Advertisement

ಮಂಡ್ಯದಲ್ಲಿ ಅಗ್ನಿ ಅವಘಡ : ತಂದೆ ಎದುರೇ ಮಗು ಸಜೀವ ದಹನ

09:01 PM Apr 03, 2021 | Team Udayavani |

ಮಂಡ್ಯ: ಅಗ್ನಿ ದುರಂತದಲ್ಲಿ ನಾಲ್ಕು ವರ್ಷದ ಮಗು ಸೇರಿ ಇಬ್ಬರು ಸಜೀವ ದಹನವಾಗಿ, ಮತ್ತೊಬ್ಬ ವ್ಯಕ್ತಿಗೆ ಗಂಭೀರ ಸ್ವರೂಪದ ಸುಟ್ಟ ಗಾಯಗಳಾಗಿರುವ ಘಟನೆ ನಾಗಮಂಗಲ ತಾಲೂಕಿನ ಬೆಳ್ಳೂರು ಹೋಬಳಿಯ ಅಗಚಹಳ್ಳಿ ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ ಸಂಭವಿಸಿದೆ.

Advertisement

ಹಾಸನ ಮೂಲದ ದೀಪಕ್ (33) ಹಾಗೂ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಸಂಸೆ ಗ್ರಾಮದ ಭರತ್ ಎಂಬುವರ ಪುತ್ರ ತನ್ವಿಕ್(4) ಅಗ್ನಿ ದುರಂತದಲ್ಲಿ ಸಜೀವ ದಹನವಾಗಿರುವ ದುರ್ದೈವಿಗಳು. ಮಗುವಿನ ತಂದೆ ಭರತ್(40) ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಳೆದ 8 ವರ್ಷಗಳ ಹಿಂದೆ ಅಂತರ್ಜಾತಿ ವಿವಾಹವಾಗಿದ್ದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಸಂಸೆ ಗ್ರಾಮದ ಭರತ್ ಎಂಬಾತ ಪತ್ನಿಯೊಂದಿನ ಮನಸ್ತಾಪದ ಹಿನ್ನೆಲೆಯಲ್ಲಿ ಕೆಲ ವರ್ಷಗಳಿಂದ ಪೇಂಟಿಂಗ್ ಕೆಲಸ ಮಾಡಿಕೊಂಡು ತಾಲೂಕಿನ ಬೆಳ್ಳೂರು ಸಮೀಪದ ಅಗಚಹಳ್ಳಿಯ ಬಾಡಿಗೆ ಮನೆಯೊಂದರಲ್ಲಿ ತನ್ನ ನಾಲ್ಕು ವರ್ಷದ ಮಗನೊಂದಿಗೆ ವಾಸವಾಗಿದ್ದರು.

ಶುಕ್ರವಾರ ಸಂಜೆ ತನ್ನ ಸಂಬಂಧಿ, ಹಾಸನ ಮೂಲದ ದೀಪಕ್ ಎಂಬುವರು ಸ್ನೇಹಿತರೊಬ್ಬರ ಜತೆಗೂಡಿ ಭರತ್ ಮನೆಗೆ ಬಂದಿದ್ದರು. ಈ ವೇಳೆ ರಾತ್ರಿ ಮೂವರೂ ಸಹ ಪಾನಗೋಷ್ಠಿ ನಡೆಸಿದ್ದರು. ನಂತರ ದೀಪಕ್ ಜತೆಯಲ್ಲಿ ಬಂದಿದ್ದ ಸ್ನೇಹಿತನೊಬ್ಬ ತಡರಾತ್ರಿ ಸಮಯದಲ್ಲಿ ಮನೆಯ ಮುಂಬಾಗಿಲಿಗೆ ಬೀಗ ಹಾಕಿಕೊಂಡು ಹೋಗಿದ್ದಾನೆ. ಈ ವೇಳೆ ಅವಘಡ ಸಂಭವಿಸಿದ್ದು, ದೀಪಕ್ ಜತೆಯಲ್ಲಿ ಬಂದಿದ್ದ ಸ್ನೇಹಿತನೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಹೋಗಿರಬಹುದೆಂಬ ಶಂಕೆ ವ್ಯಕ್ತವಾಗಿದ್ದು, ಘಟನೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.

ಅಗ್ನಿ ದುರಂತದಲ್ಲಿ ನಾಲ್ಕು ವರ್ಷದ ತನ್ನ ಮಗ ಸಜೀವ ದಹನವಾಗುತ್ತಿದ್ದನ್ನು ರಕ್ಷಿಸಲು ಮುಂದಾದ ಭರತ್‌ಗೆ ಶೇ.70ರಷ್ಟು ಸುಟ್ಟಗಾಯಗಳಾಗಿದ್ದು ಆತನ ಚೀರಾಟ ಕೇಳಿದ ಸ್ಥಳೀಯರು ಸ್ಥಳಕ್ಕೆ ದೌಡಾಯಿಸಿದರು. ಆದರೆ, ಅಷ್ಟರಲ್ಲೆ ಸ್ಥಳದಲ್ಲಿಯೇ ಇಬ್ಬರು ಸಾವನ್ನಪ್ಪಿದ್ದರು.

Advertisement

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಬೆಳ್ಳೂರು ಠಾಣೆಯ ಪೊಲೀಸರು ಪರಿಶೀಲನೆ ನಡೆಸಿದ ಬಳಿಕ ಗಂಭೀರ ಸ್ವರೂಪದಲ್ಲಿ ಗಾಯಗೊಂಡಿದ್ದ ಭರತ್‌ನನ್ನು ಸಮೀಪದ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಿ ಇಬ್ಬರ ಮೃತದೇಹಗಳನ್ನು ಅದೇ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿ ಮರಣೋತ್ತರ ಪರೀಕ್ಷೆಗೊಳಪಡಿಸಿದ್ದಾರೆ.

ಶನಿವಾರ ಬೆಳಿಗ್ಗೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಧನಂಜಯ, ಡಿವೈಎಸ್‌ಪಿ ನವೀನ್‌ಕುಮಾರ್, ವೃತ್ತ ನಿರೀಕ್ಷಕ ಸುಧಾಕರ್ ಮತ್ತು ಬೆಳ್ಳೂರು ಠಾಣೆಯ ಪಿಎಸ್‌ಐ ರಾಮಚಂದ್ರು ಘಟನಾ ಸ್ಥಳ ಮತ್ತು ಆಸ್ಪತ್ರೆಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿ ಅಗತ್ಯ ಮಾಹಿತಿ ಪಡೆದುಕೊಂಡಿದ್ದಾರೆ. ಈ ಸಂಬಂಧ ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೆತ್ತಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next