ಬೆಂಗಳೂರು: ರಾಜ್ಯದಲ್ಲಿರುವ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಶಾಲೆಗಳ ಕಟ್ಟಡಗಳ ಅಗ್ನಿ ಸುರಕ್ಷತೆ ನಿರಾಪೇಕ್ಷಣ ಪ್ರಮಾಣಪತ್ರ ಪಡೆಯಲು ಇರುವ ಮಾನದಂಡಗಳ ವಿಚಾರಕ್ಕೆ ಸಂಬಂಧಿಸಿದ ಗೊಂದಲಗಳಿಗೆ ಶೀಘ್ರ ಇತಿಶ್ರೀ ಹಾಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ.
ಕಾಂಗ್ರೆಸ್ ಸದಸ್ಯ ಕೆ. ಹರೀಶ್ ಕುಮಾರ್ ಪ್ರಸ್ತಾವಿಸಿದ ವಿಷಯ ಬೆಂಬಲಿಸಿ ಸದಸ್ಯರಾದ ಎಸ್.ವಿ. ಸಂಕನೂರು, ಮಂಜುನಾಥ ಭಂಡಾರಿ, ಶಶೀಲ್ ನಮೋಶಿ, ಅರುಣ್ ಶಹಾಪುರ, ಕೆ.ಟಿ. ಶ್ರೀಕಂಠೇಗೌಡ, ಮರಿತಿಬ್ಬೇಗೌಡ ಮತ್ತಿತರರು ಮಾತನಾಡಿ, ನಿಯಮಗಳು ಸಡಿಲಗೊಳಿಸಬೇಕು ಎಂದು ಒತ್ತಾಯಿಸಿದ್ದಕ್ಕೆ ಸಚಿವರು ಉತ್ತರಿಸಿದರು.
ಸಮಸ್ಯೆ ಸರಕಾರದ ಗಮನಕ್ಕೆ ಬಂದಿದೆ. ಕೋರ್ಟ್ ಆದೇಶವನ್ನು 3 ವರ್ಷಗಳ ಅನಂತರ ಅಂದರೆ, 2017ರಲ್ಲಿ ಜಾರಿಗೆ ತರಲಾಯಿತು. ಪ್ರತೀ ವರ್ಷ ನೋಂದಣಿಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಈ ವಿಚಾರವಾಗಿ 6 ತಿಂಗಳಲ್ಲಿ 6 ಸಭೆಗಳನ್ನು ನಡೆಸಲಾಗಿದೆ. ಸುಪ್ರೀಂಕೋರ್ಟ್ ತೀರ್ಪು ಪಾಲಿಸಬೇಕು ಹಾಗೂ ಎಸ್.ವಿ. ಸಂಕನೂರು ಅವರ ವರದಿಯನ್ನು ಪರಿಗಣಿಸಬೇಕು. ಮುಖ್ಯಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಒಂದಿಷ್ಟು ವಿಚಾರಗಳನ್ನು ಅಂತಿಮಗೊಳಿಸಲಾಗಿದೆ. ಮುಂದಿನ ನವೀಕರಣ ಅವಧಿಯೊಳಗೆ ಈ ಸಮಸ್ಯೆಗೆ ಇತಿಶ್ರೀ ಹಾಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಸರಕಾರಿ ಶಾಲೆಗಳು ಶೇ. 99ರಷ್ಟು ತಳಮಹಡಿಯಲ್ಲಿವೆ. ಅದಾಗ್ಯೂ ಆವಶ್ಯವಿರುವ ಸರಕಾರಿ ಶಾಲೆಗಳಲ್ಲಿ ಅಗ್ನಿ ಸುರಕ್ಷತೆಯ ಕನಿಷ್ಟ ಮಾನದಂಡಗಳನ್ನು ನಿಗದಿಪಡಿಸುವ ಬಗ್ಗೆ ಪರಿಶೀಲಿಸಲಾಗುವುದು. ಖಾಸಗಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಮೊದಲ ಮಹಡಿ ಮತ್ತು 2ನೇ ಮಹಡಿಗೆ ಯಾವ ವ್ಯವಸ್ಥೆ ಇರಬೇಕು. ಈಗಿರುವ ಮಾನದಂಡಗಳಲ್ಲಿ ಎಷ್ಟು ಕಡಿಮೆ ಮಾಡಬಹುದು. ನಿರಪೇಕ್ಷಣಾ ಪತ್ರ ಪಡೆದುಕೊಳ್ಳುವ ಶುಲ್ಕ ಕಡಿಮೆ ಮಾಡುವುದು, ಪರವಾನಿಗೆ ಅವಧಿಯಲ್ಲಿ 3 ವರ್ಷಕ್ಕೆ ಸಿಮೀತಗೊಳಿಸುವ, ಕಟ್ಟಡ ಸುರಕ್ಷತೆ ತಪಾಸಣೆಯಲ್ಲಿ ಸ್ಥಳೀಯ ಎಇಇ ಹಾಗೂ ಅಗ್ನಿ ಸುರಕ್ಷತ ತಪಾಸಣೆಯನ್ನು ಜಿಲ್ಲಾ ಅಗ್ನಿ ಸುರಕ್ಷಾ ಅಧಿಕಾರಿಗೆ ನೀಡುವ ವಿಚಾರಗಳ ಬಗ್ಗೆ ಪರಿಶೀಲನೆ ನಡೆದಿದೆ. ಶೀಘ್ರದಲ್ಲೇ ಗೊಂದಲ ಬಗೆಹರಿಯಲಿದೆ ಎಂದು ಸಚಿವರು ತಿಳಿಸಿದರು.