Advertisement

ನಾಯಂಡಹಳ್ಳಿಯಲ್ಲಿ ಗೋದಾಮಿಗೆ ಬೆಂಕಿ

11:54 AM Jan 22, 2018 | |

ಬೆಂಗಳೂರು: ಗೋದಾಮಿನಲ್ಲಿ  ಬೆಂಕಿ ಆಕಸ್ಮಿಕ ಉಂಟಾಗಿ ಪ್ಲಾಸ್ಟಿಕ್‌ ವಸ್ತುಗಳು ಬೆಂಕಿಗಾಹುತಿಯಾದ ಘಟನೆ ನಾಯಂಡಹಳ್ಳಿ ಜಂಕ್ಷನ್‌ ಬಳಿ ಭಾನುವಾರ ಬೆಳಗ್ಗೆ ನಡೆದಿದೆ. ನಾಯಂಡಹಳ್ಳಿ ಮೆಟ್ರೋ ನಿಲ್ದಾಣ ಸಮೀಪವೇ ಇರುವ ಗೋದಾಮಿನಲ್ಲಿ ನಿರುಪಯುಕ್ತ ಪ್ಲಾಸ್ಟಿಕ್‌ ವಸ್ತುಗಳನ್ನು ತುಂಬಿಸಿಡಲಾಗಿದ್ದು, ಮುಂಜಾನೆ ಐದು ಗಂಟೆ ಸಮಯದಲ್ಲಿ ಬೆಂಕಿ ಆಕಸ್ಮಿಕ ಉಂಟಾಯಿತು.

Advertisement

ಬೆಂಕಿಯಿಂದ ದಟ್ಟ ಹೊಗೆ ಆವರಿಸಿದ್ದರಿಂದ ಕೆಲ ಕಾಲ ಆತಂಕ ಉಂಟಾಗಿತ್ತು. ಘಟನೆ ವೇಳೆ ಗೋದಾಮಿನಲ್ಲಿ ಯಾರು ಇರಲಿಲ್ಲ. ಹೀಗಾಗಿ ಯಾವುದೇ ಪ್ರಾಣಪಾಯವಾಗಿಲ್ಲ. ಅಲ್ಲದೆ ಗೋದಾಮಿನ ಮಾಲೀಕರು ಯಾರು ಎಂದು ಇದುವರೆಗೂ ತಿಳಿದು ಬಂದಿಲ್ಲ. ಈ ಸಂಬಂಧ ಯಾರು ಸಹ ದೂರು ನೀಡಿಲ್ಲ ಎಂದು ಬ್ಯಾಟರಾಯನಪುರ ಠಾಣೆ ಪೊಲೀಸರು ತಿಳಿಸಿದ್ದಾರೆ.

ನಾಯಂಡಹಳ್ಳಿ ಜಂಕ್ಷನ್‌ ಬಳಿ 30*40 ಅಡಿ ವೀಸ್ತಿರ್ಣದ ಗೋದಾಮಿನಲ್ಲಿ ವ್ಯಕ್ತಿಯೊಬ್ಬರು ಬಳಸಿ ಎಸೆದ ಊಟದ ಪ್ಲಾಸ್ಟಿಕ್‌ ಲೋಟ, ತಟ್ಟೆಗಳು, ಕಾಗದದ ವಸ್ತುಗಳು ಸೇರಿದಂತೆ ನಿರುಪಯುಕ್ತ ವಸ್ತುಗಳನ್ನು ಸಂಗ್ರಹಿಸಿ ಮೂಟ್ಟೆ ಕಟ್ಟಿ ಇಟ್ಟಿದ್ದರು. ಭಾನುವಾರ ಬೆಳಗ್ಗೆ 5 ಗಂಟೆ ಸುಮಾರಿಗೆ ಗೋದಾಮಿಗೆ ಬೆಂಕಿ ಕಾಣಿಸಿಕೊಂಡಿದ್ದು, ಇಡೀ ಗೋದಾಮು ಹೊತ್ತಿ ಉರಿದಿದೆ.

ಬೆಳಗ್ಗೆ 6.45ರ ಸುಮಾರಿಗೆ ಸ್ಥಳೀಯರೊಬ್ಬರು ನೋಡಿ ಅಗ್ನಿಶಾಮಕ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಆರು ವಾಹನಗಳ ಜತೆ ಸ್ಥಳಕ್ಕೆ ಧಾವಿಸಿದ 20 ಮಂದಿ ಸಿಬ್ಬಂದಿ ಸತತ 5 ಗಂಟೆ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಜೆಸಿಬಿ ಮೂಲಕ ಸುಟ್ಟುಕರಕಲಾದ ವಸ್ತುಗಳನ್ನು ತೆರವುಗೊಳಿಸಲಾಯಿತು.

ತಗಡಿನ ಶೀಟ್‌ನಿಂದ ಪ್ಲಾಸ್ಟಿಕ್‌ ಗೋದಾಮು ನಿರ್ಮಿಸಲಾಗಿದೆ. ಗೋದಾಮಿಗೆ ಯಾವುದೇ ವಿದ್ಯುತ್‌ ಸಂಪರ್ಕ ನೀಡಿಲ್ಲ. ಹೀಗಾಗಿ ಶಾರ್ಟ್‌ ಸರ್ಕಿಟ್‌ನಿಂದ ಘಟನೆ ಸಂಭವಿಸಿಲ್ಲ. ಯಾರೋ ಕಿಡಿಗೇಡಿಗಳು ಬೆಂಕಿ ಇಟ್ಟಿರುವ ಸಾಧ್ಯತೆಯಿದೆ.ಗೋದಾಮಿನಲ್ಲಿಯೂ ಸಹ ಯಾವುದೇ ಮುನ್ನೆಚ್ಚರಿಕಾ ಕ್ರಮಗಳು ಇಲ್ಲ.

Advertisement

ಘಟನೆ ಬೆಳಕಿಗೆ ಬರುತ್ತಿದ್ದಂತೆ ಗೋದಾಮಿನ ಮಾಲೀಕ ನಾಪತ್ತೆಯಾಗಿದ್ದಾನೆ. ಸ್ಥಳೀಯರು ಮಾಲೀಕನ ಹೆಸರು ಹೇಳುತ್ತಿದ್ದರೆ ಹೊರತು ಘಟನಾ ಸ್ಥಳಕ್ಕೆ ಆತ ಬಂದಿಲ್ಲ. ಹೀಗಾಗಿ ಗೋದಾಮಿನ ಮಾಲೀಕ ಯಾರೆಂದು ಇನ್ನು ತಿಳಿದಿಲ್ಲ ಎಂದು ಅಗ್ನಿಶಾಮಕ ಅಧಿಕಾರಿಗಳು “ಉದಯವಾಣಿ’ಗೆ ತಿಳಿಸಿದ್ದಾರೆ.

ಗೋದಾಮು ತೆರವಿಗೆ ಸಲಹೆ: ಬೆಂಕಿ ಅವಘಡ ಸಂಭವಿಸಿದ ಗೋದಾಮಿನ ಪಕ್ಕದಲ್ಲೇ ಇನ್ನು ನಾಲ್ಕೈದು ಗೋದಾಮುಗಳಿವೆ. ಇವುಗಳಲ್ಲಿಯೂ ಯಾವುದೇ ಮುನ್ನೆಚ್ಚರಿಕಾ ಕ್ರಮಗಳನ್ನು ಅಳವಡಿಸಿಲ್ಲ. ಹೀಗಾಗಿ ಇವುಗಳನ್ನೂ ತೆರವುಗೊಳಿಸುವಂತೆ ಪೊಲೀಸರಿಗೆ ಸಲಹೆ ನೀಡಿದ್ದೇವೆ.

ಇನ್ನು ಘಟನಾ ಸ್ಥಳದಿಂದ 150 ಮೀಟರ್‌ ದೂರದಲ್ಲಿ ಮೆಟ್ರೋ ನಿಲ್ದಾಣವಿರುವುದರಿಂದ ಎಚ್ಚರಿಕೆ ವಹಿಸಬೇಕಿದೆ. ಮುಂದಿನ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಂಕಿ ಅವಘಡ ಸಂಭವಿಸಿದರೆ ತುಂಬಾ ತೊಂದರೆಯಾಗಲಿದೆ. ಹೀಗಾಗಿ ಆದಷ್ಟು ಬೇಗ ಇಲ್ಲಿನ ಗೋದಾಮುಗಳನ್ನು ತೆರವುಗೊಳಿಸುವುದು ಒಳಿತು ಹೇಳಿದ್ದೇವೆ ಎಂದು ಅಗ್ನಿಶಾಮಕ ಅಧಿಕಾರಿ ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next