ಚಿಕ್ಕಬಳ್ಳಾಪುರ: ಪರಿಸರ ಸ್ನೇಹಿ ದೀಪಾವಳಿ ಆಚರಣೆ ಬಗ್ಗೆ ಹಲವು ಸಂಘ, ಸಂಸ್ಥೆಗಳು ಜನ ಜಾಗೃತಿ ಮೂಡಿಸುವುದರ ಜೊತೆಗೆ ಢಂಢಂ ಪಟಾಕಿ ಮಾರಾಟಕ್ಕೆ ಸರ್ಕಾರ ಹಲವು ಬಿಗಿ ಕ್ರಮಗಳನ್ನು ಕೈಗೊಂ ಡರೂ ಜಿಲ್ಲೆಯಲ್ಲಿ ಈ ಬಾರಿಯ ದೀಪಾವಳಿಯಂದು ನೆರೆಯ ಕೋಲಾರ ಬಿಟ್ಟರೆ ಚಿಕ್ಕ ಬಳ್ಳಾಪುರ ಅತ್ಯಧಿಕ ಶಬ್ದ ಮಾಲಿನ್ಯ ದಾಖ ಲಿಸಿದ ಅಪಕೀರ್ತಿಗೆ ಪಾತ್ರವಾಗಿದೆ.
ಹೌದು, ದೀಪಾವಳಿ ಹಬ್ಬದ ಆಸತತ ಮೂರು ದಿನಗಳ ಡೆಸಿಬಲ್ ಲೆಕ್ಕಚಾರದಲ್ಲಿ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಸಿ ಕ್ರೋಢೀಕರಿಸಿರುವ ಅಂಕಿ, ಅಂಶಗಳು ಉದಯವಾಣಿಗೆ ಲಭ್ಯವಾಗಿದು, ಜಿಲ್ಲೆಯಲ್ಲಿ ಕಳೆದ ವರ್ಷಕ್ಕಿಂತ ಜಿಲ್ಲೆಯಲ್ಲಿ ಹೆಚ್ಚು ಶಬ್ದಮಾಲಿನ್ಯ ದಾಖಲಾಗಿರುವುದು ದೃಢಪಟ್ಟಿದೆ. ನ.13 ರಂದು ದೀಪಾವಳಿ ಹಬ್ಬದ ವೇಳೆ ಸಿಡಿಸಿದ ಪಟಾಕಿಗಳ ಶಬ್ದ ಮಾಲಿನ್ಯದಲ್ಲಿ ಇಡೀ ರಾಜ್ಯಕ್ಕೆ ನೆರೆಯ ಕೋಲಾರ ಪ್ರಥಮ ಸ್ಥಾನದಲ್ಲಿದ್ದರೆ ಚಿಕ್ಕಬಳ್ಳಾಪುರ ಜಿಲ್ಲೆಯು ನ.13 ರಂದು ಎರಡನೇ ಸ್ಥಾನದಲ್ಲಿದೆ. ಇನ್ನೂ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು ಜಿಲ್ಲೆಯ ಜನ ವಸತಿ ಪ್ರದೇಶಗಳಲ್ಲಿ ದೀಪಾವಳಿ ಹಬ್ಬದಂದು ಉಂಟಾದ ಶಬ್ದವನ್ನು ಅಳತೆ ಮಾಡುವ ನಿಟ್ಟಿನಲ್ಲಿ ತನ್ನ ಶಬ್ದ ಮಾಪನ ಘಟಕದಲ್ಲಿ ದಾಖಲಾಗಿರುವ ಪ್ರಕಾರ 45 ರಿಂದ 55 ರಷ್ಟು ಇರಬೇಕಿದ್ದ ಡೆಸಿಬಲ್ ದೀಪಾವಳಿ ಹಬ್ಬದ ಆಚರಿಸಿದ ನ.11 ರಿಂದ 13ರ ವರೆಗೂ ಮೂರು ದಿನಗಳ ಕಾಲ ಸರಾಸರಿ ಬರೋಬ್ಬರಿ 74.8ರಷ್ಟು ಡೆಸಿಬಲ್ ದಾಖಲಾಗಿದೆ.
ಕಳೆದ ವರ್ಷದ (2022) ದೀಪಾವಳಿ ಹಬ್ಬದಂದು ಡೆಸಿಬಲ್ ಕೇವಲ 56.8 ರಷ್ಟು ಇತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶೇ.18 ರಷ್ಟು ಶಬ್ದ ಮಾಲಿನ್ಯ ಹೆಚ್ಚಳ ಕಂಡಿದೆ. ಠುಸ್ ಆದ ಹಸಿರು ಪಟಾಕಿ: ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ವಾಯು ಮಾಲಿನ್ಯದಲ್ಲಿ ತುಸು ಕಡಿಮೆಯಾದರೂ ಶಬ್ದ ಮಾಲಿನ್ಯದಲ್ಲಿ ಗಣನೀಯವಾಗಿ ಏರಿಕೆ ಕಂಡಿದೆ. ಆದರೆ ಜಿಲ್ಲೆಯಲ್ಲಿ ಪರಿಸರ ಸ್ನೇಹಿ ದೀಪಾವಳಿ ಆಚರಿಸುವ ದಿಕ್ಕಿನಲ್ಲಿ ಹಲವು ಸಂಘ, ಸಂಸ್ಥಗಳು, ಜಿಲ್ಲಾಡಳಿತ ಹಲವು ಕ್ರಮಗಳನ್ನು ವಹಿಸುವು ದರ ಜೊತೆಗೆ ಹಸಿರು ಪಟಾಕಿಗಳ ಮಾರಾಟಕ್ಕೆ ಆದೇಶಿಸಿ ದರೂ, ಜಿಲ್ಲೆಯಲ್ಲಿ ಮಾರ್ಗಸೂಚಿಗಳು ಸಮರ್ಪ ಕವಾಗಿ ಅನುಷ್ಠಾಗೊಳಿಸದಿರುವುದು ಎದ್ದು ಕಾಣುತ್ತಿದೆ.
ದೀಪಾವಳಿ ಆಚರಿಸಿದ 3 ದಿನಗಳ ಡೆಸಿಬಲ್ ವಿವರ: ಕಳೆದ ವರ್ಷ ನ.12 ರಂದು 54.3 ರಷ್ಟಿದ್ದ ಡೆಸಿಬಲ್ 2023 ರ ನ,12 ರಂದು 68.0 ರಷ್ಟು ದಾಖಲಾದರೆ 2022 ರ ನ.13 ರಂದು 54.9 ರಷ್ಟು ದಾಖಲಾಗಿದ್ದ ಡೆಸಿಬಲ್ 2023ರ ನ.13 ರಂದು 77.1ರಷ್ಟು ದಾಖಲಾಗಿದೆ. 2022 ರ ನ.14 ರಂದು 59.3 ರಷ್ಟಿದ್ದ ಡೆಸಿಬಲ್ 2023ರ ನ.14 ರಂದು 75.2 ರಷ್ಟು ದಾಖಲಾಗೊಂಡಿದೆಂದು ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ದೀಪಾವಳಿ ಹಬ್ಬದ ಮೂರು ದಿನಗಳ ಸಂದರ್ಭದಲ್ಲಿ ತನ್ನ ಶಬ್ದ ಮಾಲಿನ್ಯ ಮಾಪನ ಘಟಕದಲ್ಲಿ ದಾಖಲಾಗಿರುವ ಶಬ್ದಮಾಲಿನ್ಯ ಡೆಸಿಬಲ್ ವಿವರಗಳನ್ನು ಕ್ರೋಢೀಕರಿಸಿ ಪ್ರಕಟಿಸಿರುವ ವಿವರದಲ್ಲಿ ಸ್ಪಷ್ಟಪಡಿಸಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ದೀಪಾವಳಿ ಹಬ್ಬದಂದು ವಾಯು ಮಾಲಿನ್ಯ ಈ ವರ್ಷ ಸ್ವಲ್ಪ ಕಡಿಮೆ ಆಗಿದೆ. ಆದರೆ ಶಬ್ದ ಮಾಲಿನ್ಯದಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚು ಶಬ್ದ ಮಾಲಿನ್ಯ ಹಬ್ಬದ ಮೂರು ದಿನಗಳಂದು ದಾಖಲಾಗಿದೆ.
– ಸಿದ್ದೇಶ್ವರ್, ಪರಿಸರ ಮಾಲಿನ್ಯ ನಿಯಂತ್ರಣಾಧಿಕಾರಿ, ಪ್ರಾದೇಶಿಕ ಕಚೇರಿ ಚಿಕ್ಕಬಳ್ಳಾಪುರ.
– ಕಾಗತಿ ನಾಗರಾಜಪ್ಪ