ಕುಂದಾಪುರ: ದಿಲ್ಲಿಯ ನಿಜಾಮುದ್ದೀನ್‌ನಿಂದ ಕೇರಳದ ಎರ್ನಾಕುಲಂಗೆ ತೆರಳುತ್ತಿದ್ದ ಮಂಗಳ ಎಕ್ಸ್‌ಪ್ರೆಸ್ ರೈಲಿನ ಎಸಿ ಕೋಚ್‌ನಲ್ಲಿ ಶನಿವಾರ ತಡರಾತ್ರಿ ಬೆಂಕಿ ಕಾಣಿಸಿಕೊಂಡು ಭೀತಿ ಸೃಷ್ಟಿಯಾಯಿತು. ಆದರೆ, ಅದೇ ಬೋಗಿಯಲ್ಲಿದ್ದ ಮಹಿಳೆಯೊಬ್ಬರ ಸಮಯ ಪ್ರಜ್ಞೆಯಿಂದ ಸಂಭಾವ್ಯ ಭಾರೀ ಅನಾಹುತ ತಪ್ಪಿತು.
ಈ ರೈಲು ತಡರಾತ್ರಿ 1.20ರ ವೇಳೆಗೆ ಬೈಂದೂರು ದಾಟಿ ಖಂಬದಕೋಣೆ ಕಬ್ಬಿನಗದ್ದೆ ಬಳಿ ತಲುಪುವಾಗ ಎಸಿ ಕೋಚ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತು. ಎಲ್ಲ ಪ್ರಯಾಣಿಕರು ಗಾಢ ನಿದ್ದೆಯಲ್ಲಿದ್ದುದರಿಂದ ಆರಂಭದಲ್ಲಿ ಬೆಂಕಿ ಹೊತ್ತಿಕೊಂಡಿರುವುದು ಯಾರ ಗಮನಕ್ಕೂ ಬಂದಿರಲಿಲ್ಲ.
ಮುಂದೆ ಕುಂದಾಪುರ ನಿಲ್ದಾಣದಲ್ಲಿ ಇಳಿಯಬೇಕಿದ್ದ ಮಹಿಳೆಯೊಬ್ಬರು ಎಚ್ಚರವಾದಾಗ ಬೋಗಿಯಲ್ಲಿ ಬೆಂಕಿ ಕಂಡು ಗಾಬರಿಯಾದರು. ತಕ್ಷಣ ಜಾಗೃತರಾದ ಆಕೆ, ರೈಲಿನ ಸಿಬ್ಬಂದಿಯ ಗಮನಕ್ಕೆ ಇದನ್ನು ತಂದರು. ಕೂಡಲೇ ರೈಲನ್ನು ಬೈಂದೂರು ತಾಲೂಕಿನ ಸೇನಾಪುರ ಮತ್ತು ಬಿಜೂರು ಗ್ರಾಮದ ಮಧ್ಯೆ ನಿಲ್ಲಿಸಿ ಬೆಂಕಿ ನಂದಿಸಲಾಯಿತು.
ಅಗ್ನಿಶಾಮಕ ದಳಕ್ಕೆ ಮಾಹಿತಿ ರವಾನಿಸಿದ್ದರೂ ಅವರು ಬರುವುದರೊಳಗೆ ಸ್ಥಳೀಯರೇ ಬೆಂಕಿ ನಂದಿಸುವಲ್ಲಿ ಯಶ್ವಸಿಯಾದರು. ಎಸಿ ಗ್ಲಾಸ್ ಒಡೆಯುವಾಗ ಸಂಭವಿಸಿದ ಸಣ್ಣಪುಟ್ಟ ಗಾಯ ಹೊರತುಪಡಿಸಿ ಎಲ್ಲ ಪ್ರಯಾಣಿಕರೂ ಕ್ಷೇಮವಾಗಿದ್ದಾರೆ. ಒಬ್ಬ ಮಹಿಳೆಗೆ ಸಣ್ಣಮಟ್ಟಿಗೆ ರಕ್ತದೊತ್ತಡ ಸಮಸ್ಯೆ ಕಾಣಿಸಿಕೊಂಡಿತಾದರೂ ಕೂಡಲೇ ಚೇತರಿಸಿಕೊಂಡ ಕಾರಣ ಪ್ರಯಾಣ ಮುಂದುವರಿಸಿದರು. ರೈಲಿನಲ್ಲಿ ನೂರಾರು ಪ್ರಯಾಣಿಕರಿದ್ದರು.
ಬೆಂಕಿ ಹತ್ತಿದ ಬಿ4 ಬೋಗಿ ಭಾಗಶಃ ಸುಟ್ಟು ಹೋಗಿದೆ. ರೈಲನ್ನು ಮರಳಿ ಬಿಜೂರು ನಿಲ್ದಾಣಕ್ಕೆ ತಂದು ಪ್ರತ್ಯೇಕಿಸಿ, ಪ್ರಯಾಣಿಕರಿಗೆ ಬದಲಿ ವ್ಯವಸ್ಥೆ ಮಾಡಿ ಬೆಳಗಿನ ಜಾವ 5ರ ವೇಳೆಗೆ ರೈಲನ್ನು ಮುಂದಕ್ಕೆ ಕಳುಹಿಸಲಾಯಿತು. ಪ್ರಯಾಣಿಕರು ಸುರಕ್ಷಿತವಾಗಿ ಎರ್ನಾಕುಲಂ ತಲುಪಿದ್ದಾರೆ. ಎಸಿ ಬೋಗಿಯಲ್ಲಿ ಶಾರ್ಟ್ ಸರ್ಕ್ನೂಟ್ ಆದುದು ಈ ದುರ್ಘಟನೆಗೆ ಕಾರಣ ಎನ್ನಲಾಗಿದೆ.
ಕೊಂಕಣ ರೈಲ್ವೆಯ ಇತಿಹಾಸದಲ್ಲಿ ಇಂತಹ ಬೆಂಕಿ ದುರ್ಘಟನೆ ಇದೇ ಪ್ರಥಮ ಎನ್ನಲಾಗಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.