ಬೆಂಗಳೂರು: ಬೇಗೂರು ಸಮೀಪದ ದೇವರಚಿಕ್ಕನಹಳ್ಳಿಯ ಆಶ್ರಿತ ಅಪಾರ್ಟ್‌ಮೆಂಟ್‌ನಲ್ಲಿ ಮಂಗಳವಾರ ನಡೆದಿದ್ದ ಅಗ್ನಿ ದುರಂತದ ಕಾರಣ ಇನ್ನು ನಿಗೂಢವಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಗ್ಯಾಸ್ ಪೈಪ್ ಸೋರಿಕೆ, ಸಿಲಿಂಡರ್ ಸ್ಫೋಟ ಹಾಗೂ ಶಾರ್ಟ್ ಸರ್ಕ್ನೂಟ್‌ನಿಂದ ಘಟನೆ ಸಂಭವಿಸಿಲ್ಲ ಎಂಬುದು ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ವಿಧಿವಿಜ್ಞಾನ ಪ್ರಯೋಗಾಲಯ, ಬೆಸ್ಕಾಂ, ಇಂಡಿಯನ್ ಗ್ಯಾಸ್ ಸಂಸ್ಥೆ ಹಾಗೂ ಅಗ್ನಿಶಾಮಕ ದಳದ ಅಧಿಕಾರಿಗಳು ಬುಧವಾರ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ತನಿಖಾ ಸಂಸ್ಥೆಯ ಅಧಿಕಾರಿಗಳು ಫ್ಲ್ಯಾಟ್ ಅನ್ನು ಸಂಪೂರ್ಣವಾಗಿ ಪರಿಶೀಲಿಸಿದ್ದು, ಅಡುಗೆ ಮನೆ, ಬಾತ್‌ರೂಮ್, ಹಾಲ್, ಬೆಡ್ ರೂಮ್, ಜತೆಗೆ ಟಿವಿ, ಫ್ರಿಡ್ಜ್, ವಾಷಿಂಗ್ ಮೆಷಿನ್, ಮೊಬೈಲ್ ಚಾರ್ಜಿಂಗ್ ಹಾಕುವ ಸ್ಥಳ ಮುಂತಾದೆಡೆ ಪರಿಶೀ ಲಿಸಿದ್ದಾರೆ. ಆದರೆ, ಎಲ್ಲಿಯೂ ಶಾರ್ಟ್ ಸರ್ಕ್ನೂಟ್ ಸುಳಿವು ಸಿಕ್ಕಿಲ್ಲ. ಒಂದು ವೇಳೆ ಶಾರ್ಟ್ ಸರ್ಕ್ನೂಟ್‌ನಿಂದ ಬೆಂಕಿ ಹೊತ್ತಿಕೊಂಡಿದ್ದರೂ ಈ ಪ್ರಮಾಣದಲ್ಲಿ ಹಾನಿಯಾಗುತ್ತಿರಲಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇಂಡಿಯನ್ ಗ್ಯಾಸ್ ಏಜೆನ್ಸಿ ಸಿಬಂದಿ ಗ್ಯಾಸ್ ಸಿಲಿಂಡರ್ ಹಾಗೂ ಗ್ಯಾಸ್ ಪೈಪ್‌ಗಳನ್ನು ಪರಿಶೀಲಿಸಿದ್ದಾರೆ. ಎಲ್ಲಿಯೂ ಸೋರಿಕೆ ಬಗ್ಗೆ ಸ್ಪಷ್ಟತೆ ಸಿಗುತ್ತಿಲ್ಲ. ಮತ್ತೂಂದೆಡೆ ದುರಂತದ ಬಳಿಕ ಅಗ್ನಿಶಾಮಕ ಸಿಬಂದಿಯೇ ಮನೆಯಲ್ಲಿದ್ದ ಎರಡು ಸಿಲಿಂಡರ್‌ಗಳನ್ನು ಹೊರಗಡೆ ತಂದಿದ್ದಾರೆ. ಇನ್ನು ಈ ಮನೆಯವರು ಒಳಗಡೆಯೇ ಸಿಲಿಂಡರ್ ಇಟ್ಟುಕೊಂಡಿದ್ದು, ಅಪಾರ್ಟ್‌ಮೆಂಟ್‌ನಲ್ಲಿ ಅಳವಡಿಸಿದ್ದ ಗ್ಯಾಸ್ ಪೈಪ್ ಬಳಸುತ್ತಿರಲಿಲ್ಲ ಎಂದು ಹೇಳಲಾಗಿದೆ.
ಬೆಸ್ಕಾಂ ಅಧಿಕಾರಿಗಳು ಮನೆಯ ವಿದ್ಯುತ್ ಮೀಟರ್, ಸ್ವಿಚ್ ಬೋರ್ಡ್ ಗಳನ್ನು ಪರಿಶೀಲಿಸಿದ್ದಾರೆ. ಜತೆಗೆ ಅಪಾರ್ಟ್‌ಮೆಂಟ್ ಆವರಣದಲ್ಲಿ ಅಳವಡಿಸಿರುವ ಟ್ರಾನ್ಸ್‌ಫಾರ್ಮರ್ ಅನ್ನೂ ಪರೀಕ್ಷಿಸಿದ್ದಾರೆ. ಒಂದೆರಡು ದಿನಗಳಲ್ಲಿ ವರದಿ ಬರಲಿದ್ದು, ಘಟನೆಗೆ ಸ್ಪಷ್ಟತೆ ಸಿಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಕ್ಷಣೆಗೆ ತಡೆಯಾದ ಗ್ರಿಲ್ :
ಫ್ಲ್ಯಾಟ್‌ನ ಬಾಲ್ಕನಿಯಲ್ಲಿ ಕಬ್ಬಿಣದ ಗ್ರಿಲ್ ಅಳವಡಿಸಿದ್ದರಿಂದಲೇ ಮಹಿಳೆಯರು ಮೃತಪಟ್ಟಿದ್ದು, ರಕ್ಷಣಾ ಕಾರ್ಯಾಕ್ಕೂ ತೊಡಕಾಗಿದೆ ಎಂದು ಅಗ್ನಿಶಾಮಕ ಸಿಬಂದಿ ತಿಳಿಸಿದ್ದಾರೆ.
ಮಾಲಕರ ನಿರ್ಲಕ್ಷ್ಯ? :
ಘಟನೆಗೆ ಅಪಾರ್ಟ್‌ಮೆಂಟ್ ಮಾಲಕ ಮತ್ತು ಬಿಬಿಎಂಪಿಯ ನಿರ್ಲಕ್ಷ್ಯವೇ ಕಾರಣ ಎಂದು ಹೇಳಲಾಗಿದೆ. ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ ಹೊತ್ತಿಕೊಂಡಾಗ ಜನರನ್ನು ಎಚ್ಚರಿಸಲು ಸೈರಲ್ ಇಲ್ಲ. ಬೆಂಕಿ ನಂದಿಸಲು ವಾಟರ್ ಲೈನ್ ವ್ಯವಸ್ಥೆ ಇಲ್ಲ. ಫೈರ್ ಎಕ್ಸ್‌ಟೆನ್ಶನ್ ನಿರ್ವಹಣೆ ಇಲ್ಲ ಎಂದು ಅಪಾರ್ಟ್‌ಮೆಂಟ್ ನಿವಾಸಿಗಳು ಆರೋಪಿಸಿದ್ದಾರೆ.