Advertisement

ಹುಲ್ಲುಗಾವಲಿಗೆ ಬೆಂಕಿ: ಪ್ರಕೃತಿಗೆ ಮಾಡುವ ಘೋರ ಅಪಚಾರವೆ?

11:00 AM Apr 22, 2019 | Team Udayavani |

ಉಡುಪಿ: ನಾವು ರಸ್ತೆ ಗಳಲ್ಲಿ ಹೋಗುವಾಗ ರಸ್ತೆ ಬದಿ ಬೆಂಕಿ ಅನಾಹುತಗಳು ಆಗುವುದನ್ನು ನೋಡುತ್ತೇವೆ. ಇದು ನಗರದ ರಸ್ತೆ ಬದಿ ಮಾತ್ರವಲ್ಲದೆ ಗ್ರಾಮಾಂತರದ ಗದ್ದೆ ಬದಿಗಳಲ್ಲಿಯೂ ಸರ್ವೇ ಸಾಮಾನ್ಯವಾಗಿದೆ. ಕೆಲವು ಬಾರಿ ಇದು ಆಕಸ್ಮಿಕವಾಗಿ ನಡೆಯುವುದಿದೆ. ಕೆಲವರು ಉದ್ದೇಶಪೂರ್ವಕವಾಗಿ ಬೆಂಕಿ ಹಾಕುತ್ತಾರೆ. ಇದರಿಂದ ಆಗುವ ಪ್ರಯೋಜನವೇನು ಎಂದರೆ ಏನೂ ಇಲ್ಲ, ಆದರೆ ದುಷ್ಪರಿಣಾಮ ಮಾತ್ರ ತೀವ್ರವಾಗಿರುತ್ತವೆ.

Advertisement

ಹುಲ್ಲುಗಾವಲಿಗೆ ಬೆಂಕಿಯು ವಾಯು ಮಾಲಿನ್ಯಕ್ಕೆ ಪ್ರಧಾನ ಕಾರಣವಾಗುತ್ತದೆ. ದಿಲ್ಲಿಯ ವಾಯುಮಾಲಿನ್ಯಕ್ಕೆ ಪಂಜಾಬಿನಲ್ಲಿ ಹುಲ್ಲುಗಾವಲಿಗೆ ಹಾಕುವ ಬೆಂಕಿಯೇ ಕಾರಣ ಎಂದು ಅಧ್ಯಯನಗಳು ತಿಳಿಸಿವೆ.

ಅನಾಹುತಗಳಿಗೆ ಕಾರಣ
ರಸ್ತೆ ಬದಿಗಳಲ್ಲಿ ಹುಲ್ಲುಗಳು ಹುಟ್ಟಿ ಒಣಗಿರುತ್ತವೆ. ದಾರಿಹೋಕರು ಬೀಡಿ- ಸಿಗರೇಟು ಸೇದಿ ಎಸೆವ ಕಾರಣ ಬೆಂಕಿ ಹತ್ತಿಕೊಳ್ಳುತ್ತದೆ. ಅಲ್ಲೇ ವಿದ್ಯುತ್‌ ತಂತಿಗಳು ಹಾದು ಹೋಗುತ್ತಿದ್ದರೆ ಭಾರೀ ಅನಾಹುತದ ಸಾಧ್ಯತೆ ಇರುತ್ತದೆ. ಗ್ರಾಮಾಂತರ ಪ್ರದೇಶಗಳಲ್ಲಿ ಗದ್ದೆ ನಾಟಿ ಮಾಡದ ಕಾರಣ ಹುಲ್ಲುಗಳಿಗೆ ಬೆಂಕಿ ಹಾಕುತ್ತಾರೆ. ಆದರೆ ಇದು ವಿಕೋಪಕ್ಕೆ ತಿರುಗಿದರೆ ಅದನ್ನು ನಿಯಂತ್ರಿಸಲು ಅಗ್ನಿಶಾಮಕದಳ ದೂರದಿಂದ ಬಂದು ಹೆಣಗಾಡಬೇಕಾಗುತ್ತದೆ.

ಸರೀಸೃಪಗಳಿಗೆ ಹಾನಿ
ಗ್ರಾಮಾಂತರ ಮತ್ತು ನಗರ ಪ್ರದೇಶಗಳ ಹುಲ್ಲುಗಾವಲುಗಳಲ್ಲಿ ಸರ್ಪವೂ ಸೇರಿ ದಂತೆ ಹಲವು ಜೀವ ಜಂತುಗಳು ಬೆಂಕಿಗೆ ಸಿಲುಕಿ ಅಸುನೀಗುತ್ತವೆ. ಹಿರಿಯಡಕ ಸಮೀಪದ ಕೋಟ್ನಕಟ್ಟೆಯಲ್ಲಿ ಇಂತಹ ಅಗ್ನಿ ದುರಂತದಲ್ಲಿ ನಾಗರ ಹಾವೊಂದು ಸುಟ್ಟು ಕರಕಲಾಗಿ ಹೋಗಿತ್ತು ಎಂಬುದನ್ನು ಉರಗ ತಜ್ಞ ಗುರುರಾಜ ಸನಿಲ್‌ ಬೆಟ್ಟು ಮಾಡುತ್ತಾರೆ. “ನಾವು ಕೇವಲ ದೊಡ್ಡ ಮರಗಳಿಗೆ ಮಾತ್ರವಲ್ಲ, ಸಾಮಾನ್ಯ ಹುಲ್ಲುಗಾವಲಿನ ಬೆಂಕಿ ಅನಾಹುತವನ್ನೂ ಗಂಭೀರವಾಗಿ ಪರಿಗಣಿಸುತ್ತಿದ್ದೇವೆ’ ಎನ್ನುತ್ತಾರೆ ಕಾರ್ಕಳ ಕುದುರೆಮುಖ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ರುದ್ರನ್‌.

ಈ ಸಮಯದಲ್ಲಿ ಹಾವುಗಳು ಹುಲ್ಲುಗಾವಲು, ಹುತ್ತ, ಇಲಿ, ಹೆಗ್ಗಣಗಳ ಬಿಲಗಳಲ್ಲಿ ಮೊಟ್ಟೆ ಇಟ್ಟು ಅವುಗಳಿಗೆ ರಕ್ಷಣೆ ಒದಗಿಸುತ್ತವೆ. ಬೆಂಕಿಯಲ್ಲಿ ಹಾವುಗಳು ಸತ್ತು ಹೋದರೆ ಇತರ ಜೀವಿಗಳು ಮೊಟ್ಟೆ ನಾಶ ಮಾಡುವ ಸಾಧ್ಯತೆ ಇರುತ್ತದೆ. ಇದೇ ವೇಳೆ ಮೊಟ್ಟೆಯಿಂದ ಹುಟ್ಟುವ ಸಂತತಿಗೆ ಆಹಾರ ಒದಗಿಸುವ ಇತರ ಸೂಕ್ಷ್ಮ ಜೀವಿಗಳೂ ಸತ್ತು ಹೋಗಿ ಇಡೀ ಹಾವಿನ ಸಂತತಿಗೆ ಸಮಸ್ಯೆಯಾಗುತ್ತದೆ. ಮರ ಗಿಡಗಳು ಸುಡುವಾಗ ಭೂಮಿಯ ಒಂದು-ಒಂದೂವರೆ ಅಡಿ ನೆಲವು ಬಿಸಿಯಾಗಿ ಭ್ರೂಣಗಳು ನಾಶವಾಗುತ್ತವೆ. ಹೀಗೆ ಪರಿಸರದ ಎಲ್ಲ ವ್ಯವಸ್ಥೆಗಳೂ ಏರುಪೇರಾಗಲಿದೆ ಎಂಬ ಕಳವಳವನ್ನು ಗುರುರಾಜ ಸನಿಲ್‌ ವ್ಯಕ್ತಪಡಿಸುತ್ತಾರೆ.

Advertisement

ಪ್ರಯೋಜನವಿಲ್ಲ
ತರಗೆಲೆ, ಹುಲ್ಲು ಇತ್ಯಾದಿಗಳಿಗೆ ಬೆಂಕಿ ಕೊಡುವುದರಿಂದ ತರಗೆಲೆ, ಹುಲ್ಲಿನಲ್ಲಿ ರುವ ಸಾರದ ಶೇ.10 ಅಂಶ ಕೂಡ ಉಳಿಯುವುದಿಲ್ಲ. ಇಂತಹ ಸಾವಯವ ಕಸವನ್ನು ಗಿಡ ಮರದ ಬುಡದಲ್ಲಿ ಹರಡಿದರೆ ನೀರಿನ ತೇವಾಂಶ ಉಳಿಯುತ್ತದೆ. ವಾರದಲ್ಲಿ ಒಂದು ಬಾರಿ ನೀರುಣಿಸಿದರೂ ಸಾಕಾಗುತ್ತದೆ. ಸುಡುಬೂದಿಯನ್ನು ಊಟಕ್ಕೆ ಉಪ್ಪಿನಂತೆ, ಔಷಧಿಯಂತೆ ಬಳಸಬೇಕೆ ವಿನಾ ಅದನ್ನೇ ಪ್ರಧಾನವಾಗಿಸಿ ದರೆ ಇಡೀ ಭೂ ಪ್ರಕೃತಿಗೆ ತೊಂದರೆ ಕೊಟ್ಟಂತೆ. ನಾವು ಅಲ್ಲಲ್ಲಿ ನಡೆಯುವ ಕೃಷಿಕರ ಸಭೆಗಳಲ್ಲಿ ಈ ಬಗ್ಗೆ ಎಚ್ಚರ ಕೊಡುತ್ತಿ
ದ್ದೇವೆ ಎಂದು ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮಾ ಹೇಳುತ್ತಾರೆ.

ಮನುಷ್ಯ ಪ್ರಕೃತಿಗೆ ಭಾರವಾಗಬಾರದು
ಹುಲ್ಲುಗಾವಲು, ತರಗೆಲೆಗಳಿಗೆ ಬೆಂಕಿ ಕೊಡುವುದು ಪ್ರಕೃತಿಗೆ ಘೋರವಾದ ಅಪಚಾರ ಎಸಗಿದಂತೆ. ಇದರಿಂದ ಜನರಿಗೂ ತೊಂದರೆ ಇದೆ. ಜನರು ಪ್ರಕೃತಿಗೆ ಭಾರವಾಗುವ ರೀತಿಯಲ್ಲಿ ವ್ಯವಹರಿಸಬಾರದು.
ರಾಮಕೃಷ್ಣ ಶರ್ಮಾ ಬಂಟಕಲ್ಲು, ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷರು

ಫೈಯರ್‌ ಲೈನ್‌ ಸಹಿತ ಸರ್ವ ಕ್ರಮ
ಕಾಡಿನಲ್ಲಿ ಬೆಂಕಿ ಅನಾಹುತಗಳ ತಡೆಗೆ ಫೈಯರ್‌ ಲೈನ್‌ ಸಹಿತ ಸರ್ವ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ. ಇತ್ತೀಚಿಗೆ ಸ್ವಲ್ಪ ಮಳೆ ಬಂದ ಬಳಿಕ ಬೆಂಕಿ ಅನಾಹುತಗಳು ಕಡಿಮೆಯಾಗಿದೆ. ಬೆಂಕಿ ಅನಾಹುತಗಳಿಂದ ಜೀವಸಂಕುಲಗಳು ನಾಶವಾಗುತ್ತವೆ.
ರುದ್ರನ್‌, ಉಪಅರಣ್ಯ ಸಂರಕ್ಷಣಾಧಿಕಾರಿಗಳು,  ಕಾರ್ಕಳ ಕುದುರೆಮುಖ ವನ್ಯಜೀವಿ ವಿಭಾಗ

ಜೀವ ಸಂಕುಲಗಳು ನಾಶ
ಹುಲ್ಲುಗಾವಲಿಗೆ ಬೆಂಕಿ ಹಾಕಿದರೆ ನಾಗರ ಹಾವು ಸಹಿತ ಅನೇಕ ಜೀವ ಸಂಕುಲಗಳು ನಾಶವಾಗುತ್ತವೆ. ಇದಕ್ಕಾಗಿ ನಾವು ಬಹಳಷ್ಟು ಬೆಲೆ ತೆರಬೇಕಾಗುತ್ತದೆ.
ಗುರುರಾಜ ಸನಿಲ್‌, ಉರಗತಜ್ಞರು, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next