Advertisement

Fire Crackers: ಪಟಾಕಿ ಲೈಸೆನ್ಸ್‌ ಅಸಲಿಯೋ, ನಕಲಿಯೋ?

08:13 AM Nov 09, 2023 | Team Udayavani |

ಬೆಂಗಳೂರು: ತಮಿಳುನಾಡಿನ ಗಡಿಭಾಗಕ್ಕೆ ಹೊಂದಿಕೊಂಡ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅತ್ತಿಬೆಲೆಯಿಂದ ಶುರುವಾದ ಪಟಾಕಿ ಅಕ್ರಮ ವಹಿವಾಟು ಇಡೀ ಬೆಂಗಳೂರು ನಗರ ವ್ಯಾಪಿಸಿದೆ.

Advertisement

ಅತ್ತಿಬೆಲೆಯ ಬಾಲಾಜಿ ಟ್ರೇಡರ್ಸ್‌ ಪಟಾಕಿ ಮಳಿಗೆ ಯಲ್ಲಿ ನಡೆದ ದುರಂತ ಇಡೀ ರಾಜ್ಯವನ್ನೇ ಬೆಚ್ಚಿಬೀಳಿ ಸಿತ್ತು. ಜತೆಗೆ ಸರ್ಕಾರ, ಪೊಲೀಸ್‌ ಇಲಾಖೆ, ಅಗ್ನಿ ಶಾಮಕದಳ, ಜಿಲ್ಲಾಡಳಿತದ ಕಾರ್ಯವೈಖರಿಯನ್ನು ಪ್ರಶ್ನಿಸುವಂತಾಗಿತ್ತು. ದುರಂತಕ್ಕೆ ಸಾಕ್ಷಿಯಾದ ಮಳಿಗೆ ಸೇರಿ ಕೆಲ ವ್ಯಾಪಾರಿಗಳು ಬೇಡಿಕೆ ಇಲ್ಲದ ದಿನಗಳಂದು ಹೆಚ್ಚು ಪಟಾಕಿ ಖರೀದಿಸಿ ದಾಸ್ತಾನು ಮಾಡಿ, ಬೇಡಿಕೆ ದಿನಗಳಂದು (ದೀಪಾವಳಿ ಮತ್ತು ಇತರೆ ಸಂದರ್ಭ) ಹೆಚ್ಚು ಲಾಭಕ್ಕೆ ಮಾರಾಟ ಮಾಡುತ್ತಿದ್ದಾರೆ. ಅದು ಅಕ್ರಮವಾಗಿ ಎಂಬುದು ಪತ್ತೆಯಾಗಿತ್ತು.

ಇದರ ಬೆನ್ನಲ್ಲೇ ನಗರ ಪೊಲೀಸ್‌ ವಿಭಾಗ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಕಟ್ಟೆಚ್ಚರ ವಹಿಸಿದ್ದು, ಜನವಸತಿ ಪ್ರದೇಶಗಳಲ್ಲಿ ಅಕ್ರಮ ಪಟಾಕಿ ದಾಸ್ತಾನು ಮಳಿಗೆ ಅಥವಾ ಗೋದಾಮುಗಳ ಮೇಲೆ ನಿರಂತರ ದಾಳಿ ನಡೆಸುತ್ತಿದೆ. ಪ್ರಮುಖವಾಗಿ ಚಾಮರಾಜಪೇಟೆ, ಬಳೇಪೇಟೆ, ನಗರ್ತಪೇಟೆ ಸೇರಿ ಪ್ರಮುಖ ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ. ಈ ಸಂದರ್ಭದಲ್ಲಿ ಕೆಲ ಮಳಿಗೆಗಳ ಮಾಲೀಕರು ನಕಲಿ ಪರವಾನಗಿ ಹೊಂದಿರುವುದು ಕಂಡುಬಂದಿದೆ.

ನಗರದ ಹಲವೆಡೆ ಮಳಿಗೆ ಹಾಗೂ ಗೋದಾಮು ಹೊಂದಿರುವ ವ್ಯಾಪಾರಿಗಳ ಬಳಿ ನಕಲಿ ಪರವಾನಗಿ ಪತ್ರಗಳಿವೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದಾಗ, ನಕಲಿ ಪತ್ರವನ್ನೇ ತೋರಿಸುತ್ತಾರೆ. ಪತ್ರ ಅಸಲಿಯೋ ಅಥವಾ ನಕಲಿಯೋ ಎಂಬುದನ್ನು ತಿಳಿಯಲು ಜಿಲ್ಲಾಧಿಕಾರಿ ಕಚೇರಿ ಹಾಗೂ ಸಂಬಂಧಪಟ್ಟ ಇಲಾಖೆಗೆ ಕಳುಹಿಸಿ ಖಾತ್ರಿಪಡಿಸಿಕೊಳ್ಳಬೇಕು. ಆದರೆ, ಸಮಯದ ಅಭಾವದಿಂದ ಅಧಿಕಾರಿಗಳು ಈ ಕೆಲಸ ಮಾಡುವುದಿಲ್ಲ ಎಂದು ಅಗ್ನಿಶಾಮಕ ದಳ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

50ಕ್ಕೂ ಹೆಚ್ಚು ಕಡೆ ದಾಳಿ: ನಗರ ಪೊಲೀಸರು ಇದುವರೆಗೂ 50ಕ್ಕೂ ಹೆಚ್ಚು ಕಡೆಗಳಲ್ಲಿ ದಾಳಿ ನಡೆಸಿದ್ದು, ಕೆಲ ಬುಕ್‌ಸ್ಟಾಲ್‌, ಪ್ರಾವ್ಹಿಜನ್‌ ಸ್ಟೋರ್‌ಗಳು, ಚಿಲ್ಲರೆ ವ್ಯಾಪಾರಿಗಳು ಅಕ್ರಮವಾಗಿ ಪಟಾಕಿ ದಾಸ್ತಾನು ಮಾಡಿರುವುದು ಬೆಳಕಿಗೆ ಬಂದಿದೆ. ದಾಳಿ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತದೆ. ನಿಯಮ ಮೀರಿದ ಮಳಿಗೆ ಮಾಲೀಕರ ವಿರುದ್ಧ ಸ್ಫೋಟಕ ವಸ್ತುಗಳ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಿಸಿ ಕಾನೂನು ಕ್ರಮಕೈಗೊಳ್ಳಲಾಗುತ್ತಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

Advertisement

ಹಳೇ ನಿಯಮಕ್ಕೆ ಗುಡ್‌ಬೈ: 20 ವರ್ಷಗಳ ಹಿಂದಿದ್ದ ಅವೈಜ್ಞಾನಿಕ ಮಳಿಗೆ ವಿನ್ಯಾಸ ಸೇರಿ ಕೆಲ ನಿಯಮಗಳಿಗೆ ವಿದಾಯ ಹೇಳಿ ಹೊಸ ನಿಯಮಗಳ ಜಾರಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹೊಸದಾಗಿ ಪಟಾಕಿ ಮಳಿಗೆ ವಿಸ್ತೀರ್ಣ ಎಷ್ಟಿರಬೇಕು? ಪಾರ್ಕಿಂಗ್‌ ಜಾಗ, ಎಷ್ಟು ಪ್ರಮಾಣದಲ್ಲಿ ಪಟಾಕಿ ದಾಸ್ತಾನು ಮಾಡಬೇಕು? ಒಂದು ಕಡೆ ಜನರು ಗುಂಪು ಸೇರದಂತೆ ಎಚ್ಚರಿಕೆ ವಹಿಸಬೇಕು.

ಪ್ರತಿ ಮಳಿಗೆಯಲ್ಲಿ ಅಗ್ನಿನಂದಕಗಳು ಇರಬೇಕು ಎನ್ನುವುದು ಸೇರಿ ಹತ್ತಾರು ನಿಯಮಗಳನ್ನು ಉಲ್ಲೇಖೀಸಿ ಹೊಸ ಪ್ರಸ್ತಾವನೆ ಕೊಡಲಾಗಿತ್ತು. ಜತೆಗೆ ಹೊಸದಾಗಿ ಪಟಾಕಿ ಮಳಿಗೆ ತೆರೆಯಲು ಅವಕಾಶ ನೀಡುವ ಮೈದಾನಗಳಲ್ಲಿ ಅಗ್ನಿಶಾಮಕ ವಾಹನಗಳನ್ನು ಕೊಡಲಾಗುತ್ತದೆ ಎಂದು ಅಗ್ನಿಶಾಮಕದಳ ಮತ್ತು ತುರ್ತು ಸೇವೆಗಳ ಇಲಾಖೆ ಡಿಜಿಪಿ ಕಮಲ್‌ಪಂತ್‌ ಹೇಳಿದರು.

ಆನ್‌ಲೈನ್‌ನಲ್ಲಿ ಪರವಾನಗಿ

ಪ್ರತಿ ವರ್ಷದಂತೆ ಈ ಬಾರಿಯೂ ಆನ್‌ ಲೈನ್‌ ಪರವಾನಗಿ ನೀಡಲಾಗುತ್ತದೆ. ಬಿಬಿಎಂಪಿ ಗುರುತಿಸಿರುವ 70ಕ್ಕೂ ಹೆಚ್ಚು ಸ್ಥಳಗಳಲ್ಲಿ ಪಟಾಕಿ ಮಳಿಗೆಗಳನ್ನು ತೆರೆಯಲು ಅವಕಾಶ ನೀಡಲಾಗಿದ್ದು, 5 ಸಾವಿರ ರೂ. ಅರ್ಜಿ ಶುಲ್ಕ ಹಾಗೂ 25 ಸಾವಿರ ರೂ. ಡಿಡಿ ಪಡೆದು ಅ. 7ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು.

ಅಕ್ರಮ ಪಟಾಕಿ ದಾಸ್ತಾನು ಮಳಿಗೆ ಅಥವಾ ಗೋದಾಮುಗಳ ಮೇಲೆ ನಿರಂತರವಾಗಿ ದಾಳಿ ನಡೆಸಲಾಗುತ್ತಿದೆ. ಸಿಸಿಬಿ ಹಾಗೂ ಸ್ಥಳೀಯ ಪೊಲೀಸರಿಗೆ ಈ ಬಗ್ಗೆ ಸೂಚಿಸಲಾಗಿದೆ. ದೀಪಾವಳಿ ಹಬ್ಬ ಮುಗಿಯುವವರೆಗೂ ಈ ಪ್ರಕ್ರಿಯೆ ನಿರಂತವಾಗಿ ನಡೆಯುತ್ತದೆ. ಅಕ್ರಮ ಪಟಾಕಿ ದಾಸ್ತಾನು ಮಾಡಿದವರ ಬಗ್ಗೆ ಸಾರ್ವಜನಿಕರು ಪೊಲೀಸ್‌ ಸಹಾಯವಾಣಿ ಅಥವಾ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಬಹುದು. ● ರಮನ್‌ ಗುಪ್ತಾ, ಹೆಚ್ಚುವರಿ ಪೊಲೀಸ್‌ ಆಯುಕ್ತರು, ಪೂರ್ವ ವಿಭಾಗ

-ಮೋಹನ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next