ಸಾಮಾನ್ಯವಾಗಿ ಯಾರಿಗಾದರೂ ಬೈಯ್ಯುವಾಗಲೊ, ಅಥವಾ ಪ್ರತಿಷ್ಠೆಯ ಬಗ್ಗೆ ಮಾತನಾಡುವಾಗಲೊ, “ಥರ್ಡ್ ಕ್ಲಾಸ್’ ಎಂಬ ಪದವನ್ನು ಬಳಸುವುದನ್ನು ನೀವು ಕೇಳಿರುತ್ತೀರಿ. ಈಗ ಇದೇ “ಥರ್ಡ್ ಕ್ಲಾಸ್’ ಎಂಬ ಇಂಗ್ಲೀಷ್ ಪದವೇ ಅಚ್ಚ ಕನ್ನಡದ ಚಿತ್ರವೊಂದಕ್ಕೆ ಶೀರ್ಷಿಕೆಯಾಗಿದೆ! ಹೌದು, ಚಿತ್ರದ ಟೈಟಲ್ “ಥರ್ಡ್ ಕ್ಲಾಸ್’ ಅಂತಿದ್ರೂ, ಚಿತ್ರದ ಸ್ಟೋರಿ ಫಸ್ಟ್ ಕ್ಲಾಸ್ ಎನ್ನುತ್ತ ಚಿತ್ರದ ಬಗ್ಗೆ ಮಾತನಾಡುವ ಚಿತ್ರತಂಡ, “ನಮ್ಮ ಸಮಾಜ ಬಡ, ಮಧ್ಯಮ ಮತ್ತು ಶ್ರೀಮಂತ ವರ್ಗವನ್ನು ಹೇಗೆ ನೋಡುತ್ತದೆ. ಈ ಮೂರು ವರ್ಗಗಳ ಸ್ಥಿತಿ-ಗತಿಗಳೇನು, ಎಂಬುದನ್ನು “ಥರ್ಡ್ ಕ್ಲಾಸ್’ ಚಿತ್ರದ ಮೂಲಕ ಹೇಳಲು ಹೊರಟಿದ್ದೇವೆ’ ಎಂದು ಟೈಟಲ್ ಬಗ್ಗೆ ಸಮರ್ಥನೆ ನೀಡುತ್ತದೆ.
ಇನ್ನು “ಥರ್ಡ್ ಕ್ಲಾಸ್’ ಚಿತ್ರಕ್ಕೆ ನವ ನಟ ನಮ್ ಜಗದೀಶ್ ಕಥೆ ಬರೆದು, ಮೊದಲ ಬಾರಿಗೆ ನಾಯಕ ನಟನಾಗಿ ಅಭಿನಯಿಸಿದ್ದಾರೆ. ಜೊತೆಗೆ ಚಿತ್ರದ ನಿರ್ಮಾಣದ ಹೊಣೆಯನ್ನೂ ಅವರೇ ಹೊತ್ತುಕೊಂಡಿದ್ದಾರೆ. ನಾಯಕಿಯಾಗಿ ರೂಪಿಕಾ ಹೋಂ ಮಿನಿಸ್ಟರ್ ಮಗಳಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಎರಡನೇ ನಾಯಕಿಯಾಗಿ ದಿವ್ಯಾರಾವ್, ಹೋಂ ಮಿನಿಸ್ಟರ್ ಪಾತ್ರದಲ್ಲಿ ಅವಿನಾಶ್, ನಾಯಕಿಯ ತಾಯಿಯಾಗಿ ಸಂಗೀತಾ, ಸಂಗೀತ ಶಿಕ್ಷಕನಾಗಿ ರಮೇಶ್ ಭಟ್, ವಾಹನ ರಿಪೇರಿ ಮಾಡುವ ಮುಸ್ಲಿಂ ಹುಡುಗನಾಗಿ ಪವನ್, ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ತಮಿಳು ನಟ ನಿಪ್ಪು, ವಿಧಾನ ಪರಿಷತ್ ಸದಸ್ಯ ಶರವಣ ಕೂಡ ಚಿತ್ರದಲ್ಲಿ ನಟಿಸಿದ್ದಾರೆ.
ಅಶೋಕ್ ದೇವ್ “ಥರ್ಡ್ ಕ್ಲಾಸ್’ ಚಿತ್ರವನ್ನು ನಿರ್ದೇಶಿಸಿದ್ದಾರೆ. ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕರು, “ಚಿತ್ರದ ಹೆಸರು ಕೇಳಿದಾಕ್ಷಣ ಇದೊಂದು ಬೇರೆ ಥರದ ಚಿತ್ರ ಅಂದುಕೊಳ್ಳಬಹುದು. ಆದರೆ ಚಿತ್ರದಲ್ಲಿ ಸಮಾಜದಲ್ಲಿರುವ ಶ್ರೀಮಂತ-ಬಡವ ಎಂಬ ವರ್ಗ, ಸ್ಥಾನಮಾನಗಳ ಸುತ್ತ ಕಥೆ ಸಾಗುವುದರಿಂದ ಚಿತ್ರಕ್ಕೆ ಈ ಥರದ ಟೈಟಲ್ ಇಟ್ಟಿದ್ದೇವೆ. ಹಾಗಂತ ಚಿತ್ರದಲ್ಲಿರುವುದು ಫಸ್ಟ್‌ಕ್ಲಾಸ್ ಸ್ಟೋರಿ’ ಎಂದು ವಿವರಣೆ ಕೊಡುತ್ತಾರೆ. “ಥರ್ಡ್ ಕ್ಲಾಸ್’ ಚಿತ್ರದ ಟೈಟಲ್‌ಗೆ “ಹಣೆಬರಹಕ್ಕೆ ಯಾರು ಹೊಣೆ’ ಟ್ಯಾಗ್ ಲೈನ್ ಕೂಡ ಇದ್ದು, ಅದು ಚಿತ್ರಕ್ಕೆ ಹೇಗೆ ಕನೆಕ್ಟ್ ಆಗುತ್ತದೆ ಅನ್ನೋದನ್ನ ಚಿತ್ರದಲ್ಲೇ ನೋಡಬೇಕು ಎನ್ನುತ್ತದೆ ಚಿತ್ರತಂಡ.
ಸದ್ಯ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿರುವ ಚಿತ್ರತಂಡ, ಇತ್ತೀಚೆಗೆ “ಥರ್ಡ್ ಕ್ಲಾಸ್’ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡುವ ಮೂಲಕ ಚಿತ್ರದ ಪ್ರಮೋಶನ್ ಕೆಲಸಗಳಿಗೆ ಚಾಲನೆ ನೀಡಿದೆ. ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು, ಜೆಸ್ಸಿ ಗಿಫ್ಟ್ ಸಂಗೀತ ಸಂಯೋಜನೆಯ ಹಾಡುಗಳಿಗೆ, ಡಾ. ವಿ ನಾಗೇಂದ್ರ ಪ್ರಸಾದ್, ಕವಿರಾಜ್, ಚೇತನ್ ಸಾಹಿತ್ಯ ರಚಿಸಿದ್ದಾರೆ. ಅನುರಾಧ ಭಟ್, ಚಿತ್ರಾ, ಜೆಸ್ಸಿ ಗಿಫ್ಟ್ ಮೊದಲಾದವರು ಚಿತ್ರದ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಚಿತ್ರಕ್ಕೆ ಶ್ಯಾಮ್ ರಾಜ್ ಛಾಯಾಗ್ರಹಣ, ಶ್ರೀಕಾಂತ್ ಸಂಕಲನ ಕಾರ್ಯವಿದೆ. ಎಲ್ಲ ಅಂದುಕೊಂಡಂತೆ ನಡೆದರೆ, ಇದೇ ಡಿಸೆಂಬರ್ ವೇಳೆಗೆ “ಥರ್ಡ್ ಕ್ಲಾಸ್’ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ.