ಕಲಬುರಗಿ: ನಗರದ ಸೂಪರ್ ಮಾರ್ಕೆಟ್‌ನಲ್ಲಿ ರವಿವಾರ ರಾತ್ರಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಬೆಂಕಿ ನಂದಿಸಲು ಹೋದ ಅಗ್ನಿಶಾಮಕ ದಳದ ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದಾರೆ.
ರಮೇಶ ಪವರ್ (55) ಎಂಬುವವರೇ ಮೃತ ಸಿಬ್ಬಂದಿ. ಇಲ್ಲಿನ ಕೆನರಾ ಬ್ಯಾಂಕ್‌ಗೆ ಸೇರಿದ ಹಳೆಯ ಜನರೇಟರ್ ನಿಂದ ಬೆಂಕಿ ಹೊತ್ತಿಕೊಂಡು ಈ ದುರಂತ ಸಂಭವಿಸಿದೆ.
ಬ್ಯಾಂಕ್‌ನ ಹಿಂಬದಿಯ ಕಟ್ಟಡದಲ್ಲಿ ಜನರೇಟರ್ ಇರಿಸಲಾಗಿದ್ದು, ರಾತ್ರಿ 7:30ರ ಸುಮಾರಿಗೆ ಜನರೇಟರ್‌ನಿಂದ ಹೊಗೆಯ ವಾಸನೆ ಬಂದಿದೆ. ಇದನ್ನರಿತ ಕಟ್ಟಡದ ಮುಂಭಾಗದಲ್ಲಿ ಮಣ್ಣಿನ ಪಾತ್ರೆಗಳನ್ನು ಮಾರಾಟ ಮಾಡುತ್ತಿದ್ದ ವ್ಯಾಪಾರಿಯೊಬ್ಬರು ತಕ್ಷಣವೇ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದರು. ಆಗ ಸ್ಥಳಕ್ಕೆ ಧಾವಿಸಿದ ರಮೇಶ ಪವರ್ ಸೇರಿದಂತೆ ಇತರ ಅಗ್ನಿಶಾಮಕ ಸಿಬ್ಬಂದಿ, ಪರಿಶೀಲನೆ ನಡೆಸಿ ಬೆಂಕಿ ನಂದಿಸಲು ಕಾರ್ಯಾಚರಣೆ ಆರಂಭಿಸಿದ್ದರು. ಆದರೆ, ಈ ಸಮಯದಲ್ಲಿ ವಿದ್ಯುತ್ ಅವಘಡ ಉಂಟಾಗಿ ರಮೇಶ ದೂರಕ್ಕೆ ಬಿದ್ದಿದ್ದರು. ಇದರಿಂದ ತೀವ್ರ ಅಸ್ವಸ್ಥಗೊಂಡಿದ್ದ ಅವರನ್ನು ತಕ್ಷಣವೇ ಪೊಲೀಸರು ಆಟೋದಲ್ಲಿ ಜಯದೇವ ಆಸ್ಪತ್ರೆಗೆ ಸಾಗಿಸಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಜನರೇಟರ್‌ಗೆ ಬೆಂಕಿ ಹೊತ್ತಿಕೊಂಡ ತಕ್ಷಣ ಬೆಂಕಿ ಕಟ್ಟಡದ ಹೊರಭಾಗದಲ್ಲೂ ಆವರಿಸಿತ್ತು. ಜತೆಗೆ ಗಿಡದ ರೆಂಬೆಗಳಿಗೂ ಬೆಂಕಿ ಹೊತ್ತಿ ಆತಂಕ ಸೃಷ್ಟಿಸಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಜೆಸ್ಕಾಂ ಸಿಬ್ಬಂದಿ ಕೂಡಲೇ ಸೂಪರ್ ಮಾರ್ಕೆಟ್‌ನ ಕೆಲ ಭಾಗದಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಿದ್ದರು.