Advertisement

ಬಾಚೇನಹಟ್ಟಿ ಬಳಿ ರಾತ್ರೋರಾತ್ರಿ ತ್ಯಾಜ್ಯಕ್ಕೆ ಬೆಂಕಿ

02:16 PM Jul 20, 2019 | Suhan S |

ಮಾಗಡಿ: ಬೆಂಗಳೂರಿನ ಕಾರ್ಖಾನೆಯ ತ್ಯಾಜ್ಯವನ್ನು ಮಾಗಡಿ – ಬೆಂಗಳೂರು ರಸ್ತೆಯ ಬಾಚೇನಹಟ್ಟಿ ಬಳಿಯ ಜಮೀನಿನಲ್ಲಿ ಗ್ಲಾಸ್‌ ಫೈಬರ್‌ ತ್ಯಾಜ್ಯ ಸುರಿದು ಬೆಂಕಿ ಹಚ್ಚುತ್ತಿರುವುದರಿಂದ ಸಮಸ್ಯೆಗಳು ಹೆಚ್ಚಾಗುತ್ತಿವೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ತಾಲೂಕಿನ ಕಸಬಾ ಹೋಬಳಿಯ ಬಾಚೇನಹಟ್ಟಿ ಬಳಿಯ ರಸ್ತೆ ಪಕ್ಕದಲ್ಲಿರುವ ಜಮೀನಿನಲ್ಲಿ ರಾತ್ರೋರಾತ್ರಿ ಮೂರು ಟಿಪ್ಪರ್‌ ಲಾರಿಯಷ್ಟು ಗ್ಲಾಸ್‌ ಫೈಬರ್‌ ತ್ಯಾಜ್ಯವನ್ನು ತಂದು ಸುರಿದಿದ್ದು, ಅದಕ್ಕೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಫೈಬರ್‌ ಬೆಂಕಿಯಲ್ಲಿ ಬೆಂದ ಕಾರಣ ಸುತ್ತಮುತ್ತಲ ಸುಮಾರು ಎರಡು ಕಿಲೋ ಮೀಟರ್‌ ವ್ಯಾಪ್ತಿಯಲ್ಲಿ ದುರ್ವಾಸನೆ ಹರಡಿದೆ ಎಂಬ ಆರೋಪಗಳು ಕೇಳಿ ಬರಿತ್ತಿವೆ.

ತ್ಯಾಜ್ಯ ವಿಲೇವಾರಿ ತಡೆಗೆ ಕ್ರಮ ಕೈಗೊಳ್ಳಿ: ಪ್ಲಾಸ್ಟಿಕ್‌ ಕಣಗಳು ಗಾಳಿಗೆ ತೂರಿ ಜಮೀನಿನಲ್ಲಿ ಬೆಳೆದಿರುವ ಫಸಲಿಗೆ ಹಾಗೂ ಗಿಡ ಮರಗಳ ಮೇಲೆ ಹರಡಿದೆ. ಪ್ಲಾಸ್ಟಿಕ್‌ ಲೇಪಿತ ರಾಗಿ, ತರಕಾರಿ, ಹಣ್ಣು ಹಂಪಲುಗಳನ್ನು ಸೇವಿಸುವುದರಿಂದ ಮನುಷ್ಯರಿಗೆ ಹಾಗೂ ಜನುವಾರುಗಳಿಗೆ ಹಲವಾರು ರೋಗ ರುಜೀನಗಳು ಬರುತ್ತಿವೆ. ಇದರಿಂದ ಸಂಬಂಧಪಟ್ಟ ಅಧಿಕಾರಿಗಳು ರೈತರ ಜಮೀನಿನಲ್ಲಿ ಕಾರ್ಖಾನೆಗಳ ತ್ಯಾಜ್ಯ ಹಾಕುವುದನ್ನು ತಡೆಗಟ್ಟುವುದರ ಜೊತೆಗೆ ತ್ಯಾಜ್ಯ ವಿಲೇವಾರಿ ಮಾಡುವವರ ವಿರುದ್ಧ ಸೂಕ್ತ ರೀತಿಯ ಕಾನೂನು ಕ್ರಮ ಕೈಗೊಳ್ಳಬೇಕಾಗಿದೆ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಜಲಾಶಯಕ್ಕೆ ಕಲುಷಿತ ನೀರು ಸೇರ್ಪಡೆ: ಗ್ಲಾಸ್‌ ಫೈಬರ್‌ ಬೆಂಕಿಯಲ್ಲಿ ಕರಗದೇ ಧೂಳಿನ ಕಣಗಳು ಗಾಳಿಯಲ್ಲಿ ಹಾರಡುತ್ತದೆ. ಉಸಿರಾಟದ ಮೂಲಕ ಇದನ್ನು ಸೇವಿಸುವ ಮನುಷ್ಯರಿಗೆ ಕ್ಯಾನ್ಸರ್‌, ಆಸ್ತಮದಂತಹ ರೋಗಗಳು ಬರುತ್ತದೆ. ಫೈಬರ್‌ ತ್ಯಾಜ್ಯವನ್ನು ನೀರು ಹರಿಯುವ ಕಾಲುವೆಯ ಬಳಿ ಸುರಿಯುವುದರಿಂದ ಕಾಲುವೆಯಲ್ಲಿ ಕಲುಷಿತ ನೀರು ಹರಿದು ಮಂಚನಬೆಲೆ ಜಲಾಶಯ ಸೇರುತ್ತದೆ. ಈ ನೀರನ್ನೇ ಮಾಗಡಿ ಪಟ್ಟಣದ ಜನತೆ ಕುಡಿಯುವ ಪರಿಸ್ಥಿತಿ ಇದೆ ಎಂದು ಸ್ಥಳೀಯ ನಿವಾಸಿ ರಾಜೀವ್‌ ಆತಂಕ ವ್ಯಕ್ತಪಡಿಸಿದ್ದಾರೆ.

ವಿದ್ಯಾರ್ಥಿಗಳಿಗೆ ತಲೆ ನೋವು: ಫೈಬರ್‌ ಗ್ಲಾಸ್‌ ತ್ಯಾಜ್ಯ ಬೆಂಕಿಯಲ್ಲಿ ಬೇಯುವ ವಾಸನೆಯಿಂದ ಅಕ್ಕಪಕ್ಕದಲ್ಲಿರುವ ಶಾಲೆಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ತಲೆ ನೋವಿನಿಂದ ನರಳುತ್ತಿದ್ದು, ತ್ಯಾಜ್ಯ ಸುರಿಯುವುದರಿಂದ ಬಹಳಷ್ಟು ಸಮಸ್ಯೆಗಳಾಗುತ್ತಿರುವುದರಿಂದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next