Advertisement

ಪಡುಬಿದ್ರಿ, ಬೈಂದೂರಿನಲ್ಲಿ ಶೀಘ್ರದಲ್ಲೇ ಅಗ್ನಿಶಾಮಕ ಠಾಣೆ

10:54 AM Apr 22, 2019 | keerthan |

ಉಡುಪಿ: ಮಣಿಪಾಲ, ಬೈಂದೂರು, ಹೆಬ್ರಿ, ಬ್ರಹ್ಮಾವರ ಭಾಗಕ್ಕೆ ಅಗ್ನಿ ಶಾಮಕ ಠಾಣೆಯ ಬೇಡಿಕೆಯಿದ್ದು, ಪಡುಬಿದ್ರಿ ಮತ್ತು ಬೈಂದೂರು ಭಾಗದಲ್ಲಿ ಶೀಘ್ರದಲ್ಲೇ ಅಗ್ನಿಶಾಮಕ ಠಾಣೆ ನಿರ್ಮಾಣವಾಗಲಿದೆ.

Advertisement

ಅಗ್ನಿಶಾಮಕ ಠಾಣೆ ಬೇಡಿಕೆಯನ್ನು ಸಾರ್ವ ಜನಿಕರು ಬಹುಕಾಲದಿಂದ ನೀಡುತ್ತಿದ್ದರು. ಕೊನೆಗೂ ಈಗ ಅಗ್ನಿಶಾಮಕ ಮತ್ತು ತುರ್ತುಸೇವಾ ಇಲಾಖೆಯು ಇದಕ್ಕೆ ಸ್ಪಂದಿಸಿದೆ.

ಸಮೀಕ್ಷೆ
ಅಗ್ನಿಶಾಮಕದಳದ ಅಗತ್ಯ ಬಗ್ಗೆ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆ ಸಮೀಕ್ಷೆ ನಡೆಸಿದ್ದು, ಕಾಪು, ಮಣಿಪಾಲ, ಬ್ರಹ್ಮಾವರ, ಬೈಂದೂರಿಗೆ ಅಗ್ನಿ ಶಾಮಕ ಠಾಣೆ ಅಗತ್ಯವಿರುವ ಬಗ್ಗೆ ಸರಕಾರಕ್ಕೆ ವರದಿ ಸಲ್ಲಿಸಲಾಗಿದೆ. ತಾಲೂಕಿಗೊಂದರಂತೆ ಅಗ್ನಿಶಾಮಕ ಠಾಣೆ ಒದಗಿಸಬೇಕು ಎಂಬ ಬೇಡಿಕೆ ಇದ್ದರೂ ಕಾಪುವಿನ ಬದಲು ಪಡುಬಿದ್ರಿಯಲ್ಲಿ ಠಾಣೆ ನಿರ್ಮಿಸುವ ಮೂಲಕ ಜಿಲ್ಲೆಯ ಮೂಲೆ ಮೂಲೆಯಲ್ಲೂ ಸೇವೆ ಲಭಿಸುವ ಉದ್ದೇಶ ಇಲಾಖೆಯದ್ದು.

ಮಣಿಪಾಲಕ್ಕೆ ಬೇಕು ಅಗ್ನಿಶಾಮಕ ಠಾಣೆ
ಶಿಕ್ಷಣ ಸಂಸ್ಥೆ, ವೈದ್ಯಕೀಯ ಕೇಂದ್ರ, ಕೈಗಾರಿಕಾ ಕ್ಷೇತ್ರ, ಜಿಲ್ಲಾಡಳಿತ ಕೇಂದ್ರಗಳಿರುವ ಮಣಿಪಾಲದಲ್ಲಿ ಅಗ್ನಿ ಅವಘಡ ಸಂಭವಿಸಿದರೆ ಅದನ್ನು ನಿಯಂತ್ರಿಸಲು ಅಗ್ನಿ ಶಾಮಕ ದಳ ಘಟಕ ಇಲ್ಲ. ಮಣಿಪಾಲದಲ್ಲಿ ಅಗ್ನಿ ಶಾಮಕದಳ ಘಟಕಕ್ಕೆ ಜಾಗವನ್ನು ನಿಗದಿಪಡಿಸಿ ವರ್ಷಗಳೇ ಕಳೆದಿವೆ. ಜಿಲ್ಲಾ, ತಾಲೂಕು ಕೇಂದ್ರ ಭಾಗದಲ್ಲಿ ಅಗ್ನಿ ಶಾಮಕ ಠಾಣೆಗಳಿವೆ. ಆದರೆ ಗ್ರಾಮಾಂತರ ಭಾಗದಲ್ಲಿ, ಅರಣ್ಯಗಳಲ್ಲಿ ಅಗ್ನಿ ಅವಘಡ ಸಂಭವಿಸಿದರೆ ಜಿಲ್ಲಾ, ತಾಲೂಕು ಕೇಂದ್ರಗಳಿಂದಲೇ ಮಾರು ದೂರ ಸಾಗುವ ಪರಿಸ್ಥಿತಿ ಅಗ್ನಿ ಶಾಮಕದಳದ್ದು.

ಪ್ರತೀ ವರ್ಷ ಅಗ್ನಿ ಆಕಸ್ಮಿಕ ಪ್ರಕರಣ
ಜಿಲ್ಲೆಯಲ್ಲಿ ಪ್ರತೀವರ್ಷ ಬೇಸಗೆಯಲ್ಲಿ ಹೆಚ್ಚಿನ ಕಡೆ ಅಗ್ನಿ ಅವಘಡ ನಡೆಯುತ್ತದೆ. ಕಳೆದ ವರ್ಷ ಜನವರಿ, ಫೆಬ್ರವರಿ, ಮಾರ್ಚ್‌ ತಿಂಗಳಲ್ಲಿ 359 ಅಗ್ನಿ ದುರಂತಗಳು ಸಂಭವಿಸಿದೆ. ಉಡುಪಿಯಲ್ಲಿ 20, ಮಲ್ಪೆಯಲ್ಲಿ 8, ಕಾರ್ಕಳದಲ್ಲಿ 16, ಕುಂದಾಪುರದಲ್ಲಿ 20 ಸಿಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಎಲ್ಲ ಠಾಣೆಗಳಲ್ಲೂ ಠಾಣಾಧಿಕಾರಿಗಳ ಹುದ್ದೆ ಖಾಲಿಯಿದೆ. ಶೀಘ್ರದಲ್ಲೇ ಇದಕ್ಕೆ ನಿಯೋಜನೆಯಾಗಲಿದೆ. ಪ್ರಸ್ತುತ ಉಪ ಠಾಣಾಧಿಕಾರಿಗಳು ನಿಯೋಜನೆಯಲ್ಲಿದ್ದಾರೆ.

Advertisement

ಇಲಾಖೆಗೆ ವರದಿ
ಮಣಿಪಾಲ ಸೇರಿದಂತೆ ಬ್ರಹ್ಮಾವರ, ಕಾಪು, ಬೈಂದೂರು ಅಗ್ನಿ ಶಾಮಕ ದಳ ಘಟಕ ನಿರ್ಮಾಣಕ್ಕಾಗಿ ಇಲಾಖೆಗೆ ವರದಿ ಸಲ್ಲಿಸಲಾಗಿದೆ. ಪಡುಬಿದ್ರಿ ಮತ್ತು ಬೈಂದೂರಿನಲ್ಲಿ ಶೀಘ್ರದಲ್ಲೇ ಅಗ್ನಿಶಾಮಕ ಠಾಣೆ ನಿರ್ಮಾಣವಾಗಲಿದೆ.
-ವಸಂತ ಕುಮಾರ್‌, ಜಿಲ್ಲಾ ಅಗ್ನಿ ಶಾಮಕದಳ ಅಧಿಕಾರಿ

ಪುನೀತ್‌ ಸಾಲ್ಯಾನ್‌

Advertisement

Udayavani is now on Telegram. Click here to join our channel and stay updated with the latest news.

Next