Advertisement
ಬೀದರ ನಗರಸಭೆಗೆ ಬರೋಬ್ಬರಿ ಮೂರೂವರೆ ವರ್ಷಗಳಿಂದ ಅಧ್ಯಕ್ಷ ಗದ್ದುಗೆ ಖಾಲಿ ಉಳಿದಿರುವುದು ವಿಶೇಷ. ಕೋರ್ಟ್ ತಕಾರರು ಹಿನ್ನೆಲೆ ಸುಮಾರು ಮೂರು ವರ್ಷಗಳ ಬಳಿಕ 2021ರ ಏ. 27ಕ್ಕೆ ಚುನಾವಣೆ ನಡೆದಿತ್ತು. ಆದರೆ, ಕೋರ್ಟ್ ತಡೆ ಹಿನ್ನೆಲೆ ಎರಡು ವಾರ್ಡ್ ಗಳ ಚುನಾವಣೆ ಬಾಕಿ ಉಳಿದಿದ್ದವು. ನಂತರ ಸೆ.6ರಂದು ಉಳಿದೆರಡು ಕ್ಷೇತ್ರದ ಫಲಿತಾಂಶವೂ ಹೊರ ಬಿದ್ದಿದೆ. ತದನಂತರ ಕೋವಿಡ್ ನೆಪವೊಡ್ಡಿ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನ ಚುನಾವಣೆ ಸಂಬಂಧ ಸರ್ಕಾರ ಆದೇಶ ಹೊರಡಿಸದೇ ಮುಂದೂಡುತ್ತ ಬಂದಿದೆ. ಈಗ ವಿಧಾನ ಪರಿಷತ್ ಚುನಾವಣೆ ಅಧಿಸೂಚನೆ ಪ್ರಕಟವಾಗಿದ್ದು, ಇನ್ನಷ್ಟು ದಿನ ವಿಳಂಬವಾಗುವುದು ದಟ್ಟವಾಗಿದೆ.
Related Articles
Advertisement
ವಿವಿಧ ಹಣಕಾಸು ಯೋಜನೆಗಳಡಿ ನಗರಸಭೆಗೆ ಬಿಡುಗೆ ಆಗಿರುವ ಹಣ ಜನರ ಅಭಿವೃದ್ಧಿಗೆ ಸಮರ್ಪಕವಾಗಿ ವ್ಯಯ ಮಾಡಲು ಆಗುತ್ತಿಲ್ಲ. ಮಳೆ ಜತೆಗೆ ಯುಜಿಡಿ ಕಾಮಗಾರಿಯಿಂದ ನಗರದ ಬಹುತೇಕ ಪ್ರಮುಖ ರಸ್ತೆಗಳಲ್ಲಿ ಗುಂಡಿ ಬಿದ್ದಿವೆ. ಈ ರಸ್ತೆಗಳಿಗೆ ಹೊಸದಾಗಿ ಡಾಂಬರೀಕರಣ ಮಾಡುವುದಿರಲಿ, ಗುಂಡಿಗಳನ್ನು ಮುಚ್ಚಲು ಆಗುತ್ತಿಲ್ಲ. ಇದರಿಂದ ಬರುವ ಧೂಳಿನಿಂದ ಜನ ಬೇಸತ್ತಿದ್ದಾರೆ. ಸ್ವಚ್ಛ ಭಾರತ್ ಅಭಿಯಾನದ ಜೊತೆಗೆ ಕಸ ವಿಲೇವಾರಿ ಸಮರ್ಪಕವಾಗಿ ಆಗುತ್ತಿಲ್ಲ. ಸಿಎಂಸಿ ಕಚೇರಿಗೆ ಸಮಸ್ಯೆ ಹೊತ್ತು ಬರುವ ಜನರಿಗೆ ಸುಲಭವಾಗಿ ಕೆಲಸಗಳು ಆಗುತ್ತಿಲ್ಲ. ಜನಪ್ರತಿನಿಧಿಗಳು ಇದ್ದರೂ ಇಲ್ಲದಂತಾಗಿದ್ದಾರೆ. ಇದರಿಂದ ಅಧಿಕಾರಿಗಳು ಸರ್ವಾಧಿಕಾರಿಗಳಂತೆ ವರ್ತಿಸುತ್ತಿದ್ದಾರೆ.
ಆಡಳಿತ ಸನಿಹಕ್ಕೆ ಕಾಂಗ್ರೆಸ್?
ನಗರಸಭೆ ಅಧ್ಯಕ್ಷ ಸ್ಥಾನ ಬಿಸಿಎ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. ಚುನಾವಣೆಯಲ್ಲಿ ಮತದಾರರು ಯಾರಿಗೂ ಸ್ಪಷ್ಟ ಬಹುಮತ ನೀಡಿಲ್ಲ. ಒಟ್ಟು 35 ವಾರ್ಡ್ ಹೊಂದಿರುವ ನಗರಸಭೆಯಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯಲು 18 ಸದಸ್ಯರ ಬಲ ಬೇಕು. ಆದರೆ, 16 ಸ್ಥಾನ ಗೆದ್ದು ದೊಡ್ಡ ಪಕ್ಷವಾಗಿ ಹೊರಹೊಮ್ಮುವ ಮೂಲಕ ಕಾಂಗ್ರೆಸ್ ಆಡಳಿತದ ಸನಿಹಕ್ಕೆ ಬಂದಿದೆ. ಬಿಜೆಪಿ ಮತ್ತು ಜೆಡಿಎಸ್ ತಲಾ 8 ಸ್ಥಾನ ಗೆದ್ದಿದ್ದರೆ, ಎಂಐಎಂ 2 ಸ್ಥಾನ ಮತ್ತು ಆಮ್ ಆದ್ಮಿ ಪಕ್ಷ ಒಂದು ಸ್ಥಾನ ತನ್ನದಾಗಿಸಿಕೊಂಡಿದೆ. ಎಂಐಎಂ ಮತ್ತು ಆಪ್ ಬೆಂಬಲ ಪಡೆದರೆ ಕೈಗೆ ಬಹುಮತದ ಸಂಖ್ಯೆ ಸಿಗಲಿದೆ. ಇನ್ನೂ ಸ್ಥಳೀಯ ಶಾಸಕ, ಎಂಎಲ್‌ಸಿಗಳು ಮತ ಚಲಾಯಿಸುವ ಹಕ್ಕು ಹೊಂದಿರುವುದರಿಂದ ಕಾಂಗ್ರೆಸ್ ಬಲ ಹೊಂದಿದೆ.
3.5 ವರ್ಷದಿಂದ ಅಧ್ಯಕ್ಷರಿಲ್ಲ
2013ರ ಫೆಬ್ರವರಿಯಲ್ಲಿ ಬೀದರ ನಗರಸಭೆಗೆ ಚುನಾವಣೆ ನಡೆದಿತ್ತು. ಅವಧಿ ಪೂರ್ಣಗೊಂಡ ನಂತರ ನಿಗದಿಯಂತೆ 2018ರಲ್ಲಿ ಚುನಾವಣೆ ನಡೆಯಬೇಕಿತ್ತು. ಆದರೆ, ಕೆಲ ವಾರ್ಡ್‌ಗಳ ಮೀಸಲಾತಿ ತಕರಾರು ಸಂಬಂಧ ಕೋರ್ಟ್‌ನಲ್ಲಿ ದಾವೆ ಹೂಡಿದ್ದರಿಂದ ಚುನಾವಣೆಗೆ ವಿಳಂಬವಾಗಿತ್ತು. ಪ್ರಕರಣ ಇತ್ಯರ್ಥ ಬಳಿಕ ಸರ್ಕಾರ ವಾರ್ಡ್ ಮೀಸಲು ನಿಗದಿಪಡಿಸಿ 2021ರ ಏಪ್ರಿಲ್‌ನಲ್ಲಿ ಚುನಾವಣೆ ನಡೆಸಿದೆ. ಆದರೆ, ಈಗ ಮತ್ತೆ ಹಲವು ಕಾರಣಗಳಿಂದ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ನನೆಗುದಿಗೆ ಬಿದ್ದಿದೆ.
-ಶಶಿಕಾಂತ ಬಂಬುಳಗೆ