Advertisement

ರೇಷ್ಮೆ ಸೀರೆ ಖರೀದಿಸಲು ಮುಗಿಬಿದ್ದ ಮಹಿಳೆಯರು

11:42 AM Sep 12, 2018 | |

ಮೈಸೂರು: ಗ್ರಾಹಕರಿಗೆ ಕಡಿಮೆ ದರದಲ್ಲಿ ರೇಷ್ಮೆ ಸೀರೆ ಖರೀದಿಗೆ ಅವಕಾಶ ಕಲ್ಪಿಸಬೇಕೆಂಬ ರೇಷ್ಮೆ ಸಚಿವ ಸಾ.ರಾ. ಮಹೇಶ್‌ ಕನಸಿನ ಯೋಜನೆಗೆ ವೇದಿಕೆ ಸಜ್ಜುಗೊಂಡಿದೆ. ರಿಯಾಯಿತಿ ದರದಲ್ಲಿ ರೇಷ್ಮೆ ಸೀರೆ ಮಾರಾಟಕ್ಕೆ ಮಂಗಳವಾರ ಚಾಲನೆ ದೊರೆತಿದ್ದು, ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ರೇಷ್ಮೆ ಸೀರೆ ಖರೀದಿಸಲು ಮಹಿಳೆಯರು ಮುಗಿಬಿದ್ದರು. 

Advertisement

ಮಧ್ಯಮ ವರ್ಗದವರೂ ರೇಷ್ಮೆ ಸೀರೆ ಖರೀದಿಸಬೇಕೆಂಬ ಉದ್ದೇಶದಿಂದ ರಿಯಾಯಿತಿ ದರದಲ್ಲಿ ಸೀರೆ ಮಾರಾಟ ಮಾಡಲು ರೇಷ್ಮೆ ಸಚಿವರು ಉದ್ದೇಶಿಸಿದ್ದರು. ಹೀಗಾಗಿ ಗೌರಿ-ಗಣೇಶ ಹಬ್ಬಕ್ಕಾಗಿ ಹೊಸ ಬಟ್ಟೆ ಖರೀದಿಸುವ ಲೆಕ್ಕಾಚಾರದಲ್ಲಿದ್ದ ಮಹಿಳೆಯರು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದ್ದ ರೇಷ್ಮೆ ಸೀರೆ ಖರೀದಿಗಾಗಿ ಮುಗಿಬಿದ್ದರು. ರಿಯಾಯಿತಿ ದರದಲ್ಲಿ ಸೀರೆ ಖರೀದಿಸುವ ಸಲುವಾಗಿ ನೂರಾರು ಮಹಿಳೆಯರು ಮಂಗಳವಾರ ಮೈಸೂರಿನ ಮೃಗಾಲಯದ ಎದುರಿನ ಕೆಎಸ್‌ಐಸಿ ಸಿಲ್ಕ್ ಮಳಿಗೆ ಎದುರು ತಮ್ಮ ಹೆಸರು ನೊಂದಾಯಿಸಲು ಬೆಳಗ್ಗಿನಿಂದಲೇ ಸಾಲುಗಟ್ಟಿ ನಿಂತರು. 

ಮಹಿಳೆಯರ ಪ್ರತಿಭಟನೆ: ರಿಯಾಯಿತಿ ದರದಲ್ಲಿ ರೇಷ್ಮೆ ಸೀರೆ ಖರೀದಿಸಲು ಕೆಎಸ್‌ಐಸಿ ಮಳಿಗೆ ಎದುರು ಮಹಿಳೆಯರು ಸಾಲುಗಟ್ಟಿ ನಿಂತಿದ್ದರು. ಆದರೆ ಸೀರೆ ಖರೀದಿಗೆ ಆಗಮಿಸಿದ್ದ ಮಹಿಳೆಯರು ಹೆಸರು ನೊಂದಣಿಗೆ ಆಧಾರ್‌ ಕಾರ್ಡ್‌ ಕಡ್ಡಾಯಗೊಳಿಸಲಾಗಿತ್ತು. ಈ ಕ್ರಮವನ್ನು ಖಂಡಿಸಿದ ಕೆಲ ಮಳೆಯರು ಕೆಎಸ್‌ಐಸಿ ಅಂಗಡಿ ಮುಂಭಾಗ ಪ್ರತಿಭಟನೆ ನಡೆಸಿದರು.

ರೇಷ್ಮೆ ಸೀರೆ ಖರೀದಿಗೆ ಆಧಾರ್‌ ಕಾರ್ಡ್‌ ಕಡ್ಡಾಯ ಬದಲು ಸರದಿಯಲ್ಲಿ ನಿಂತ ಎಲ್ಲರಿಗೂ ಸೀರೆ ವಿತರಣೆ ಮಾಡಬೇಕೆಂದು ಪಟ್ಟು ಹಿಡಿದರು. ಜತೆಗೆ ಆಧಾರ್‌ ಕಾರ್ಡ್‌ ಇಲ್ಲದವರಿಗೂ ಸೀರೆ ನೀಡುವಂತೆ ಒತ್ತಾಯಿಸಿದರು. ಈ ನಡುವೆ ಸ್ಥಳದಲ್ಲಿದ್ದ ಪೊಲೀಸರು ಮಹಿಳೆಯರನ್ನು ಸಮಾಧಾನಪಡಿಸಲು ಹರಸಾಹಸ ಪಡಬೇಕಾಯಿತು. ವಿಷಯ ತಿಳಿದು ನಗರ ಪೊಲೀಸ್‌ ಆಯುಕ್ತ ಡಾ.ಎ.ಸುಬ್ರಹ್ಮಣ್ಯೇಶ್ವರ ರಾವ್‌ ಸ್ಥಳಕ್ಕಾಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು. 

1500 ಸೀರೆ ವಿತರಣೆ: ಸರ್ಕಾರದ ಆದೇಶದ ಮೇರೆಗೆ ಕಡಿಮೆ ದರದಲ್ಲಿ ರೇಷ್ಮೆ ಸೀರೆ ನೀಡಲಾಗುತ್ತಿದ್ದು, ಪಕ್ಕಾ ಜರಿ ರೇಷ್ಮೆ ಸೀರೆಯನ್ನು ಮಾರಾಟ ಮಾಡಲಾಗುತ್ತಿದೆ. ಈ ಹಿಂದೆ ಲಾಟರಿ ಮೂಲಕ ಸೀರೆ ನೀಡಲು ಉದ್ದೇಶಿಸಲಾಗಿತ್ತು. ಆದರೆ ಇದೀಗ ರೇಷ್ಮೆ ಸೀರೆ ಖರೀದಿಸಲು ಆಧಾರ್‌ ಕಾರ್ಡ್‌ ಕಡ್ಡಾಯ ಮಾಡಲಾಗಿದ್ದು, ಆಧಾರ್‌ ಕಾರ್ಡ್‌ ಹೊಂದಿದ ಮಳೆಯರಿಗೆ ಮಾತ್ರ ಸೀರೆ ನೀಡಲಾಗುತ್ತಿದೆ. ಮೊದಲಿಗೆ 1500 ಸೀರೆಗಳನ್ನು ಮಾತ್ರವೇ ನೀಡಲಾಗುತ್ತಿದೆ ಎಂದು ಕೆಎಸ್‌ಐಸಿ ಪ್ರಧಾನ ವ್ಯವಸ್ಥಾಪಕ ಕೃಷ್ಣಪ್ಪ ಮಾಹಿತಿ ನೀಡಿದರು. 

Advertisement

ಐದು ಕಡೆ ವಿತರಣೆ: ಗೌರಿ-ಗಣೇಶ ಹಬ್ಬದ ಕೊಡುಗೆಯಾಗಿ 4,500 ರೂ.ಗೆ ರೇಷ್ಮೆ ಸೀರೆ ಖರೀದಿಸಲು ಮೈಸೂರು ಸೇರಿದಂತೆ ರಾಮನಗರ, ಬೆಳಗಾವಿ, ದಾವಣಗೆರೆ ಹಾಗೂ ಬೆಂಗಳೂರಿನಲ್ಲಿರುವ ಕೆಎಸ್‌ಐಸಿ ಮಳಿಗೆಗಳಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸೀರೆ ಖರೀದಿಸುವವರು ಬೆಳಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆವರೆಗೆ ಆಧಾರ್‌ ಕಾರ್ಡ್‌ ನೀಡಿ ನೋಂದಣಿ ಮಾಡಿಸಲು ಅವಕಾಶ ಕಲ್ಪಿಸಲಾಗಿದ್ದು, ಒಬ್ಬರಿಗೆ ಒಂದು ಸೀರೆ ಮಾತ್ರ ಮಾರಾಟ ಮಾಡಲು ಉದ್ದೇಶಿಸಲಾಗಿದೆ. 

ರಾಜ್ಯಾದ್ಯಂತ ರಿಯಾಯಿತಿ ವಿಸ್ತರಣೆ: ಗೌರಿ ಹಬ್ಬದ ಹಿನ್ನೆಲೆಯಲ್ಲಿ ರೇಷ್ಮೆ ಇಲಾಖೆ ವತಿಯಿಂದ 15 ಸಾವಿರ ರೂ. ಮೌಲ್ಯದ ಸೀರೆ 4,500 ಸಾವಿರ ರೂ.ಗಳಿಗೆ ಮಾರಾಟ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಹಂತಹಂತವಾಗಿ ಈ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು. 

ನಗರದ ಇಟ್ಟಿಗೂಡಿನಲ್ಲಿರುವ ಕೆಎಸ್‌ಐಸಿ ಮಳಿಗೆ ಆವರಣದಲ್ಲಿ ಮಧ್ಯಮ ವರ್ಗದ ಜನರು ಕಡಿಮೆ ದರದಲ್ಲಿ ರೇಷ್ಮೆ ಸೀರೆ ಖರೀದಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ರೇಷ್ಮೆ ಇಲಾಖೆ ವತಿಯಿಂದ ಹಮ್ಮಿಕೊಂಡಿರುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಸಚಿವ ಸಾ.ರಾ.ಮಹೇಶ್‌ ಮಾತನಾಡಿ, ಎಲ್ಲಾ ವರ್ಗದವರು ರೇಷ್ಮೆ ಸೀರೆ ಖರೀದಿಸಬೇಕೆಂಬ ಉದ್ದೇಶದಿಂದ ರಿಯಾಯಿತಿ ದರದಲ್ಲಿ ರೇಷ್ಮೆ ಸೀರೆ ಖರೀದಿಗೆ ಈ ಹಿಂದೆಯೇ ಅವಕಾಶ ಕಲ್ಪಿಸಲು ಚಿಂತನೆ ನಡೆಸಲಾಗಿತ್ತು.

ರಾಜ್ಯದಲ್ಲಿ ಪ್ರತಿವರ್ಷ 70 ಸಾವಿರ ರೇಷ್ಮೆ ಸೀರೆಗಳು ತಯಾರಾಗುತ್ತಿರುವುದರಿಂದ ಕಡಿಮೆ ಪ್ರಮಾಣದಲ್ಲಿ ಸೀರೆಗಳನ್ನು ವಿತರಿಸಲಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ವಿಧಾನ ಪರಿಷತ್‌ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಸೇರಿದಂತೆ ಕೆಎಸ್‌ಐಸಿಯ ಅಧಿಕಾರಿಗಳು ಹಾಜರಿದ್ದರು.

ಮಳೆ ನಡುವೆಯೂ ಖರೀದಿ: ಕಡಿಮೆ ದರದಲ್ಲಿ ರೇಷ್ಮೆ ಸೀರೆ ಖರೀದಿಸುವ ಸಲುವಾಗಿ ಸಾವಿರಾರು ಮಹಿಳೆಯರು ಕೆಎಸ್‌ಐಸಿ ಮಳಿಗೆ ಎದುರು ಜಮಾಯಿಸಿದ್ದರು. ಸೀರೆ ಖರೀದಿಗಾಗಿ ಬೆಳಗ್ಗಿನಿಂದಲೇ ಅಂಗಡಿ ಮುಂದೆ ಸಾಲಗಟ್ಟಿ ನಿಂತಿದ್ದ ಮಹಿಳೆಯರು ಮಧ್ಯಾಹ್ನದ ವೇಳೆ ಸುರಿದ ಮಳೆಯನ್ನು ಲೆಕ್ಕಿಸದೆ ರೇಷ್ಮೆ ಸೀರೆ ಖರೀದಿಸಿದರು. ಮಳೆಯ ನಡುವೆಯೇ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ, ಬೆಳಗ್ಗೆಯೇ ಟೋಕನ್‌ ಪಡೆದಿದ್ದ ಐವರಿಗೆ ಸಾಂಕೇತಿಕವಾಗಿ ಸೀರೆ ವಿತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next