Advertisement

ಕಾಳ್ಗಿಚ್ಚು: ತಡೆಗಟ್ಟಲು ಅರಣ್ಯ ಇಲಾಖೆ ಸಜ್ಜು

01:00 AM Feb 26, 2019 | Harsha Rao |

ಉಡುಪಿ: ರಾಜ್ಯದ ವಿವಿಧೆಡೆ ಅರಣ್ಯ ಪ್ರದೇಶಗಳಿಗೆ ಬೆಂಕಿ ತಗುಲಿ ಅಪಾರ ಹಾನಿಯುಂಟಾಗುತ್ತಿದೆ. ಉಡುಪಿ ಜಿಲ್ಲೆಯಲ್ಲಿ ಕುಂದಾಪುರ ಮತ್ತು ಕಾರ್ಕಳ ತಾಲೂಕಿನಲ್ಲಿ ದಟ್ಟ ಅರಣ್ಯ ಪ್ರದೇಶಗಳಿದ್ದು, ಇಲ್ಲಿ ಬೆಂಕಿ ಅನಾಹುತಗಳಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕುಂದಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್‌ ಮತ್ತು  ಕುದ್ರೆಮುಖ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ರುದ್ರನ್‌ ಹೇಳಿದ್ದಾರೆ. 

Advertisement

– ರಸ್ತೆ ಬದಿ ಬೆಳೆದ ಗಿಡ, ಹುಲ್ಲುಗಳಿಂದ ಸಾಮಾನ್ಯವಾಗಿ ಬೆಂಕಿ ಹರಡುತ್ತದೆ. ಇದಕ್ಕಾಗಿ ವಿವಿಧ ಕಡೆಗಳಲ್ಲಿ ಸುಮಾರು ಒಂದೂವರೆ ಮೀ. ಅಗಲದಲ್ಲಿ ಹುಲ್ಲುಗಳನ್ನು ಕಟಾವು ಮಾಡಿ ಸುಡಲಾಗಿದೆ. ಒಂದು ವೇಳೆ ಬೆಂಕಿ ತಗಲಿದರೂ ವಿಸ್ತರಿಸದಂತೆ ಇದು ತಡೆಯುತ್ತದೆ. 

– ಅಗ್ನಿ ದುರಂತ ನಡೆದರೆ ಅದನ್ನು ತಡೆಗಟ್ಟುವ ಉಪಕರಣಗಳನ್ನೂ ಸಜ್ಜುಗೊಳಿಸಲಾಗಿದೆ. ಇವುಗಳನ್ನು ಪ್ರತಿ ವಲಯದಲ್ಲಿ ಸುಸ್ಥಿತಿಯಲ್ಲಿಡಲಾಗಿದೆ. ಇದರ ಜತೆ ರಬ್ಬರ್‌ನಿಂದ ತಯಾರಿಸಲಾದ ಫ‌ಯರ್‌ ಬೀಟರ್‌ಗಳನ್ನು ಬಳಸಲಾಗುತ್ತದೆ. ಇದು ಹಳೆಯ ಕ್ರಮ. 

– ಅಗ್ನಿಶಾಮಕ ಇಲಾಖೆಯೊಂದಿಗೆ ಅರಣ್ಯ ಇಲಾಖೆ ನಿರಂತರ ಸಂಪರ್ಕದಲ್ಲಿದ್ದು, ಅಗತ್ಯವಿದ್ದಾಗ ಬಳಸಿಕೊಳ್ಳಲಾಗುತ್ತದೆ.

– ಕುದುರೆಮುಖ ವನ್ಯಜೀವಿ ವಿಭಾಗದಿಂದ ಅಗ್ನಿ ದುರಂತದ ಬಗ್ಗೆ ಜನಜಾಗೃತಿಗೊಳಿಸುವ ಕ್ರಮ ನಡೆಯುತ್ತಿದೆ. ಶಾಲಾ ಕಾಲೇಜುಗಳಲ್ಲಿ, ಸಾರ್ವಜನಿಕರು ಸೇರುವ ಸ್ಥಳದಲ್ಲಿ ಹುಲ್ಲುಗಾವಲಿಗೆ ಬೆಂಕಿ ಕೊಟ್ಟರೆ ಆಗುವ ತೊಂದರೆಗಳ ಬಗೆಗೆ ತಿಳಿ ಹೇಳಲಾಗುತ್ತಿದೆ. ಹುಲ್ಲುಗಾವಲಿಗೆ ಬೆಂಕಿ ಹಾಕಿದರೆ ಮುಂದಿನ ವರ್ಷ ಹೊಸ ಹುಲ್ಲು ಸಿಗುತ್ತದೆ ಎಂಬ ಕಲ್ಪನೆ ಇದೆ. ಆದರೆ ಈಗಿನ ಹುಲ್ಲುಗಾವಲನ್ನು ಹಾಗೆಯೇ ಬಿಟ್ಟರೆ ಸುಮಾರು 250 ವರ್ಷಗಳ ಬಳಿಕ ಇದು ಕಾಡಾಗಿ ಪರಿವರ್ತನೆಯಾಗುತ್ತದೆ. ಆದ್ದರಿಂದ ಮುಂದಿನ ಕಾಡನ್ನು ಈಗಲೇ ಬೆಂಕಿ ಹಾಕಿ ನಾಶ ಮಾಡಬೇಡಿ ಎಂದು ಜನರಿಗೆ ತಿಳಿವಳಿಕೆ ನೀಡಲಾಗುತ್ತಿದೆ. 

Advertisement

– ಎಲ್ಲಿಯೇ ಕಾಡಿನಲ್ಲಿ ಹೊಗೆ ಕಾಣಿಸಿದರೂ ಅದನ್ನು ಗುರುತಿಸಿ ಅದನ್ನು ನಿಯಂತ್ರಿಸಲು ಸಿಬಂದಿ ಸಜ್ಜಾಗಿದ್ದಾರೆ. ಅಗ್ನಿಶಾಮಕ ಇಲಾಖೆಯಲ್ಲಿರುವಂತೆ ವಾಟರ್‌ ಸ್ಪ್ರೆàಯರ್‌ ಯಂತ್ರವನ್ನು ಸಜ್ಜುಗೊಳಿಸಿಕೊಂಡಿದ್ದಾರೆ. 

– ಈಗ ಮಂಗನ ಕಾಯಿಲೆ ಎಚ್ಚರಿಕೆಯಿಂದ ಪ್ರವಾಸೀ ತಾಣಗಳಿಗೆ ನಿರ್ಬಂಧ ಹೇರಲಾಗಿದೆ. ಬೀಡಿ ಸಿಗರೇಟು ಸೇದಿ ಬೆಂಕಿ ನಂದಿಸದೆ ಹಾಗೆಯೇ ಹುಲ್ಲುಗಾವಲಿನ ಮೇಲೆ ಹಾಕಿ ಅದು ಅಗ್ನಿ ಅನಾಹುತಕ್ಕೆ ಕಾರಣವಾಗುವುದನ್ನು ತಡೆಗಟ್ಟುವುದೂ ಪ್ರವಾಸಿ ತಾಣಗಳ ಭೇಟಿ ನಿಷೇಧಕ್ಕೆ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next