ಜ್ಯೋತಿವೃತ್ತ : ಕರ್ನಾಟಕ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು, ಪಾಂಡೇಶ್ವರ ಅಗ್ನಿಶಾಮಕ ಠಾಣೆ ವತಿಯಿಂದ ಅಗ್ನಿಶಾಮಕ ಸೇವಾ ಸಪ್ತಾಹದ ಅಂಗವಾಗಿ ಅಗ್ನಿಶಾಮಕ ರ‍್ಯಾಲಿಯು ನಗರದ ಜ್ಯೋತಿ ವೃತ್ತದಿಂದ ಪಾಂಡೇಶ್ವರ ಅಗ್ನಿಶಾಮಕ ಠಾಣೆಯವರೆಗೆ ಗುರುವಾರ ಜರಗಿತು. ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಹನುಮಂತರಾಯ ರ‍್ಯಾಲಿಗೆ ಚಾಲನೆ ನೀಡಿ, ಜಿಲ್ಲೆಯಲ್ಲಿ ಬೇಸಗೆಯಲ್ಲಿ ಅಗ್ನಿ ದುರಂತಗಳು ಸಂಭವಿಸುವುದು ಹೆಚ್ಚು. ಹಾಗಾಗಿ ಅಗ್ನಿ ಆಕಸ್ಮಿಕಗಳನ್ನು ತಡೆಯುವ ನಿಟ್ಟಿನಲ್ಲಿ ಸದಾ ಕ್ರಿಯಾಶೀಲವಾಗಿರುವುದು ಅವಶ್ಯ ಎಂದು ಹೇಳಿದರು.
ಮಂಗಳೂರಿನ ವಿಭಾಗ ಉತ್ತಮ ಕಾರ್ಯ ನಿರ್ವಹಣೆ ತೋರುತಿದ್ದು, ಅಗ್ನಿ ದುರಂತ ಸಂಭವಿಸಿದರೆ ತತ್‌ಕ್ಷಣವೇ ವಿಭಾಗದ ಸಿಬಂದಿ ಹಾಜರಾಗಿ ಅನಾಹುತಗಳನ್ನು ತಪ್ಪಿಸುವಲ್ಲಿ ಕಾರ್ಯಶೀಲರಾಗಿರುತ್ತಾರೆ ಎಂದರು.
ಸುಮಾರು 60ಕ್ಕೂ ಹೆಚ್ಚು ಸಿಬಂದಿ ರ‍್ಯಾಲಿಯಲ್ಲಿ ಪಾಲ್ಗೊಂಡರು. ಏರಿಯಲ್ ಲ್ಯಾಡರ್ ಪ್ಲಾಟ್‌ಫಾರ್ಮ್, ಅಡ್ವಾನ್ಸ್‌ಡ್ ರೆಸ್ಕ್ಯೂವಾಹನ, ಎರಡು ವಾಟರ್ ಬೌಸರ್, ನೀರು ತುಂಬಿದ ಲಾರಿ, ನಾಲ್ಕು ಅಗ್ನಿ ಬೈಕ್, ಜೀಪ್ ವಾಹನಗಳು ಪಾಲ್ಗೊಂಡವು. ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ತಿಪ್ಪೇಸ್ವಾಮಿ, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಶೇಖರ್, ಉಡುಪಿ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ವಸಂತ್‌ಕುಮಾರ್, ಕದ್ರಿ ಅಗ್ನಿಶಾಮಕ ಅಧಿಕಾರಿ ಸುನೀಲ್ ಕುಮಾರ್ ಮೊದಲಾದವರಿದ್ದರು.
ಜನರಿಗೆ ಜಾಗೃತಿ
1944 ಎಪ್ರಿಲ್ 14ರಂದು ಮುಂಬಯಿಯಲ್ಲಿ ಘಟಿಸಿದ ಅಗ್ನಿ ದುರಂತದಲ್ಲಿ ಜೀವತ್ಯಾಗ ಮಾಡಿದ ಅಗ್ನಿಶಾಮಕ ಬಂದಿಯ ನೆನಪಿಗಾಗಿ ಪ್ರತಿವರ್ಷ ಈ ಸಪ್ತಾಹ ನಡೆಯುತ್ತಿದೆ. ಎಪ್ರಿಲ್ 14ರಿಂದ 20ರ ತನಕ ಅಗ್ನಿಶಾಮಕ ಸೇವಾ ಸಪ್ತಾಹ ಆಚರಿಸಲಾಗುತ್ತಿದ್ದು, ಅಗ್ನಿ ದುರಂತಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲಾಗುತ್ತಿದೆ.
-ಟಿ.ಎನ್. ಶಿವಶಂಕರ್
ಮುಖ್ಯ ಅಗ್ನಿಶಾಮಕ ಅಧಿಕಾರಿ.