ಗುಂಡ್ಲುಪೇಟೆ: ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಮಂಗಳವಾರ ಸಂಜೆ ಕಾಣಿಸಿಕೊಂಡಿದ್ದ ಬೆಂಕಿಯು ಬುಧವಾರ ಮಧ್ಯಾಹ್ನದ ವೇಳೆಗೆ ಆರಿದಂತೆ ಕಂಡು ಬಂದರೂ, ಮಧ್ಯಾಹ್ನ ನಂತರ ಮುಂದುವರಿದಿದೆ.
ಬಂಡೀಪುರ ಉದ್ಯಾನದ ಅರಣ್ಯ ವಲಯಗಳಾದ ಕುಂದಕೆರೆ, ಗೋಪಾಲಸ್ವಾಮಿ ಬೆಟ್ಟ, ಮೂಲೆಹೊಳೆ, ಬಂಡೀಪುರ ಮತ್ತು ಮದ್ದೂರಿನಿಂದ ವಲಯ ಅರಣ್ಯಾಧಿಕಾರಿಗಳು, ಅರಣ್ಯ ವೀಕ್ಷಕರು, ರಕ್ಷಕರು ಮತ್ತು ಸ್ವಯಂ ಸೇವಕರ ತಂಡ ಬುಧವಾರ ಬೆಳಗ್ಗೆ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿತು. ತಮಿಳುನಾಡಿನ ಮಧುಮಲೈ ಭಾಗದಲ್ಲಿ ಕಾಣಿಸಿಕೊಂಡಿದ್ದ ಬೆಂಕಿಯನ್ನು ತಮಿಳುನಾಡಿನ ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿ ತಂಡ ನಿಯಂತ್ರಣಕ್ಕೆ ತಂದಿತ್ತು. ಆದರೆ, ಬುಧವಾರ ಮಧ್ಯಾಹ್ನ 2 ಗಂಟೆಯ ವೇಳೆಗೆ ಕುಂದುಕೆರೆ ಅರಣ್ಯ ವಲಯಕ್ಕೆ ಸೇರಿದ ದೇವರ ಮಡು ಮತ್ತು ಛತ್ರದಟ್ಟಿ ಮಾಳ ಗಸ್ತಿನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಅರಣ್ಯ ಇಲಖೆ ಸಿಬ್ಬಂದಿ ತ್ವರಿತಗತಿಯಲ್ಲಿ ಹನ್ನೊಂದು ಜೀಪುಗಳಲ್ಲಿ ಆಗಮಿಸಿ, ದೊಡ್ಡಕೆರೆ ಪಾತೆಯ ಬಳಿಗೆ ಬೆಂಕಿ ಹರಡುವಷ್ಟರಲ್ಲಿ ನಿಯಂತ್ರಣಕ್ಕೆ ತಂದರು. ಒಟ್ಟಾರೆ ಬುಧವಾರ ಕೂಡ 50 ಎಕರೆಗೂ ಹೆಚ್ಚಿನ ಅರಣ್ಯ ಭಸ್ಮವಾಗಿದೆ. ಆದರೆ, ಕುಂದುಕರೆಯ ವಿರುದ್ಧ ದಿಕ್ಕಿನಲ್ಲಿ ಗಾಳಿ ತೀವ್ರವಾಗಿರುವ ಪರಿಣಾಮ ತಮಿಳುನಾಡಿನ ಮಧುಮಲೈ ಅರಣ್ಯಕ್ಕೆ ಸೇರಿದ ಮಾಯಾರ್ ಬಳಿ ಬೆಂಕಿ ಕಂಡು ಬಂದಿದೆ. ಬುಧವಾರ ಸಂಜೆಯೊಳಗೆ ಬೆಂಕಿ ನಿಯಂತ್ರಣಕ್ಕೆ ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಮೊದಲಿಗೆ ತಮಿಳುನಾಡಿಗೆ ಸೇರಿದ ಕನ್ನಡಿಗರ ಯಾತ್ರಾ ಕೇಂದ್ರ ಕೊಂಗಳ್ಳಿ ಬೆಟ್ಟದ ಬಳಿ ಮಧುಮಲೈ ರಾಷ್ಟ್ರೀಯ ಉದ್ಯಾನದಲ್ಲಿ ಮಂಗಳವಾರ ಸಂಜೆ 6 ಗಂಟೆ ವೇಳೆಗೆ ಪ್ರಾರಂಭವಾದ ಬೆಂಕಿಯು ನಂತರ ಬಂಡೀಪುರ ರಾಷ್ಟ್ರೀಯ ಉದ್ಯಾನದ ಕುಂದುಕೆರೆ ಅರಣ್ಯ ವಲಯಕ್ಕೂ ಹಬ್ಬಿದೆ. ಕುಂದುಕೆರೆ ಅರಣ್ಯ ವಲಯದ ಕುಂದುಕೆರೆ ಗ್ರಾಮದ ಬಳಿಯಿಂದ ಕೇವಲ ಒಂದು ಕಿಲೋಮೀಟರ್ ದೂರದಲ್ಲಿಯೇ ಬೆಂಕಿ ಉರಿಯುತ್ತಿದೆ. ನಂತರ ಬಂಡೀಪುರ ಅರಣ್ಯ ವಲಯದತ್ತ ಬೆಂಕಿಯು ಹಬ್ಬುತ್ತಿದ್ದು, ಕುಂದುಕೆರೆ ಅರಣ್ಯ ವಲಯದ ಕಾಡಂಚಿನ ಗ್ರಾಮಗಳಾದ ಕಡಬೂರು, ಚಿರಕನಹಳ್ಳಿ ಮತ್ತು ಉಪಕಾರ ಕಾಲೋನಿಗಳ ಅರಣ್ಯದ ಗಡಿಯಂಚನ್ನು ದಾಟಿ ಬೆಂಕಿಯು ಮುನ್ನುಗ್ಗುತ್ತಿದೆ. ಈಗಾಗಲೇ ತಮಿಳು ನಾಡಿನ ಮಧುಮಲೈ ಅರಣ್ಯದ 150ಕ್ಕೂ ಹೆಚ್ಚು ಎಕರೆ ಹಾಗೂ ಬಂಡೀಪುರದ 80ಕ್ಕೂ ಹೆಚ್ಚು ಎಕರೆ ಅರಣ್ಯ ಸುಟ್ಟು ಭಸ್ಮವಾಗಿದೆ. ಗಾಳಿಯು ತೀವ್ರಗತಿಯಲ್ಲಿ ಬೀಸುತ್ತಿರುವುದರಿಂದ ಬೆಂಕಿ ಹರಡುವ ವೇಗವು ಹೆಚ್ಚುತ್ತಿದೆ.
ಬುಧವಾರ ಬೆಳಗಿನ ವೇಳೆಗೆ ಬಂಡೀಪುರ ಅರಣ್ಯ ವಲಯವನ್ನು ಬೆಂಕಿಯು ಪ್ರವೇಶಿಸುವ ಸಾಧ್ಯತೆಯಿದೆ. ಈಗಾಗಲೇ ಎಸಿಎಫ್ ರವಿಕುಮಾರ್ ಮತ್ತು ಕುಂದುಕೆರೆ ವಲಯಾರಣ್ಯಾಧಿಕಾರಿ ಮಂಜುನಾಥ್ ನೇತೃತ್ವದ ತಂಡ ಬೆಂಕಿ ಅರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ, ಆದರೆ, ಗಾಳಿಯ ತೀವ್ರತೆಯಿಂದಾಗಿ ಬೆಂಕಿ ನಿಯಂತ್ರಣಕ್ಕೆ ಬರುತ್ತಿಲ್ಲ. ಪ್ರತ್ಯಕ್ಷದರ್ಶಿಗಳಾದ ಕುಂದುಕೆರೆ ಗ್ರಾಮದ ರೈತ ಸಂಘದ ತಾಲೂಕು ಅಧ್ಯಕ್ಷ ಸಂಪತ್ ಅವರು ತಿಳಿಸಿದಂತೆ ಸುಟ್ಟು ಭಸ್ಮವಾದ ಅರಣ್ಯದ ಬೂದಿಯು ಗ್ರಾಮದತ್ತ ತೂರಿ ಬರುತ್ತಿದ್ದು, ಮನೆಗಳ ಮೇಲೆ ಬೀಳುತ್ತಿದೆ. ಉಸಿರಾಡಲು ಕಷ್ಟಕರವಾಗಿದೆ, ಉಸಿರಾಡಿದರೆ ಬೂದಿಯೇ ಮೂಗಿಗೆ ನುಗ್ಗುತ್ತಿದೆ ಎಂದು ತಿಳಿಸಿದರು.
ಯಾತ್ರಾರ್ಥಿಗಳು ಬೆಂಕಿ ಹಚ್ಚಿರುವ ಶಂಕೆ ಗುಂಡ್ಲುಪೇಟೆ ತಾಲೂಕಿನ ಕುಂದುಕೆರೆ ಬಳಿಯ ಗಿರಿಜನರು ವಾಸವಿರುವ ಕಾಲೋನಿಯೊಂದ ರಿಂದ ಕಳೆದ ಸೋಮವಾರ ತಮಿಳುನಾಡಿನ ಕೊಂಗಳ್ಳಿ ಬೆಟ್ಟಕ್ಕೆ ಪೂಜೆಗೆಂದು ಕೆಲವು ವ್ಯಕ್ತಿಗಳು ತೆರಳಿದ್ದರು. ಅವರು ವಾಪಾಸ್ ಹಿಂತಿರುಗುವ ವೇಳೆಯಲ್ಲಿ ನಾಲ್ಕಾರು ಕಡೆ ಬೇಕಂತಲೇ ಬೆಂಕಿ ಹಚ್ಚಿ ವಾಪಾಸಾಗಿದ್ದಾರೆ ಎಂಬ ಮಾತುಗಳು ಈ ಭಾಗದ ಸಾರ್ವಜನಿಕರಲ್ಲಿ ಕೇಳಿ ಬಂದಿವೆ.
ಇದನ್ನು ಅರಣ್ಯ ಇಲಾಖೆಯ ಕೆಲವು ಸಿಬ್ಬಂದಿ ಮತ್ತು ಅಧಿಕಾರಿಗಳೂ ಕೂಡ ದೃಢಪಡಿಸಿದ್ದು, ಕಾಡ್ಗಿಚ್ಚಿಗೆ ಕಾರಣರಾದ ವ್ಯಕ್ತಿಗಳನ್ನು ಶೀಘ್ರವೇ ಬಂಧನಕ್ಕೆ ಒಳಪಡಿಸಲಾಗುತ್ತದೆ ಎಂಬ ಮಾಹಿತಿಯನ್ನು ಅರಣ್ಯ ಇಲಾಖೆ ಮೂಲಗಳು ಖಚಿತಪಡಿಸಿವೆ.