ಬೆಂಗಳೂರು: ಬಹುಕೋಟಿ ಐಎಂಎ ವಂಚನೆ ಪ್ರಕರಣ ಸಂಬಂಧ ರಾಜ್ಯ ಸರ್ಕಾರದ ಸೂಚನೆ ಮೇರೆಗೆ ಶುಕ್ರವಾರ ಎಫ್ಐಆರ್ ದಾಖಲು ಮಾಡಿಕೊಂಡಿರುವ ಸಿಬಿಐ ಅಧಿಕಾರಿಗಳು ವಿಶೇಷ ತನಿಖಾ ದಳ (ಎಸ್‌ಐಟಿ)ದ ಮುಖ್ಯಸ್ಥರು ಹಾಗೂ ತನಿಖಾಧಿಕಾರಿಗಳನ್ನು ಭೇಟಿಯಾಗಿ ಪ್ರಕರಣ ಕುರಿತು ಮಾಹಿತಿ ಸಂಗ್ರಹಿಸಿದ್ದಾರೆ.
ವಂಚನೆ ಸಂಬಂಧ ಜೂನ್ 8 ರಂದು ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್ಐಆರ್ ಅನ್ನು ಆಧರಿಸಿ ಪ್ರಕರಣದ ಮಾಸ್ಟರ್ ಮೈಂಡ್ ಮನ್ಸೂರ್ ಖಾನ್, ಸಂಸ್ಥೆಯ ನಿರ್ದೇಶಕರು ಹಾಗೂ ಇತರರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಗುರುವಾರ ಮತ್ತು ಶುಕ್ರವಾರ ಎಸ್‌ಐಟಿ ಮುಖ್ಯಸ್ಥ ರವಿಕಾಂತೇಗೌಡ ಮತ್ತು ಡಿಸಿಪಿ ಎಸ್.ಗಿರೀಶ್ ಅವರನ್ನು ಭೇಟಿಯಾದ ಹೈದ್ರಾಬಾದ್ ಮತ್ತು ಬೆಂಗಳೂರು ಸಿಬಿಐ ಅಧಿಕಾರಿಗಳು ಕೆಲ ಗಂಟೆಗಳ ಕಾಲ ಚರ್ಚಿಸಿ, ಪ್ರಕರಣ ಕುರಿತು ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಸದ್ಯ ಮನ್ಸೂರ್ ಖಾನ್ ವಿರುದ್ಧ ಬೆಂಗಳೂರು ಹಾಗೂ ರಾಜ್ಯದ ವಿವಿಧೆಡೆ ಎಷ್ಟು ಪ್ರಕರಣಗಳು ದಾಖಲಾಗಿವೆ. ಇದುವರೆಗೂ ಎಷ್ಟು ಮಂದಿಗೆ ವಂಚನೆ ಮಾಡಲಾಗಿದೆ. ಎಷ್ಟು ಮಂದಿ ಹೂಡಿಕೆ ಮಾಡಿದ್ದರು, ಎಷ್ಟು ಮಂದಿಗೆ ಹಣ ಹಿಂದಿರುಗಿಸಲಾಗಿದೆ? ಆರೋ ಪಿಯ ಆಸ್ತಿ ಮೌಲ್ಯ ಸೇರಿ ಒಟ್ಟಾರೆ ಇದುವರೆಗಿನ ಪ್ರಕರಣದ ಮಾಹಿತಿಯನ್ನು ಹಂತ- ಹಂತವಾಗಿ ಸಿಬಿಐ ಅಧಿಕಾರಿಗಳು ಪಡೆದುಕೊಳ್ಳುತ್ತಿದ್ದಾರೆ. ಮಂಗಳವಾರದ ನಂತರವೂ ಮಾಹಿತಿ ಪಡೆದುಕೊಳ್ಳಲಿದ್ದಾರೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.
ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಜೂನ್ 8 ರಂದು ಶಿವಾಜಿನಗರದ ನಿವಾಸಿಯೊಬ್ಬರು ನೀಡಿದ ದೂರಿನ ಮೇರೆಗೆ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಐಎಂಎ ಸಮೂಹ ಸಂಸ್ಥೆಗಳ ಮುಖ್ಯಸ್ಥ ಮನ್ಸೂರ್ ಖಾನ್ ಹಾಗೂ ಸಂಸ್ಥೆಯ ನಿರ್ದೇಶಕರುಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಯಿತು. ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಎಚ್ಚೆತ್ತ ಸರ್ಕಾರ ಕೂಡಲೇ ಡಿಐಜಿ ಡಾ ಬಿ.ಆರ್.ರವಿಕಾಂತೇಗೌಡ ಮತ್ತು ಡಿಸಿಪಿ ಎಸ್.ಗಿರೀಶ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿತ್ತು.
ಕೂಡಲೇ ಕಾರ್ಯಪ್ರವೃತ್ತವಾದ ತಂಡ ಸಂಸ್ಥೆಯ ನಿರ್ದೇಶಕರು, ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಮನ್ಸೂರ್ ಖಾನ್ ಹಾಗೂ ವಂಚನೆಗೆ ಪರೋಕ್ಷ ಹಾಗೂ ಪ್ರತ್ಯಕ್ಷವಾಗಿ ಸಹಾಯ ಮಾಡಿದ ಆರೋಪದ ಮೇಲೆ ಇದುವರೆಗೂ ಸುಮಾರು 25ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದಾರೆ. ಹಾಗೆಯೇ, ಐಎಂಎ ಸಮೂಹ ಸಂಸ್ಥೆಗಳ ಮೇಲೆ ದಾಳಿ ನಡೆಸಿ ಕೋಟ್ಯಂತರ ರೂ.ನಗದು, ಚಿನ್ನಾಭರಣ, ವಜ್ರಾಭರಣಗಳು, ಔಷಧಿ, ಹಣದ ವಹಿವಾಟಿಗೆ ಕುರಿತ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.