Advertisement

ಪ್ರಥಮ ಲೇಖನಂ…ಮೊದಲ ಬರಹದ ಪುಳಕ

09:13 AM Mar 05, 2020 | mahesh |

ಮೊದಲ ಪ್ರೀತಿ, ಮೊದಲ ಸಂದರ್ಶನ, ಮೊದಲ ನೌಕರಿ, ಮೊದಲ ಸಂಬಳ…ಇವೆಲ್ಲಾ ಮರೆಯಲಾಗದ ಮಧುರ ಕ್ಷಣಗಳು. ಅಂಥದೇ ಮತ್ತೂಂದು ಸಂದರ್ಭ- ನಮ್ಮ ಬರಹವೊಂದು ಮೊದಲ ಬಾರಿಗೆ ಯಾವುದಾದರೊಂದು ಕಡೆ ಪ್ರಕಟವಾಗುತ್ತದಲ್ಲ; ಅದು! ಅಂಥದೊಂದು ಸಂದರ್ಭವು ತಮಗೆ ನೀಡಿದ ಖುಷಿ, ಬೆರಗು ಮತ್ತು ಆನಂದಾನುಭೂತಿಯನ್ನು ಕುರಿತು, ಹೆಮ್ಮೆ ಮತ್ತು ಅಭಿಮಾನದಿಂದ ಹಲವರು ಹೇಳಿಕೊಂಡಿದ್ದಾರೆ. ಮಹಿಳಾ ದಿನದ ನೆಪದಲ್ಲಿ, ಮಹಿಳೆಯರ ಮನದ ಮಾತುಗಳಿಗೆ ವೇದಿಕೆಯಾಗಲು, “ಅವಳು’ ಹರ್ಷಿಸುತ್ತದೆ…

Advertisement

ಕಾವ್ಯನಾಮ ಬಳಸಿದ್ದು ಅದೇ ಕೊನೆ
ನನ್ನ ಮೊದಲ ಬರಹ ಪ್ರಕಟವಾದದ್ದು ಮಯೂರ ಮಾಸಿಕದ “ಬುತ್ತಿ ಚಿಗುರು’ ವಿಭಾಗದಲ್ಲಿ. 1982ರಲ್ಲಿ. “ಎಲ್ಲಾ ದೇವರ ದಯ’ಎಂಬ ಪುಟ್ಟ ಬರಹ ಅದು. ಅಂದು ಸಂಜೆ, ಸಿಟಿಯಿಂದ ವಾಪಸಾಗುವಾಗ ಮಯೂರ ಖರೀದಿಸಿ, ಬಸ್ಸಿನಲ್ಲಿ ಕುಳಿತು “ಗ್ರೀಷ್ಮ’ ಕಾವ್ಯನಾಮದಲ್ಲಿ ಬರೆದಿದ್ದ ನನ್ನದೇ ಬರಹ ಓದುವಾಗ ಎಂಥದೋ ಅರಿಯದ ಸಡಗರ! ಮೊದಲು ಅಮ್ಮ, ನಂತರ ಅಪ್ಪನಿಂದ ಭೇಷ್‌ ಅನ್ನಿಸಿಕೊಂಡಾಯ್ತು.ಅಲ್ಲಿಂದಾಚೆ, ಓದುವುದರಲ್ಲಿ ಆಸಕ್ತಿಯಿದ್ದ ನೆರೆಹೊರೆ, ಮಿತ್ರವರ್ಗಕ್ಕೆ ತೋರಿಸಿ ಸಂಭ್ರಮಿಸಿದ್ದೆ. ಕೆಲವರಿಗೆ ಬಲವಂತವಾಗಿ ಓದಿಸಿದ್ದೂ ಉಂಟು-ನನ್ನ ಖುಷಿ ನನಗೆ! ಮಾಸಿಕದವರಿಂದ ಸಂದ ಗೌರವ ಸಂಭಾವನೆಯನ್ನು ಮನಿಯಾರ್ಡರ್‌ ಮೂಲಕ ಸ್ವೀಕರಿಸುವಾಗ ಮೂಡಿದ ಅನುಭೂತಿ ಪದಗಳಿಗೆ ನಿಲುಕದ್ದು. “ಬೇರೆ ಹೆಸರಿನಲ್ಲಿ ಬರೆದರೆ ನನ್ನ ಗೆಳೆಯರಿಗೆ ತೋರಿಸಲು ಸಂಕೋಚವಾಗುತ್ತೆ’ ಎಂದು ಅಣ್ಣ (ಅಪ್ಪ) ಕೊಂಚ ಕಸಿವಿಸಿಗೊಂಡಾಗ “ಗ್ರೀಷ್ಮ’ ಹೆಸರಿಗೆ ವಿದಾಯ ಹೇಳಿ, ಅಂದಿನಿಂದ ನನ್ನದೇ ಹೆಸರಿನಿಂದ ಬರೆಯತೊಡಗಿದೆ.
-ಕೆ.ವಿ. ರಾಜಲಕ್ಷ್ಮಿ , ಬೆಂಗಳೂರು

ಕಣ್ಣಲ್ಲಿ ನೀರು ತುಂಬಿತ್ತು…
“ಪ್ರಜಾವಾಣಿ’ಯಲ್ಲಿ ಪ್ರತಿ ಗುರುವಾರ ಕಾಮನಬಿಲ್ಲು ಎಂಬ ಪುರವಣಿ ಪ್ರಕಟವಾಗುತ್ತಿತ್ತು. ಪ್ರತೀ ವಾರವೂ ಓದುಗರಿಗೆ ಒಂದೊಂದು ವಿಷಯ ಕೊಟ್ಟು ಲೇಖನಗಳನ್ನು ಆಹ್ವಾನಿಸುತ್ತಿದ್ದರು. ಯಜಮಾನರು, “ನೀನೂ ಯಾಕೆ ಬರೆಯಬಾರದು?’ ಅಂತ ಹುರಿದುಂಬಿಸಿದರು. ಒಂದು ಪ್ರಯತ್ನ ಮಾಡೇಬಿಡೋಣ ಅಂದುಕೊಂಡೆ. ಜಾಲತಾಣಗಳು ಎಂಬ ವಿಷಯದ ಬಗ್ಗೆ ಬರೆಯಲು ಪತ್ರಿಕೆಯವರು ಕರೆ ಕೊಟ್ಟಾಗ, ಪೆನ್ನು-ಹಾಳೆ ಕೈಗೆತ್ತಿಕೊಂಡೇ ಬಿಟ್ಟೆ. ಮುಂದಿನ ಗುರುವಾರದವರೆಗೆ ಅದೆಷ್ಟು ಚಡಪಡಿಸಿದ್ದೆನೋ ದೇವರಿಗೇ ಗೊತ್ತು! ಪ್ರಕಟವಾಗುತ್ತೆಂಬ ಭರವಸೆ ಇಲ್ಲದೆ ಪತ್ರಿಕೆಯ ಪುಟ ತಿರುಗಿಸಿದ್ದೆ. ಅಬ್ಟಾ, ನನ್ನ ಹೆಸರಿನ ಜೊತೆ ಲೇಖನ ಪ್ರಕಟವಾಗಿತ್ತು! ಅದನ್ನು ಯಜಮಾನರಿಗೆ ತೋರಿಸಿ ಕುಣಿದಾಡಿದ್ದೆ. ಊರಲ್ಲಿದ್ದ ಅಪ್ಪ, ಅಮ್ಮ, ತಂಗಿ, ತಮ್ಮ, ಗೆಳತಿಯರು ಎಲ್ಲರಿಗೂ ತೋರಿಸಿ ಸಂಭ್ರಮಪಟ್ಟಿದ್ದೇ ಪಟ್ಟಿದ್ದು. ಎರಡು ತಿಂಗಳ ನಂತರ ಅದರ ಸಂಭಾವನೆಯ ಚೆಕ್‌ ಕೈಸೇರಿದಾಗ, ಮೊದಲ ಬಾರಿಗೆ ಸ್ವಂತ ಸಂಪಾದನೆಯ ಹಣ ಕಂಡು ಕಣ್ಣಲ್ಲಿ ನೀರು ಬಂದಿತ್ತು.
ನಳಿನಿ. ಟಿ. ಭೀಮಪ್ಪ, ಧಾರವಾಡ

ಆ ಪೇಪರ್‌ ಸಿಗಲೇ ಇಲ್ಲ!
ಅದೊಂದು ಭಾನುವಾರದ ಮುಂಜಾನೆ, ಮೊಬೈಲ್‌ ತೆರೆದು ನೋಡಿದರೆ, ಗೆಳೆಯರಿಂದ ಮೆಸೇಜ್‌ಗಳು ಬಂದಿದ್ದವು. ಜೊತೆಗೆ, ಯಾವುದೋ ಸ್ಕ್ರೀನ್‌ಶಾಟ್‌ ಕೂಡಾ ಇತ್ತು. ಕಣ್ಣುಜ್ಜುತ್ತಾ ಸರಿಯಾಗಿ ನೋಡಿದರೆ, ನನ್ನ ಹಾಸ್ಯ ಬರಹ “ವಿಶ್ವವಾಣಿ’ಯಲ್ಲಿ ಪ್ರಕಟವಾಗಿತ್ತು. ಲೇಖನದಲ್ಲಿದ್ದ ನನ್ನ ಫೋಟೋ ನೋಡಿ ನನಗಾದ ಸಂಭ್ರಮ ಹೇಳತೀರದ್ದು. ಭೂಮಿಯ ಮೇಲೆ ಕಾಲು ನಿಲ್ಲಲ್ಲ ಅಂತಾರಲ್ಲ, ಹಾಗೆ! ಗೆಳೆಯರಿಗೆಲ್ಲಾ ಹೇಳಿ ಬೀಗಿದ್ದೇ ಬೀಗಿದ್ದು. ಕೆಲಸಕ್ಕೆ ಹೋದ ಗಂಡನಿಗೆ, “ಬರುವಾಗ ಪೇಪರ್‌ ತರೋದು ಮರೀಬೇಡಿ’ ಅಂತ ಪದೇ ಪದೆ ಫೋನ್‌ ಮಾಡಿದ್ದೆ. ಅವರು ತಂದ ಪೇಪರ್‌ನಲ್ಲಿ ನನ್ನ ಬರಹವೇ ಇಲ್ಲ! ಆಘಾತದ ಜೊತೆಗೆ, ಇದು ಹೇಗೆ ಸಾಧ್ಯ ಎಂಬ ಗೊಂದಲ. ಮತ್ತೂಮ್ಮೆ ನೋಡಿದಾಗ ಗೊತ್ತಾಯ್ತು. ಬರಹ ಬಂದಿದ್ದು ಮಂಗಳೂರು ಆವೃತ್ತಿಯಲ್ಲಿ, ನನ್ನ ಗಂಡ ತಂದದ್ದು ಬೇರೆ ಆವೃತ್ತಿ. ಮಂಗಳೂರು ಆವೃತ್ತಿ ಸಿಗಬಹುದಾದ ಗೆಳೆಯರಿಗೆಲ್ಲ ಪೇಪರ್‌ ಕೇಳಿದೆನಾದರೂ ಸಿಗಲಿಲ್ಲ. ನನ್ನ ಮೊದಲ ಬರಹದ ಹಾರ್ಡ್‌ ಕಾಪಿ ಓದುವ ಭಾಗ್ಯ ನನಗೆ ಕೊನೆಗೂ ಸಿಗಲಿಲ್ಲ.
– ಕವಿತಾ ಭಟ್‌ ಕುಮಟಾ

ಮಗಳೇ ಜಾಸ್ತಿ ಖುಷಿಪಟ್ಟಳು
ನಾನು ಬರೆದ ಮೊದಲ ಬರಹ ಪ್ರಕಟವಾಗಿದ್ದು, ವಿಜಯಕರ್ನಾಟಕದ “ಬೋಧಿವೃಕ್ಷ’ದಲ್ಲಿ. ನಮ್ಮ ಊರಿನ (ಚಿಂತಲಪಲ್ಲಿ)ರಾಘವೇಂದ್ರ ಸ್ವಾಮಿ ಮಠದ ಬಗ್ಗೆ ಬರೆದ ಲೇಖನ ಅದು. ಪ್ರಕಟ ಮಾಡ್ತಾರೋ, ಇಲ್ಲವೋ ಅಂತ ಅನುಮಾನದಲ್ಲಿಯೇ ಕಳಿಸಿದ್ದು. ಪೇಪರ್‌ನಲ್ಲಿ ಹೆಸರು ನೋಡಿದಾಗ ಖುಷಿಯೋ ಖುಷಿ. ಕುಟುಂಬದವರು, ಸ್ನೇಹಿತರು ಕೂಡಾ ಅದನ್ನೋದಿ ಸಂತೋಷಪಟ್ಟರು. ಅದಾದ ನಂತರ, ಉದಯವಾಣಿಯ “ಚಿನ್ನಾರಿ’ಯಲ್ಲಿ ಮಕ್ಕಳ ಕಥೆಯೊಂದು ಪ್ರಕಟವಾಯ್ತು. ನನ್ನ ಮಗಳು, “ನಮ್ಮಮ್ಮ ಬರೆದಿದ್ದು, ನಮ್ಮಮ್ಮ ಬರೆದಿದ್ದು’ ಅಂತ ತನ್ನೆಲ್ಲಾ ಗೆಳತಿಯರಿಗೆ ಅದನ್ನು ಓದಿ ಹೇಳಿದಳು. ನನಗಿಂತ ಅವಳಿಗೇ ಹೆಚ್ಚು ಖುಷಿಯಾಗಿತ್ತು ಅವತ್ತು. ನೀವು ಬರೆದದ್ದನ್ನು ಇವತ್ತು ಪೇಪರ್‌ನಲ್ಲಿ ಓದಿದೆ, ಇಷ್ಟವಾಯ್ತು ಅಂತ ಕೆಲವರು ಮೆಸೇಜ್‌ ಮಾಡುತ್ತಾರೆ. ಆಗೆಲ್ಲಾ ಬಹಳ ಖುಷಿಯಾಗುತ್ತದೆ.
-ವೇದಾವತಿ ಎಚ್‌.ಎಸ್‌. ಬೆಂಗಳೂರು

Advertisement

ಮನೆಮಂದಿಯನ್ನೆಲ್ಲಾ ಕೂಗಿ ಕರೆದಿದ್ದೆ
ಅಪ್ಪ ಯಾವಾಗಲೂ ರವಿವಾರ ಪತ್ರಿಕೆಯ ಪುರವಣಿಯನ್ನು ಮೊದಲ ಪುಟದಿಂದ ಕೊನೆಯ ಪುಟದವರೆಗೂ ಓದಲು ಹೇಳುತ್ತಿದ್ದರು. ಇದು ಮುಂದೆ ಬರವಣಿಗೆಗೆ ಸಾಥ್‌ ನೀಡಿತು. ಜೊತೆಗೆ, ಅವ್ವ “ಬರೀ ಓದೋದಲ್ಲ, ನಿನ್ನ ವಿಚಾರಗಳನ್ನು ಬರೆದು ಪೇಪರ್‌ಗೆ ಕಳಿಸು, ಪೇಪರ್‌ನಲ್ಲಿ ನಿನ್ನ ಹೆಸರು ಬರಬೇಕು’ ಅಂತ ಹೇಳುತ್ತಿದ್ದಳು. ಅವರ ಮಾತಿನಿಂದ ಪ್ರೇರಿತಳಾಗಿ ಬರೆದ ಬರಹವೊಂದನ್ನು, ಕನ್ನಡಪ್ರಭದ ಕ್ಯಾಂಪಸ್‌ ಪುರವಣಿಗೆ ಕಳಿಸಿದ್ದೆ. ಪ್ರತಿದಿನವೂ, ಬರಹ ಪ್ರಕಟ ಆಗಿದೆಯೋ ಇಲ್ಲವೋ ಎಂದು ಚೆಕ್‌ ಮಾಡುತ್ತಿದ್ದೆ. ಕೊನೆಗೂ ಒಂದು ದಿನ, ನನ್ನ ಹೆಸರನ್ನು ಹೊತ್ತು ಪೇಪರ್‌ ಮನೆ ಬಾಗಿಲಿಗೆ ಬಂದಿತ್ತು. ಪೇಪರ್‌ ತೆರೆದು ನೋಡಿ, ಜೋರಾಗಿ ಕಿರುಚಿ ಅವ್ವ, ಅಕ್ಕ, ತಮ್ಮ, ವೈನಿ, ಮಾಮಾ ಎಲ್ಲರನ್ನೂ ಕರೆದಿದ್ದೆ. ಮೊದಲಿನಿಂದಲೂ ಏನು ಬರೆದರೂ ಅಕ್ಕ ಮತ್ತು ಸ್ನೇಹಿತರಾದ ರಾಧಿಕಾ, ಮನುಗೆ ಕಳಿಸುವುದು ರೂಢಿ. ಅವರು ಓದಿ, ಪ್ರೋತ್ಸಾಹಿಸುತ್ತಿದ್ದರು. ಬರಹ ಪ್ರಕಟವಾದಾಗ ಅವರೂ ಖುಷಿಪಟ್ಟರು. ನಾನಂತೂ, ಲೇಖನವನ್ನು ಪೇಪರ್‌ನಿಂದ ಕಟ್‌ ಮಾಡಿ ಅದೆಷ್ಟು ಬಾರಿ ನೋಡಿದೆನೋ ಲೆಕ್ಕವಿಲ್ಲ. ಬರಹದೊಂದಿಗೆ ಇದ್ದ ಸಾಂದರ್ಭಿಕ ಫೋಟೋ, ನನ್ನ ಹೆಸರು ಅಬ್ಟಾ! ಸಂತೋಷ ಅಂದ್ರೆ ಸಂತೋಷ.
-ಮಾಲಾ ಮ ಅಕ್ಕಿಶೆಟ್ಟಿ ಬೆಳಗಾವಿ

ಅಂದಿನ ಖುಷಿಯೇ ಈಗಲೂ ಆಗುತ್ತೆ…
ಅಪ್ಪ ಗಣಿತದ ಮೇಷ್ಟ್ರು, ಅಮ್ಮನಿಗೆ ಕಲೆ-ಸಾಹಿತ್ಯದಲ್ಲಿ ಅಷ್ಟಾಗಿ ಆಸಕ್ತಿ ಇರಲಿಲ್ಲ. ಹೀಗಾಗಿ, ಮನೆಯಲ್ಲಿ ಕಲೆ-ಸಾಹಿತ್ಯದ ಕಿಂಚಿತ್‌ ವಾತಾವರಣವೂ ಇರಲಿಲ್ಲ. ಆದರೆ, ಅಪ್ಪ ಅಮ್ಮನಿಗೆ, ಮಕ್ಕಳು ಏನೇ ಮಾಡಿದರೂ ಉತ್ತೇಜಿಸುವ ಮನಸಿತ್ತು. ಓದು ನನ್ನನ್ನು ಚಿಕ್ಕಂದಿನಿಂದಲೂ ಬೆನ್ನು ಹತ್ತಿ ಬಂದಿತ್ತು. ಪಿಯುಸಿಗೆ ಬಂದಾಗ ಕಾದಂಬರಿಗಳ ಹುಚ್ಚು ಹಿಡಿಯಿತು. ತೀರಾ ತಡವಾಗಿ ನಾನು ಪತ್ರಿಕೆಗೆ ಲೇಖನ ಕಳಿಸಲು ಶುರು ಮಾಡಿದ್ದು. ಆದರೆ ಯಾವ ಬರಹಗಳೂ ಪ್ರಕಟವಾಗಿರಲಿಲ್ಲ. 2008ರಲ್ಲಿ ಮೊದಲ ಬಾರಿಗೆ ನನ್ನದೊಂದು ಕವಿತೆ ಶಿಕ್ಷಣವಾರ್ತೆ ಪತ್ರಿಕೆಯಲ್ಲಿ ಪ್ರಕಟವಾಯ್ತು. ಆಗ ನನಗಾದ ಸಂಭ್ರಮ ಹೇಳತೀರದು… ಅದನ್ನು ಅದೆಷ್ಟು ಬಾರಿ ನೋಡಿದೆನೋ, ಓದಿದೆನೋ… ಸಿಕ್ಕ ಸಿಕ್ಕ ಎಲ್ಲರಿಗೂ ತೋರಿಸಿ ಖುಷಿಪಟ್ಟಿದ್ದೆ. ಅಪ್ಪ ಅಮ್ಮನಿಂದ ಮೆಚ್ಚುಗೆ ಪಡೆದಿದ್ದೆ. ಎಲ್ಲರಿಗೂ ಅದೊಂದು ಸಣ್ಣ ವಿಷಯವಾಗಿದ್ದರೂ ನನಗದು ಬಹುದೊಡ್ಡ ಸಾಧನೆಯೇ. ಅಲ್ಲಿಂದ ಪತ್ರಿಕೆಗಳಿಗೆ ಹೆಚ್ಚೆಚ್ಚು ಕಳಿಸಲು ಶುರುಮಾಡಿದೆ. ನಂತರ ಉದಯವಾಣಿ, ತುಷಾರವೂ ಸೇರಿದಂತೆ ಹಲವಾರು ಪತ್ರಿಕೆಗಳಿಗೆ ಬರೆದೆ. ಈಗಲೂ ನನ್ನ ಬರಹವೊಂದು ಪತ್ರಿಕೆಯಲ್ಲಿ ಪ್ರಕಟವಾದರೆ, ಆಗಿನ ಸಂಭ್ರಮವೇ ನನ್ನನ್ನಾವರಿಸಿಬಿಡುತ್ತದೆ..
-ಆಶಾಜಗದೀಶ್‌ 

ತುಷಾರದಿಂದ ಬಂತು ತುಂಬ ಪ್ರೀತಿಯ ಪತ್ರ
ಆಗ ನಾನು ಪಿಯುಸಿ ವಿದ್ಯಾರ್ಥಿನಿ. ನಾನು ಬರೆದ ನಗೆ ಲೇಖನ, “ಎಲ್ಲರಂಥವನಲ್ಲ ನನ್ನ ತಮ್ಮ…’ “ತುಷಾರ’ ಮಾಸಪತ್ರಿಕೆಯಲ್ಲಿ ಸ್ವೀಕೃತವಾಗಿದೆಯೆಂಬ ಪತ್ರ ಬಂತು. ಓದಿ ಯಾವ ಪರಿ ಸಂತೋಷವಾಗಿತ್ತೆಂದರೆ, ನಾನು ನೆಲದ ಮೇಲಿರಲಿಲ್ಲ! ಯಾವ ತಿಂಗಳಲ್ಲಿ ಪ್ರಕಟಗೊಳ್ಳುವುದೋ ಎಂಬ ಕಾತರ, ಕುತೂಹಲ. ಪ್ರತೀ ತಿಂಗಳೂ ಸಾರ್ವಜನಿಕ ಗ್ರಂಥಾಲಯದಲ್ಲಿ ತುಷಾರ ಬಂದೊಡನೆ ನೋಡುತ್ತಿ¨ªೆ. ಎರಡು ತಿಂಗಳ ನಂತರ ಬರಹ ಪ್ರಕಟವಾಗೇ ಬಿಟ್ಟಿತು!
ಎಷ್ಟು ಬಾರಿ ನೋಡಿದರೂ ತೃಪ್ತಿ ಇಲ್ಲ. ಹೌದು..ಅದು ನನ್ನದೇ ಹೆಸರು..! ಗೆಳತಿಯರಿಗೆ ಮೊದಲು ಹೇಳಿದೆ. ಕೆಲವು ಪತ್ರಿಕೆಗಳಿಗೆ ಲೇಖನಗಳನ್ನು ಕಳಿಸಿ, ಅದು ಸ್ವೀಕೃತವಾಗದೆ ವಾಪಸ್‌ ಬಂದಿದ್ದೂ ಇತ್ತು..ಹಾಗಾಗಿ ಇದೊಂದು ಮಹಾ ವಿಜಯ ನನ್ನ ಪಾಲಿಗೆ. ಗೌರವ ಪ್ರತಿ ಕೊಡುತ್ತಾರೋ ಅಥವಾ ನಾನೇ ಖರೀದಿಸಬೇಕೋ ಎಂಬ ಗೊಂದಲದಲ್ಲಿ, “ನೀವು ಗೌರವ ಪ್ರತಿ ಕಳಿಸುತ್ತೀರಿ ತಾನೇ?’ ಎಂದು ಪ್ರಶ್ನಿಸಿ ಒಂದು ಕಾರ್ಡ್‌ ಗೀಚಿಯೇ ಬಿಟ್ಟೆ, ತುಷಾರ ಸಂಪಾದಕರಿಗೆ! ಅವರು ಗೌರವ ಪ್ರತಿಯ ಜೊತೆ ಪತ್ರವೊಂದನ್ನೂ ಬರೆದು ಕಳಿಸಿಕೊಟ್ಟರು.

“ಇನ್ನೂ ವಿದ್ಯಾರ್ಥಿಯಾಗಿ ನಿಮ್ಮ ಕಸಿವಿಸಿ ಅರ್ಥವಾಗುತ್ತದೆ. ಪ್ರತೀ ಬರಹಗಾರರಿಗೂ ಗೌರವ ಪ್ರತಿ ಕಳಿಸಿಕೊಡುತ್ತೇವೆ. ನಿಮ್ಮ ಲೇಖನ ಚೆನ್ನಾಗಿತ್ತು. ಶುಭವಾಗಲಿ…’ ಎಂದು ಬರೆದಿದ್ದರು. ಆಗ “ತುಷಾರ’ ದ ಸಂಪಾದಕರಾಗಿದ್ದವರು, ಜನಪ್ರಿಯ ಹಾಸ್ಯ ಬರಹಗಾರರಾಗಿದ್ದ ಈಶ್ವರಯ್ಯನವರು! ನನ್ನ ಬಾಲಿಶ ವರ್ತನೆಗೆ ಈಗಲೂ ನಗು ಬರುತ್ತದೆ…
– ಸುಮನಾ ಮಂಜುನಾಥ್‌ ಬೆಂಗಳೂರು

ಸ್ಕೂಲ್‌ ಮ್ಯಾಗಜಿನ್‌ಲಿ ಹಾರುವ ತಟ್ಟೆ
ಅದು ಮಾರ್ಚ್‌ ತಿಂಗಳ ಒಂದು ದಿನ. ಬೇಸಿಗೆಯ ತಾಪ ತಡೆಯಲಾಗದೆ ಮನೆಯವರೆಲ್ಲಾ, ತೆರೆದ ಮಾಳಿಗೆಯಲ್ಲಿ ಮಲಗಿದ್ದೆವು. ನಾನು, ಅಕ್ಕ ಬೀಸಣಿಗೆ ಒದ್ದೆ ಮಾಡಿ ಗಾಳಿ ಬೀಸಿಕೊಳ್ಳುತ್ತಾ ನಕ್ಷತ್ರಗಳನ್ನು ಎಣಿಸುತ್ತಿದ್ದೆವು. ಹಾಗೇ ನೋಡುತ್ತಿರುವಾಗಲೇ ನಕ್ಷತ್ರದಂತೆ ಹೊಳಪಾಗಿದ್ದ ವಸ್ತುವೊಂದು ಎಡದಿಂದ ಬಲಕ್ಕೆ ರಭಸವಾಗಿ ಸುಂಯ್ಯನೆ ಜಾರಿ ಭೂಮಿಗೆ ಬಿತ್ತು! ಮಾಧ್ಯಮಿಕ ಶಾಲಾ ವಿದ್ಯಾರ್ಥಿನಿಯಾಗಿದ್ದ ನಾನು, ಸ್ಪಷ್ಟವಾಗಿ ಕಂಡ ಆ ಅಚ್ಚರಿ ಬಗ್ಗೆ ನಮ್ಮ ಸೈನ್ಸ್ ಮೇಡಂರನ್ನು ಕೇಳಲು, ತಕ್ಷಣವೇ ಪಕ್ಕದಲ್ಲಿದ್ದ ಪುಸ್ತಕದಲ್ಲಿ ಅದರ ಬಗ್ಗೆ ಬರೆದಿಟ್ಟೆ. ನನ್ನ ಊಹೆಯ ಪ್ರಕಾರ ಅದೊಂದು ಉಲ್ಕೆ ಅಥವಾ ಹಾರುವ ತಟ್ಟೆ. ಮರುದಿನ ಈ ಬರಹ ಓದಿದ ಅಪ್ಪ, “ಪ್ರಜಾವಾಣಿಗೆ ಕೊಡೋಣ. ಪ್ರಕಟವಾದಾಗ ಯಾರಾದರೂ ಉತ್ತರಿಸುತ್ತಾರೆ’ ಎಂದು ಹೇಳಿದ್ದಲ್ಲದೆ, ನನ್ನ ಕೈಬರಹದ ಪ್ರತಿಯನ್ನೇ ಪತ್ರಿಕಾ ಕಚೇರಿಗೂ ಕೊಟ್ಟು ಬಂದಿದ್ದರು. ಸುಮಾರು ಮೂರು ತಿಂಗಳ ಕಾಲ ಮೈಯೆಲ್ಲಾ ಕಣ್ಣಾಗಿ ಪ್ರತಿದಿನ ಪ್ರಜಾವಾಣಿ ನೋಡಿದ್ದೇ ಬಂತು..ಅದಂತೂ ಪ್ರಕಟವಾಗಲೇ ಇಲ್ಲ! ಇಷ್ಟರಲ್ಲಿ ವಿಷಯ ತಿಳಿದ ನಮ್ಮ ಸೈನ್ಸ್ ಟೀಚರ್‌, ಶಾಲೆಯ ಪತ್ರಿಕೆಯಲ್ಲಿ ಈ ಬರಹ ಪ್ರಕಟಿಸಿದರು. ಆಗ ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ. ಗೇಲಿ ಮಾಡುತ್ತಿದ್ದ ಸಹಪಾಠಿಗಳೂ ಹುಬ್ಬೇರಿಸುವಂತೆ ಮಾಡಿ ನನಗೆ ಪುಟ್ಟ ಲೇಖಕಿಯ ಪಟ್ಟ ಕೊಟ್ಟ ಮೊದಲ ಪ್ರಕಟಿತ ಬರಹ ನನಗೆಂದೂ ಆಪ್ತ.
– ಜಲಜಾ ರಾವ್‌ ಬೆಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next