Advertisement

ಉಜಿರೆಯಲ್ಲಿ ಎರಡು ಮಳಿಗೆಗಳಿಗೆ ಅಗ್ನಿ ಅನಾಹುತ: ಕೋಟಿಗಿಂತ ಅಧಿಕ ರೂ. ಮೌಲ್ಯದ ಸೊತ್ತು ನಾಶ

06:36 PM Sep 01, 2022 | Team Udayavani |

ಬೆಳ್ತಂಗಡಿ: ಉಜಿರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅನುಗ್ರಹ ಶಾಲೆಯ ಮುಂಭಾಗದಲ್ಲಿರುವ ಎರಡು ಅಂಗಡಿಗಳಲ್ಲಿ ಅಗ್ನಿ ಅನಾಹುತ ಉಂಟಾಗಿ ಒಂದು ಕೋಟಿ ರೂ. ಗಿಂತ ಅಧಿಕ ಮೌಲ್ಯದ ಸೊತ್ತುಗಳು ನಾಶವಾದ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.

Advertisement

ರಾಷ್ಟ್ರೀಯ ಹೆದ್ದಾರಿ ಉಜಿರೆ ಸಮೀಪ ಇರುವ ರಕ್ಷಾ ಆಗ್ರೋ ಡ್ರೇಡರ್ ಮತ್ತು ಅನಾರ್‌ ವೀಲ್‌ ಅಲಾಯನ್‌ ಮೆಂಟ್‌ ಅಂಗಡಿಗಳಿಗೆ ಗಣೇಶ ಚತುರ್ಥಿ ಪ್ರಯುಕ್ತ ರಜೆ ಇದ್ದು, ಮಧ್ಯಾಹ್ನದ ವೇಳೆ ಅಂಗಡಿಗಳ ಒಳಭಾಗದಿಂದ ಬೆಂಕಿ ಕಂಡುಬಂದು ಏಕಾಏಕಿ ವ್ಯಾಪಿಸಿದೆ.

ಇದರಿಂದ ರಾಜೀವ್‌ ಎಂಬವರ ಮಾಲಕತ್ವದ ಅನಾರ್‌ ಟಯರ್‌ ಅಂಗಡಿಗೆ 40 ಲಕ್ಷ ರೂ. ಗಿಂತ ಅಧಿಕ ಹಾನಿಯಾಗಿದೆ. ಅಲ್ಲಿಂದ ನಾಗೇಶ್‌ ಭಟ್‌ ಎಂಬವರ ರಕ್ಷಾ ಆಗ್ರೋ ಟ್ರೇಡರ್ ಎಂಬ ಹಾರ್ಡ್‌ ವೇರ್‌, ಪೈಂಟ್‌ ಅಂಗಡಿಗೆ ಪಸರಿಸಿದ ಬೆಂಕಿಯಿಂದ ಸಾಮಗ್ರಿ, ಕಂಪ್ಯೂಟರ್‌, ಕಟ್ಟಡ ಮತ್ತಿತರ ಸೊತ್ತುಗಳು ಸೇರಿದಂತೆ 70 ಲಕ್ಷ ರೂ. ಗಿಂತ ಅಧಿಕ ಮೌಲ್ಯದ ಹಾನಿ ಸಂಭವಿಸಿದೆ. ಎರಡು ಅಂಗಡಿಗಳ ದಾಖಲೆ ಪತ್ರಗಳ ಸಮೇತ ಸಂಪೂರ್ಣ ಸಾಮ್ರಗ್ರಿಗಳು ಬೆಂಕಿಗೆ ಆಹುತಿಯಾಗಿವೆ.

ಬೆಂಕಿ ಅನಾಹುತದ ವೇಳೆ ಸಾವಿರಾರು ಜನ ಜಮಾಯಿಸಿದ್ದು ಟ್ರಾಫಿಕ್‌ ಜಾಮ್‌ ಕೂಡ ಉಂಟಾಗಿ, ಬೆಂಕಿಯನ್ನು ಹತೋಟಿಗೆ ತರುವ ವೇಳೆ ಸ್ವಲ್ಪ ಸಮಯ ಹೆದ್ದಾರಿಯಲ್ಲಿ ವಾಹನ ಸಂಚಾರ ತಡೆಹಿಡಿಯಲಾಗಿತ್ತು. ಸ್ಥಳಕ್ಕೆ ಬೆಳ್ತಂಗಡಿ ಅಗ್ನಿಶಾಮಕ ದಳ, ಬೆಳ್ತಂಗಡಿ ಪೊಲೀಸ್‌ ಠಾಣೆ ಹಾಗೂ ಸಂಚಾರಿ ಠಾಣೆ, ಧರ್ಮಸ್ಥಳ ಪೊಲೀಸ್‌ ಠಾಣೆ ಸಿಬಂದಿಗಳು ಹಾಗೂ ಸ್ಥಳೀಯರು ಆಗಮಿಸಿ ಸಹಕರಿಸಿದರು. ಕಾರ್ಯಾಚರಣೆ ಸತತ ನಾಲ್ಕು ತಾಸಿಗಿಂತ ಅಧಿಕ ಕಾಲ ನಡೆಯಿತು.

ಹಲವು ಕಿಮೀ. ವ್ಯಾಪಿಸಿದ ಹೊಗೆ:

Advertisement

ಬೆಂಕಿ ಅನಾಹುತದ ಪರಿಣಾಮ ಹೊಗೆ ಹಾಗೂ ಟಯರ್‌ ಪೈಂಟ್‌, ಪೈಪ್‌ ಇತ್ಯಾದಿಗಳು ಸುಟ್ಟ ವಾಸನೆ ಉಜಿರೆ ಪರಿಸರ, ಕಲ್ಮಂಜ, ಮುಂಡಾಜೆ, ಬರಯಕನ್ಯಾಡಿ ಮೊದಲಾದ ಗ್ರಾಮಗಳ ತನಕ ಹಲವು ಕಿ.ಮೀ. ದೂರದವರೆಗೆ ವ್ಯಾಪಿಸಿತು.

ಸಿಡಿಲು ಕಾರಣ?:

ಬುಧವಾರ ಮಧ್ಯಾಹ್ನ ಈ ಪರಿಸರದಲ್ಲಿ ಭಾರಿ ಸಿಡಿಲು, ಗುಡುಗು ಉಂಟಾಗಿತ್ತು. ಸಿಡಿಲು ಯಾವುದಾದರೂ ವಿದ್ಯುತ್‌ ಉಪಕರಣಗಳಿಗೆ ಬಡಿದು ಬೆಂಕಿ ಉಂಟಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಅಂಗಡಿಗಳಿಗೆ ರಜೆ ಇದ್ದ ಕಾರಣ ಬೆಂಕಿ ಸಂಪೂರ್ಣ ವ್ಯಾಪಿಸುವವರೆಗೂ ಯಾರ ಗಮನಕ್ಕೂ ಬಂದಿಲ್ಲ. ಈ ಅಂಗಡಿಗಳ ಸಮೀಪವೇ ಕಾರ್ಯ ನಿರ್ವಹಿಸುವ ಹೋಟೆಲ್‌ ಒಂದಕ್ಕೂ ಬೆಂಕಿ ಅಲ್ಪ ಪ್ರಮಾಣದ ಹಾನಿ ಉಂಟು ಮಾಡಿದೆ. ಬೆಂಕಿ ಹೋಟೆಲ್‌ ವರೆಗೂ ಆವರಿಸುತ್ತಿದ್ದರೆ ಇನ್ನಷ್ಟು ಅನಾಹುತ ಉಂಟಾಗುವ ಸಾಧ್ಯತೆ ಇತ್ತು.

ಕಬ್ಬಿಣದ ಶಟರ್‌ಗಳಿರುವ ಅಂಗಡಿಗಳ ಒಳಗಿನಿಂದ ಬೆಂಕಿ ವ್ಯಾಪಿಸಿದ್ದು ಶಟರ್‌ಗಳನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಯಿತು. ಅಷ್ಟರಲ್ಲಿ ಸೊತ್ತುಗಳೆಲ್ಲ ಹಾನಿಗೊಳಗಾಗಿದ್ದವು. ಅಂಗಡಿಯಲ್ಲಿದ್ದ ಕಬ್ಬಿಣದ ಏಣಿ, ಪೈಪುಗಳು ಕೂಡ ಬೆಂಕಿತ ತಗುಲಿ ಮುರಿದುಬಿದ್ದಿವೆ. ಪರಿಸರದಲ್ಲಿದ್ದ ಹಲವು ವಾಹನಗಳಿಗೂ ಹಾನಿ ಉಂಟಾಗಿದೆ ಎಂದು ತಿಳಿದುಬಂದಿದೆ.

 

Advertisement

Udayavani is now on Telegram. Click here to join our channel and stay updated with the latest news.

Next