Advertisement

ಕಾಳ್ಗಿಚ್ಚಿಗೆ ಕ್ಯಾಲಿಫೋರ್ನಿಯಾ ಪ್ಯಾರಡೈಸ್‌ ಭಸ್ಮ

06:00 AM Nov 11, 2018 | |

ಪ್ಯಾರಡೈಸ್‌ (ಅಮೆರಿಕ): ಅಮೆರಿಕದ ಕ್ಯಾಲಿಫೋರ್ನಿಯಾ ಪ್ರಾಂತ್ಯದ ಜನತೆ ಕಾಳ್ಗಿಚ್ಚಿನ ರೌದ್ರಾವತಾರಕ್ಕೆ ಕಂಗಾಲಾಗಿದ್ದಾರೆ. ಅಲ್ಲಿನ ಪ್ಯಾರಡೈಸ್‌ ಎಂಬ ಪಟ್ಟಣ ಬಹುತೇಕ ಸುಟ್ಟು ಹೋಗಿದೆ. ಇಲ್ಲಿನ ಮೂರು ಸ್ಥಳಗಳಲ್ಲಿ ಸಂಭವಿಸಿದ ಕಾಳ್ಗಿಚ್ಚಿನಿಂದ 9 ಮಂದಿ ಅಸುನೀಗಿದ್ದು, 35 ಮಂದಿ ನಾಪತ್ತೆಯಾಗಿದ್ದಾರೆ. ವೆಂಚುರಾ ಮತ್ತು ಲಾಸ್‌ ಏಂಜಲೀಸ್‌ ಸಹಿತ ಹಲವಾರು ಸ್ಥಳಗಳ 3 ಲಕ್ಷಕ್ಕೂ ಅಧಿಕ ಮಂದಿಯನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ಈ ಪೈಕಿ ಹಾಲಿವುಡ್‌ನ‌ ಪ್ರಮುಖ ಗಣ್ಯರೂ ಸೇರಿದ್ದಾರೆ.

Advertisement

ಗುರುವಾರ ಬೆಳಗ್ಗಿನಿಂದ ಈ ಸಮಸ್ಯೆ ತಲೆದೋರಿದ್ದು, ಈ ವರೆಗೆ 90 ಸಾವಿರ ಎಕರೆ ಪ್ರದೇಶ ಬೆಂಕಿಗೆ ಆಹುತಿಯಾಗಿದೆ. “ಕ್ಯಾಂಪ್‌ ಫೈರ್‌’ ಎಂಬ ಕಿಚ್ಚಿನ ಪ್ರಕೋಪಕ್ಕೆ ಉತ್ತರ ಕ್ಯಾಲಿಫೋರ್ನಿಯಾದ ರಾಜಧಾನಿ ಸಾಕ್ರಮೆಂಟೋದಿಂದ ಉತ್ತರ ಭಾಗದಲ್ಲಿರುವ ಪ್ಯಾರಡೈಸ್‌ ಪಟ್ಟಣದ ಶೇ. 90ರಷ್ಟು ಪ್ರದೇಶ ಹಾಗೂ ಅಲ್ಲಿರುವ ಮನೆಗಳೂ ಬೆಂಕಿಗೆ ಆಹುತಿಯಾಗಿವೆ. ಹೆಚ್ಚಾ ಕಡಿಮೆ 27 ಸಾವಿರ ಮಂದಿ ವಾಸವಿರುವ ಈ ನಗರದಲ್ಲಿನ ಬಹುತೇಕ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.ಹಲವಾರು ಆಸ್ಪತ್ರೆಗಳು, ಪೆಟ್ರೋಲ್‌ ಬಂಕ್‌ಗಳು ಉರಿದು ಭಸ್ಮವಾಗಿವೆ. ಬ್ಯೂಟ್‌ ಕೌಂಟಿ ಪಟ್ಟಣದ ಶೇ.90 ಮನೆ, ವಾಣಿಜ್ಯ ಮಳಿಗೆಗಳು ಬೆಂಕಿಗೆ ಆಹುತಿಯಾಗಿವೆ.

ಶುಕ್ರವಾರ ಒಂದೇ ದಿನ 6,453 ಮನೆಗಳು, 260 ವಾಣಿಜ್ಯ ಮಳಿಗೆಗಳು ಸುಟ್ಟು ಕರಕಲಾಗಿವೆ. ಹೀಗಾಗಿ ಈ ಘಟನೆಯನ್ನು ಕ್ಯಾಲಿಫೋರ್ನಿಯಾ ಪ್ರಾಂತ್ಯದ ಇತಿಹಾಸದಲ್ಲಿಯೇ ಅತ್ಯಂತ ಭೀಕರ ದುರ್ಘ‌ಟನೆ ಎಂದು ಬಣ್ಣಿಸಲಾಗಿದೆ. 2017ರ ಅಕ್ಟೋಬರ್‌ನಲ್ಲಿ ಉಂಟಾಗಿದ್ದ ಭೀಕರ ಅಗ್ನಿ ದುರಂತದಲ್ಲಿ 5,636 ಮನೆಗಳು, ವಾಣಿಜ್ಯ ಮಳಿಗೆಗಳು ಬೆಂಕಿಗೆ ಆಹುತಿಯಾಗಿದ್ದವು.

ಈ ವಾರಾಂತ್ಯದಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಡಲಿದೆ ಎಂದು ಹವಾಮಾನ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಗಂಟೆಗೆ 60 ಕಿ.ಮೀ. ವೇಗದಲ್ಲಿ ಗಾಳಿಯೂ ಬೀಸಿದ್ದರಿಂದ ಕಾರ್ಯಾಚರಣೆಗೆ ಅವಕಾಶವೇ ಇಲ್ಲದಂತೆ ಬೆಂಕಿ ವೇಗವಾಗಿ ವ್ಯಾಪಿಸಿದೆ. ಪ್ರಸ್ತುತ ಇದು ಕ್ಯಾಲಿಫೋರ್ನಿಯಾ ರಾಜಧಾನಿ ಸಾಕ್ರಮೆಂಟೋದತ್ತ ಧಾವಿಸುತ್ತಿದೆ. ಅದೃಷ್ಟವಶಾತ್‌ ದಕ್ಷಿಣ ಪ್ರದೇಶದಲ್ಲಿ ಉಂಟಾಗಿರುವ ಅಗ್ನಿ ಅನಾಹುತದಲ್ಲಿ ಜೀವ ಹಾನಿಯಾಗಿಲ್ಲ. ಅಗ್ನಿ ಶಾಮಕ ದಳದ 2 ಸಾವಿರಕ್ಕೂ ಅಧಿಕ ಸಿಬಂದಿ ಬೆಂಕಿ ನಂದಿಸಲು ಶ್ರಮಿಸುತ್ತಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಿ ಪರಿಸ್ಥಿತಿ ಅವಲೋಕನ ನಡೆಸಿದ್ದಾರೆ.

ಬೆಂಕಿ ಶುರುವಾಗಿದ್ದೆಲ್ಲಿ?
ಕೇಂದ್ರ ಲಾಸ್‌ ಏಂಜಲೀಸ್‌ನಿಂದ 64 ಕಿ.ಮೀ. ದೂರದ ವಾಯವ್ಯ ಭಾಗದಲ್ಲಿರುವ ಥೌಸೆಂಡ್‌ ಓಕ್ಸ್‌ ಎಂಬಲ್ಲಿ ಗುರುವಾರ ಮೊದಲು ಬೆಂಕಿ ಕಾಣಿಸಿಕೊಂಡಿತ್ತು. ಮತ್ತೂಂದು ಬೆಂಕಿಯ ಪ್ರಕರಣ ಥೌಸೆಂಡ್‌ ಓಕ್ಸ್‌ ಸಮೀಪದಲ್ಲಿಯೇ ಗೋಚರಿಸಿತ್ತು. 

Advertisement

ಉರಿಯುವ ಜ್ವಾಲೆ ನಂದಿಸಲು ಭದ್ರತಾ ಸಿಬಂದಿ ಹರಸಾಹಸ
2 ಲಕ್ಷ ಕ್ಯಾಲಿಫೋರ್ನಿಯಾ ಪ್ರಾಂತ್ಯದಿಂದ ರಕ್ಷಿಸಲಾಗಿರುವವರ ಸಂಖ್ಯೆ
03 ಇಷ್ಟು ಸ್ಥಳಗಳಲ್ಲಿ ಕಾಣಿಸಿಕೊಂಡಿದೆ ಬೆಂಕಿ
35 ಇಷ್ಟು ಮಂದಿ ನಾಪತ್ತೆಯಾಗಿ ರುವವರು 
90  ಸಾವಿರ ಎಕರೆ  ಬ್ಯೂಟಿ ಕೌಂಟಿ ಯಲ್ಲಿ ಉರಿದ  ಪ್ರದೇಶ
40  ಸಾವಿರ ಎಕರೆ  ದ.ಕ್ಯಾಲಿಫೋರ್ನಿಯಾದಲ್ಲಿ ಉರಿದು ಹೋದ ಪ್ರದೇಶ

Advertisement

Udayavani is now on Telegram. Click here to join our channel and stay updated with the latest news.

Next