Advertisement

Firefly: ಜೋಕೆ…  ನಾನು ಹಾದಿಯ ಮಿಂಚು!

03:35 PM Sep 17, 2023 | Team Udayavani |

ರಾತ್ರಿ ವೇಳೆಯಲ್ಲಿ ಹೊರಗಡೆ ಹೋದಾಗ ಅಲ್ಲಲ್ಲಿ ಬೆಳಕು ಮಿಂಚುವುದನ್ನು ನೋಡುತ್ತೇವೆ. ಕೆಲವೆಡೆ ಕಾಡಿನ ಹಾದಿಯಲ್ಲಿ ಸಾಗುವಾಗ, ಇಡೀ ಮರಕ್ಕೇ ದೀಪಾಲಂಕಾರ ಮಾಡಿದ್ದಾರೇನೋ ಎನ್ನುವಷ್ಟು ಬೆಳಕು ಮಿನುಗುತ್ತಿರುತ್ತದೆ. ಕಾಡಿನಲ್ಲಿ ಹೀಗೆ ಟಾರ್ಚ್‌ ಬಿಡುವವರು ಯಾರೆಂದು ನೋಡಿದರೆ, ಅದು ಒಂದು ರೀತಿಯ ಹುಳುಗಳು ಸೃಷ್ಟಿಸುವ ಬೆಳಕಿನ ಚಿತ್ತಾರ. ಕೆಲವೊಮ್ಮೆ ಕಗ್ಗತ್ತಲ ರಾತ್ರಿಯಲ್ಲಿ ನಡೆದು ಬರುವಾಗಲೂ ದಾರಿಯುದ್ದಕ್ಕೂ ಮಿಣಮಿಣ ದೀಪಗಳಂತೆ ಬೆಳಕು ಹೊಳೆಯುವುದುಂಟು. ಹೀಗೆ ಬೆಳಕು ಹೊರಸೂಸುವ ಹುಳುಗಳನ್ನು “ಮಿಂಚು ಹುಳುಗಳು’ ಎಂದು ಕರೆಯುತ್ತೇವೆ.

Advertisement

“ಮಿಂಚುಹುಳು’ಗಳು “ಲ್ಯಾಂಪಿರಿಡೆ’ ಎಂಬ ಕೀಟಗಳ, “ಕೊಲಿಯೋಪ್ಟೆರ’ ಕುಟುಂಬಕ್ಕೆ ಸೇರಿವೆ. ಇವು ರೆಕ್ಕೆಯಿರುವ ಒಂದು ರೀತಿಯ ಜೀರುಂಡೆಗಳು. ಇವುಗಳನ್ನೇ ಕನ್ನಡದಲ್ಲಿ “ಮಿಂಚುಹುಳು’ ಎಂದೂ, ತುಳುವಿನಲ್ಲಿ “ಮೆಣ್ಣಂಪುರಿ’ ಎಂದೂ ಕರೆಯುತ್ತಾರೆ. ಇವುಗಳಿಗೆ “ಮಿಣುಕು ಹುಳು’ ಎಂಬ ಹೆಸರೂ ಇದೆ. ಸುಮಾರು 2,000 ಜಾತಿಯ ಮಿಂಚು ಹುಳುಗಳು ಈ ಭೂಮಿಯಲ್ಲಿ ಇವೆ ಎನ್ನಲಾಗಿದೆ.

ಬೆಳಕು ಹೇಗೆ ಉತ್ಪತ್ತಿ ಆಗುತ್ತದೆ?:

ಈ ಹುಳುಗಳು ತಣ್ಣನೆಯ ಬೆಳಕನ್ನು ಹೊರಸೂಸುತ್ತವೆ. ಇದರಲ್ಲಿ ಯಾವುದೇ ಅತಿಗೆಂಪು ಅಥವಾ ನೇರಳಾತೀತ ಕಿರಣಗಳು ಇರುವುದಿಲ್ಲ. ಇವುಗಳ ಹೊಟ್ಟೆಯ ಕೆಳಭಾಗದಿಂದ ಉತ್ಪತ್ತಿಯಾಗುವ ಈ ಬೆಳಕು ಹಳದಿ, ಹಸಿರು ಅಥವಾ ತಿಳಿಗೆಂಪು ಇರುತ್ತದೆ. ಇವುಗಳು ಬೆಳಕನ್ನು ಸೂಸಲು ಮುಖ್ಯ ಕಾರಣವೆಂದರೆ “ಲ್ಯೂಸಿಫೆರಿನ್‌’ ಎಂಬ ರಾಸಾಯನಿಕ ವಸ್ತು. “ಲ್ಯೂಸಿಫೆರೇಸ್‌’ ಕಿಣ್ವವು ಮೆಗ್ನಿàಶಿಯಮ…, ಎ.ಟಿ.ಪಿ (ಅಡಿನೋಸಿನ್‌ ಟ್ರೈ ಫಾಸ್ಪೇಟ್‌), ಆಮ್ಲಜನಕ ಮತ್ತು ಲ್ಯೂಸಿಫೆರಿನ್‌ ಮೇಲೆ ಪ್ರಭಾವ ಬೀರಿ, ಬೆಳಕನ್ನು ಉತ್ಪತ್ತಿ ಮಾಡುತ್ತದೆ. ಹೀಗೆ ಉತ್ಪತ್ತಿಯಾಗುವ ಬೆಳಕು ಹಳದಿ, ಹಸಿರು ಮತ್ತು ತಿಳಿಗೆಂಪು ಬಣ್ಣವಿರುತ್ತದೆ.

ಮೃದು ದೇಹದ ಜೀವಿ:

Advertisement

ಮಿಂಚುಹುಳುಗಳು ಕಂದು ಬಣ್ಣದ ಮೃದುವಾದ ದೇಹವನ್ನು ಹೊಂದಿರುತ್ತವೆ. ಇವುಗಳ ರೆಕ್ಕೆಗಳು ಜೀರುಂಡೆಗಳ ರೆಕ್ಕೆಗಳಿಗಿಂತ ಒರಟಾಗಿರುತ್ತವೆ. ಗಂಡು ಮತ್ತು ಹೆಣ್ಣು ಹುಳುಗಳು ಮಿಲನದ ನಂತರ ಮೊಟ್ಟೆಯನ್ನು ನೆಲದ ಮೇಲೆ ಅಥವಾ ನೆಲದ ಕೆಳಗೆ ಇಡುತ್ತವೆ. ನಾಲ್ಕೆçದು ವಾರಗಳಲ್ಲಿ ಮೊಟ್ಟೆಗಳು ಒಡೆದು ಮರಿಗಳಾಗುತ್ತವೆ. ಬೇಸಿಗೆಯ ಅಂತ್ಯದವವರೆಗೂ ತಾಯಿ ಹುಳುವು ಮರಿಗಳನ್ನು (ಲಾರ್ವಾವನ್ನು) ಪೋಷಣೆ ಮಾಡುತ್ತದೆ. ಮರಿಗಳು 1/ 2.5 ವಾರಗಳಲ್ಲಿ ನೊಣವಾಗಿ ಬದಲಾಗಿ ನಂತರ ಮಿಂಚು ಹುಳುವಾಗುತ್ತವೆ. ಇವು ಉಸಿರಾಟಕ್ಕೆ ಪಡೆದ ಆಮ್ಲಜನಕವು ಇವುಗಳ ದೇಹ ಪ್ರವೇಶಿಸಿ ವಿವಿಧ ಚಟುವಟಿಕೆಗಳಿಗೆ ಬಳಕೆಯಾಗಿ ನಂತರ ಅಲ್ಲಿಂದಲೇ ಬೆಳಕಿನ ಉತ್ಪತ್ತಿಗೂ ಪೂರೈಕೆಯಾಗುತ್ತದೆ.

ಬೆಳಕು ಹೊಮ್ಮಿಸಿ ಬೆದರಿಸುತ್ತವೆ! :

ಮಿಂಚುಹುಳುಗಳು ತಮ್ಮ ಇರುವಿಕೆಯನ್ನು ಇತರ ಹುಳುಗಳಿಗೆ ತಿಳಿಸಲೂ ಬೆಳಕು ಸೂಸುತ್ತಾ ಹಾರಾಡುತ್ತಿರುತ್ತವೆ. ಗಂಡು ಹುಳುಗಳು ಸದಾ ಬೆಳಕನ್ನು ಸೂಸಿದರೆ, ಹೆಣ್ಣು ಹುಳುಗಳು ಬೆಳಕನ್ನು ಸೂಸುವುದಿಲ್ಲ. ಶತ್ರು ಕೀಟಗಳ ಆಕ್ರಮಣವನ್ನು ತಡೆಯಲು ಮತ್ತು ಅವುಗಳನ್ನು ಹೆದರಿಸಿ ಹಿಮ್ಮೆಟ್ಟಿಸಲು, ಮತ್ತು ತಮ್ಮ ಬೇಟೆಯನ್ನು ಸೆಳೆಯಲು ಮಿಂಚುಹುಳುಗಳು ಬೆಳಕನ್ನು ಬಳಸುತ್ತವೆ!

 

-ಸಂತೋಷ್‌ ರಾವ್‌ ಪೆರ್ಮುಡ

Advertisement

Udayavani is now on Telegram. Click here to join our channel and stay updated with the latest news.

Next