ಕಾರಟಗಿ: ಪಟ್ಟಣದ ಅಗ್ನಿಶಾಮಕ ಠಾಣೆ ವತಿಯಿಂದ ಅಗ್ನಿಶಾಮಕ ಸಪ್ತಾಹ ಕಾರ್ಯಕ್ರಮಕ್ಕೆ ಗುರುವಾರ ಚಾಲನೆ ನೀಡಲಾಯಿತು.
ಬೆಳಗ್ಗೆ ಅಗ್ನಿಶಾಮಕ ಠಾಣೆಯ ಕಚೇರಿಯಲ್ಲಿ ಠಾಣಾಧಿಕಾರಿ ರಾಮಪ್ಪ ಹಾಗೂ ಸಿಬ್ಬಂದಿ ನೇತೃತ್ವದಲ್ಲಿ ಅಗ್ನಿ ಅವಘಡದಲ್ಲಿ ಹುತಾತ್ಮರಾದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಗೌರವ ನಮನ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಪ್ರಭಾರಿ ಠಾಣಾಧಿಕಾರಿ ರಾಮಪ್ಪ ಮಾತನಾಡಿ, ಏಪ್ರಿಲ್ 14ರಿಂದ 20ರವರೆಗೆ ಅಗ್ನಿ ಶಾಮಕ ಸೇವಾ ಸಪ್ತಾಹದ ಅಂಗವಾಗಿ ಈ ಬಾರಿ ಧ್ಯೇಯ ವಾಕ್ಯವನ್ನಾಗಿ “ಅಗ್ನಿ ಸುರಕ್ಷತೆಯನ್ನು ಕಲಿಯಿರಿ’ ಮತ್ತು “ಉತ್ಪಾದಕತೆಯನ್ನು ಹೆಚ್ಚಿಸಿರಿ’ ಎನ್ನುವ ಬಗ್ಗೆ ಸಾರ್ವಜನಿಕರಲ್ಲಿ ಅರಿವು, ಜಾಗೃತಿ ಮೂಡಿಸಲಾಗುತ್ತಿದೆ. ನಾಗರಿಕರು ಅಗ್ನಿ ಅನಾಹುತ ಸಂಭವಿಸಿದಾಗ ಯಾವುದೇ ಆತಂಕಕ್ಕೆ ಒಳಗಾಗದೇ ಸಂಯಮದಿಂದ ಇಲಾಖೆ ನೀಡಿರುವ ಸಲಹೆ ಸೂಚನೆಗಳನ್ನು ಪಾಲನೆ ಮಾಡಬೇಕು ಎನ್ನುವುದನ್ನು ತಿಳಿಸಲಾಗುವುದು.
ಈ ಸಪ್ತಾಹದ ಅವಧಿಯಲ್ಲಿ ಅಗ್ನಿ ಸುರಕ್ಷತೆಯ ಬಗ್ಗೆ ತಿಳಿವಳಿಕೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ವಿವಿಧ ಸಂಘ-ಸಂಸ್ಥೆಗಳು, ಕೈಗಾರಿಕಾ ಕೇಂದ್ರಗಳು, ವಿದ್ಯಾ ಸಂಸ್ಥೆಗಳು, ಬಹು ಮಹಡಿ ಕಟ್ಟಡ, ವಾಣಿಜ್ಯ ಸಂಕೀರ್ಣಗಳಲ್ಲಿ ಅಗ್ನಿ ಸುರಕ್ಷತೆ ಬಗ್ಗೆ ಉಪನ್ಯಾಸ, ಪ್ರಾತ್ಯಕ್ಷಿಕೆ, ಅಣಕು ಪ್ರದರ್ಶನ ಆಯೋಜಿಸಿ ಸಾರ್ವಜನಿಕರಲ್ಲಿ ಅಗ್ನಿ ಸುರಕ್ಷತೆ ಬಗ್ಗೆ ತಿಳುವಳಿಕೆ ನೀಡಲಾಗುವುದು ಎಂದರು.
ನಂತರ ಅಗ್ನಿ ಶಾಮಕ ಠಾಣೆ ಸಿಬ್ಬಂದಿ ಪಟ್ಟಣದ ಸಾರ್ವಜನಿಕ ಸ್ಥಳಗಳಲ್ಲಿ ಉಪನ್ಯಾಸ ಮತ್ತು ಅಣಕು ಪ್ರದರ್ಶನದ ಮೂಲಕ ನಾಗರಿಕರನ್ನು ಜಾಗೃತಗೊಳಿಸಲು ಕರಪತ್ರ ವಿತರಿಸಿತು. ಸಾರ್ವಜನಿಕರನ್ನು ಒಂದೆಡೆ ಸೇರಿಸಿ ಬೆಂಕಿ ಅನಾಹುತ ಉಂಟಾದಾಗ ಕೈಗೊಳ್ಳಬೇಕಾದ ಮುಂಜಾಗೃತಾ ಕ್ರಮಗಳ ಕುರಿತು ಉಪನ್ಯಾಸ ನೀಡಲಾಯಿತು.
ಅಗ್ನಿಶಾಮಕ ಸಿಬ್ಬಂದಿ ಅಶೋಕ, ರಾಘವೇಂದ್ರ, ಅಕ್ಬರ್ ಸಾಬ್, ಕೃಷ್ಣ ರಾಥೋಡ್, ಸೋಮನಗೌಡ, ಸುರೇಶಕುಮಾರ್, ಕಿರಣ್, ವೀರರಾಜು, ಚಂದ್ರಶೇಖರ, ಪರಸಪ್ಪ, ಮಾನಪ್ಪ, ವಿನೋದ ಇತರರಿದ್ದರು.