Advertisement

ಪಾಲಿಕೆಯ ನೆರವಿಗೆ ಅಗ್ನಿಶಾಮಕ ದಳ

12:48 PM Jun 03, 2017 | Team Udayavani |

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮಳೆಯಿಂದ ಉಂಟಾಗುವ ಅನಾಹುತ ತಡೆಯಲು ಅಗ್ನಿಶಾಮಕ ದಳದ ನೆರವು ಪಡೆಯಲು ಬಿಬಿಎಂಪಿ ತೀರ್ಮಾನಿಸಿದೆ. ನಗರದಲ್ಲಿ ಮಳೆಗಾಲದಲ್ಲಿ ಪ್ರತಿವರ್ಷ ಸಾರ್ವಜನಿಕರು ತೊಂದರೆಪಡುವಂತಾಗುತ್ತಿರುವ ಹಿನ್ನೆಲೆಯಲ್ಲಿ  ಈ ಕ್ರಮಕ್ಕೆ ಬಿಬಿಎಂಪಿ ಮುಂದಾಗಿದ್ದು, ಅಗ್ನಿಶಾಮಕ  ದಳದ ಸುಸಜ್ಜಿತ 24 ತಂಡಗಳ ಎರವಲು ಸೇವೆ ಪಡೆಯಲು ನಿರ್ಧರಿಸಲಾಗಿದೆ. 

Advertisement

ಮಳೆ ಬಂದಾಗ ಸಮಸ್ಯೆ ಎದುರಾದ ಸ್ಥಳಕ್ಕೆ ಅಗ್ನಿಶಾಮಕ  ದಳ ತತಕ್ಷಣ ಧಾವಿಸಿ ಪರಿಹಾರ ಕಾರ್ಯ ಕೈಗೊಳ್ಳುವುದರ ಜತೆಗೆ ಸಂಕಷ್ಟಕ್ಕೆ ಸಿಲುಕಿರುವ ಸಾರ್ವಜನಿಕರ ರಕ್ಷಣೆ ಹಾಗೂ ಸ್ಥಳಾಂತರಕ್ಕೆ ಒತ್ತು ನೀಡಲಾಗುತ್ತದೆ. ಈಗಾಗಲೇ ಮಳೆಗಾಲ ಸಂದರ್ಭದಲ್ಲಿ ಪರಿಸ್ಥಿತಿ ನಿಭಾಯಿಸಲು ಬಿಬಿಎಂಪಿಯಲ್ಲಿರು ಇರುವ ಅರಣ್ಯ ವಿಭಾಗದ 21 ಹಾಗೂ ಉಪ ವಲಯಗಳ 72 ತಂಡಗಳ ಜತೆಗೂಡಿ ಅಗ್ನಿಶಾಮಕ ದಳ ಕಾರ್ಯನಿರ್ವಹಿಸಲಿದೆ.

ಮುಂಗಾರು ಪೂರ್ವ ಮಳೆಯಿಂದ ನಗರದಲ್ಲಿ ಉಂಟಾಗಿರುವ ಅನಾಹುತಗಳನ್ನು ಗಮನದಲ್ಲಿಟ್ಟುಕೊಂಡು ಮುಂದಿನ ದಿನಗಳಲ್ಲಿ ಮುನ್ನಚ್ಚರಿಕೆ ಕೈಗೊಳ್ಳುವ ನಿಟ್ಟಿನಲ್ಲಿ ಪಾಲಿಕೆ ಆಯುಕ್ತ ಮಂಜುನಾಥ್‌ ಪ್ರಸಾದ್‌ ಎಲ್ಲ ವಲಯಗಳ ಜಂಟಿ ಆಯುಕ್ತರಿಗೆ ಸೂಚನೆ ನೀಡಿದ್ದಾರೆ. “ಜಲಮಂಡಳಿ, ಬಿಡಿಎ, ಬೆಸ್ಕಾಂ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಎಲ್ಲೂ ಯಾವುದೇ ರೀತಿಯ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಬೇಕು.  ಈಗಿಂದಲೇ ಆ ನಿಟ್ಟಿನಲ್ಲಿ ಕ್ರಿಯಾ ಯೋಜನೆ ರೂಪಿಸಬೇಕು,’ ಎಂದು ಅವರು ಈಗಾಗಲೇ ಸೂಚಿಸಿದ್ದಾರೆ. 

ಪಾಲಿಕೆಯ ಉಪ ವಲಯಗಳಲ್ಲಿರುವ ಎಲ್ಲ ತುರ್ತು ನಿರ್ವಹಣಾ ಕೇಂದ್ರಗಳು ದಿನ 24 ಗಂಟೆಗಳು ಕಾರ್ಯನಿರ್ವಹಿಸಬೇಕು. ಸಾರ್ವಜನಿಕರಿಂದ ಬರುವಂತಹ ದೂರುಗಳನ್ನು ಶೀಘ್ರ ಬಗೆಹರಿಸಲು ಮುಂದಾಗಬೇಕು ಎಂದು ಆದೇಶ ನೀಡಿರುವ ಆಯುಕ್ತರು, ಧರೆಗುರುಳುವ ಮರಗಳನ್ನು ಶೀಘ್ರ ತೆರವುಗೊಳಿಸಬೇಕು ಎಂದು ಸೂಚಿಸಿದ್ದಾರೆ. ಪಾಲಿಕೆಯಲ್ಲಿ ಹಾಲಿ ಇರುವ ನಿರ್ವಹಣಾ ತಂಡಗಳ ಜತೆಗೆ ಅಗ್ನಿಶಾಮಕ ದಳದ ತಂಡದ ನೆರವು ಪಡೆಯಲಾಗುವುದು. ತೀರಾ ತುರ್ತು ಪರಿಸ್ಥಿತಿ ಹಾಗೂ ಅಗತ್ಯತೆ ಇರುವ ಕಡೆ ಅಗ್ನಿಶಾಮಕ ದಳದ ನೆರವು ಪಡೆದುಕೊಳ್ಳಬೇಕು ಎಂದು ನಿರ್ದೇಶನ ನೀಡಿದ್ದಾರೆ.

ಸದ್ಯ ಅಗ್ನಿಶಾಮಕ ದಳದಲ್ಲಿ 24 ಸುಸಜ್ಜಿತ ತಂಡಗಳಿದ್ದು, ಅಗತ್ಯ ಸಿಬ್ಬಂದಿ ಹಾಗೂ ಕಾರ್ಯಾಚರಣೆಗೆ ಅವಶ್ಯಕವಾದ ವಾಹನಗಳೂ ಇವೆ. ಆದರೆ, ಮಳೆಗಾಲದ ಕಾರ್ಯಾಚರಣೆಗೆ ಅಗತ್ಯವಾದ ಮರಕಡಿಯುವ ಯಂತ್ರ ಮತ್ತಿತರರೇ ಸಲಕರಣೆಗಳ ಕೊರತೆಯಿದೆ. ಅವುಗಳನ್ನು ಒದಗಿಸಿದರೆ ಪಾಲಿಕೆಯೊಂದಿಗೆ ಸೇವೆಗೆ ಸಿದ್ದ ಎಂದು ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ ಎನ್ನಲಾಗಿದೆ. ಆ ಹಿನ್ನೆಲೆಯಲ್ಲಿ ಆಯುಕ್ತರು ಪಾಲಿಕೆಯಿಂದ ಅಗತ್ಯ ಸಲಕರಣೆಗಳನ್ನು ಪೂರೈಸುವ ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement

ಮಳೆ ಬೀಳುವ ಪ್ರದೇಶಗಳನ್ನು ಅರಿತು ಕಾರ್ಯಾಚರಣೆ: ಮಳೆ ಬಿದ್ದ ನಂತರ ಪರಿಹಾರ ಕಾರ್ಯ ಕೈಗೊಳ್ಳುವುದಕ್ಕಿಂತ ಮಳೆ ಬೀಳುವ ಮುನ್ನವೇ ಯಾವ ಪ್ರದೇಶದಲ್ಲಿ ಮಳೆಯಾಗಬಹುದು ಎಂಬ ಮಾಹಿತಿ ಪಡೆದು ಮುನ್ನಚ್ಚರಿಕೆ ಕ್ರಮ ಕೈಗೊಳ್ಳಲು ಬಿಬಿಎಂಪಿ  ಈ ಬಾರಿ ಸಿದ್ಧತೆ ನಡೆಸಿದೆ. ಇದಕ್ಕಾಗಿ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿ ನಗರದ ಯಾವ ಭಾಗದಲ್ಲಿ ಮಳೆಯಾಗಲಿದೆ ಎಂಬ ಮಾಹಿತಿ ಪಡೆದು ಅದಕ್ಕೆ ಅನುಗುಣವಾಗಿ ಅಗತ್ಯ ಪೂರ್ವ ಸಿದ್ಧತೆ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ.

ಪಾಲಿಕೆಯು ಮಳೆ ಕುರಿತಂತೆ ನಮ್ಮ ಕೇಂದ್ರದಿಂದ ಮಾಹಿತಿ ನೀಡುವಂತೆ ಕೋರಿದ್ದು, ನಾವು ಆ ಬಗ್ಗೆ ನಮ್ಮಲ್ಲಿ ಸಂಗ್ರಹವಾಗುವ ಎಲ್ಲ ಮಾಹಿತಿ ನೀಡಲಿದ್ದೇವೆ ಎಂದು ಹವಾಮಾನ ಇಲಾಖೆಯ ನಿರ್ದೇಶಕ ಶ್ರೀನಿವಾಸ ರೆಡ್ಡಿ ಮಾಹಿತಿ ನೀಡಿದ್ದಾರೆ. 

* ವಿಶೇಷ ವರದಿ 

Advertisement

Udayavani is now on Telegram. Click here to join our channel and stay updated with the latest news.

Next