ನೇಹಿತರೊಂದಿಗೆ ಜಮ್ಮು- ಕಾಶ್ಮೀರ ಸಹಿತ ವಿವಿಧೆಡೆ ಪ್ರವಾಸಕ್ಕೆ ಹೋಗಿ ಮರಳಿದ್ದರು.

ಸಹೋದರನ ಇನ್ನೊಬ್ಬ ಪುತ್ರ ಈಚೆಗೆ ಬೆಂಗಳೂರಿನಿಂದ ಮನೆಗೆ ಬಂದಿದ್ದ. ಈ ನಡುವೆ ಇವರಿಗೆ ಕಳೆದ ಮೂರು ದಿನಗಳಿಂದ ಅನಾರೋಗ್ಯ ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದು, ಗುರುವಾರ ಸೋಂಕು ದೃಢಪಟ್ಟಿರುವುದು, ನಗರದಲ್ಲಿಭೀತಿಗೆ ಕಾರಣವಾಗಿದೆ.

ರೋಗಿಗಳ ಸ್ಥಳಾಂತರ:
ನವ ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಸೋಂಕಿತ ವ್ಯಕ್ತಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಇಡೀ ಜಿಲ್ಲಾ ಆಸ್ಪತ್ರೆಯಲ್ಲಿದ್ದ ಇತರ ಎಲ್ಲಾ ರೋಗಿಗಳನ್ನು ಕುಮಾರೇಶ್ವರ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗುತ್ತಿದೆ.

ಗುರುವಾರ ತಡ ರಾತ್ರಿ ಜಿಲ್ಲಾ ಆಸ್ಪತ್ರೆಯ ಎಲ್ಲ ರೋಗಿಗಳು, ಸಿಬ್ಬಂದಿ ಸಹಿತ ಕುಮಾರೇಶ್ವರ ಆಸ್ಪತ್ರೆಗೆ ಸ್ಥಳಾಂತರಿಸಿ, ಇಡೀ ಜಿಲ್ಲಾ ಆಸ್ಪತ್ರೆಯನ್ನು ಸೋಂಕಿತ ವ್ಯಕ್ತಿಗಳ ಐಸೊಲೇಶನ್ ಆಸ್ಪತ್ರೆಯಾಗಿ ಪರಿವರ್ತಿಸಲು ಜಿಲ್ಲಾಡಳಿತ ನಿರ್ಧರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next