Advertisement

ಕಾರ್ಖಾನೆಯಲ್ಲಿ ಬೆಂಕಿ ಅವಘಡ

11:54 AM Jul 16, 2019 | Suhan S |

ಹುಮನಾಬಾದ: ಪಟ್ಟಣ ಹೊರ ವಲಯದ ಕೈಗಾರಿಕಾ ಪ್ರದೇಶದ ಕಾರ್ಖಾನೆಯೊಂದರಲ್ಲಿ ಅಗ್ನಿ ದುರಂತದ ಸಂಭವಿಸಿದೆ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಹಾನಿಯಾದ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ.

Advertisement

ಅಗ್ನಿ ಅವಘಡ ಸಂಭವಿಸಿದ ಓಂ ಎಂಟರ್‌ ಪ್ರೈಜಸ್‌ ಕಾರ್ಖಾನೆ ತೆಲಂಗಾಣದ ಹೈದರಾಬಾದ‌ ಮೂಲದ ಎಂ.ಡಿ.ಅಸೀಫ್‌ ಅವರಿಗೆ ಸೇರಿದ್ದು ಎಂದು ಪೊಲೀಸರು ತಿಳಿಸಿದ್ದಾರೆ. ಈ ಕಾರ್ಖಾನೆಯಲ್ಲಿ ಪೇಂಟಿಂಗ್‌ನಲ್ಲಿ ಮಿಶ್ರಣ ಮಾಡುವ ಕಿನ್ನಲ್ ಎಂಬ ಬಿಳಿ ರಾಸಾಯನಿಕ ದ್ರವ ಉತ್ಪಾದಿಸಲಾಗುತ್ತಿತ್ತು. ಬೆಳಗ್ಗೆ 6:45ರ ಸುಮಾರಿಗೆ ಕಾರ್ಖಾನೆಯಲ್ಲಿ ಸಣ್ಣ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ಒಳಗೆ ಇದ್ದ ನಾಲ್ಕೈದು ಜನ ಕಾರ್ಮಿಕರು ಪ್ರಾಣ ಭೀತಿಯಿಂದ ಓಡಿ ಹೋಗಿದ್ದಾರೆ. ಅಲ್ಪ ಪ್ರಮಾಣದಲ್ಲಿದ್ದ ಬೆಂಕಿ ಕೆಲ ಹೊತ್ತಿನಲ್ಲೇ ಕೆನ್ನಾಲಿಗೆ ಚಾಚಿ ಧಗಧಗನೆ ಉರಿಯಿತು. ಹುಮನಾಬಾದ ಅಗ್ನಿಶಾಮಕ ಸಿಬ್ಬಂದಿ ಎರಡು ವಾಹನಗಳೊಂದಿಗೆ ಸ್ಥಳಕ್ಕೆ ಧಾವಿಸಿ ನಂದಿಸಲು ಯತ್ನಿಸಿದರು. ಆದರೂ ಪ್ರಯೋಜನವಾಗದ ಕಾರಣ ಬೀದರ್‌ ಮತ್ತು ಚಿಟಗುಪ್ಪದಿಂದ ಮತ್ತೆ 3 ವಾಹ‌ನ ತರಿಸಿದ ಸತತ 5ಗಂಟೆ ಪ್ರಯತ್ನಿಸಿದ ಬಳಿಕ ಬೆಂಕಿ ನಂದಿಸಲು ಸಾಧ್ಯವಾಯಿತು.

ಪೊಲೀಸರ ಹರಸಾಹಸ: ಕಾರ್ಖಾನೆಯಲ್ಲಿ ಬೆಂಕಿ ಕೆನ್ನಾಲಿಗೆ ಚಾಚುತ್ತಿದ್ದಾಗ, ಸಮೀಪಕ್ಕೆ ಹೋದರೆ ಗ್ಯಾಸ್‌ ತುಂಬಿದ ಭಾರೀ ಪ್ರಮಾಣದ ಬೈಲರ್‌ ನ್ಪೋಟಗೊಳ್ಳುವ ಭೀತಿಯಿಂದ ಪೊಲೀಸರು ಕಾರ್ಖಾನೆ ಆಸುಪಾಸು 300 ಅಡಿ ಅಂತರದಲ್ಲಿ ರಸ್ತೆಯಲ್ಲಿ ಯಾತರೂ ಸಂಚರಿಸದಂತೆ ಪೊಲೀಸರು ಮನವಿ ಮಾಡಿದರೂ, ಜನರು ರಸ್ತೆ ಮೇಲೆ ಸಂಚರಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಜನರನ್ನು ಚದುರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

ಸಂಚಾರ ಮಾರ್ಗ ಬದಲು: ಈ ವೇಳೆ ಕಲಬುರಗಿ ಮತ್ತು ಹುಮನಾಬಾದ್‌ ಕಡೆಗೆ ಹೋಗಬೇಕಾದ ಸಾರಿಗೆ ಸಂಸ್ಥೆ ಬಸ್‌ ಸೇರಿದಂತೆ ವಿವಿಧ ವಾಹನಗಳಿಗೆ ಸತ್ಯದೀಪ್‌ ರಾಸಾಯನಿಕ ಕಾರ್ಖಾನೆ ಪಕ್ಕದ ರಸ್ತೆ ಮೂಲಕ ತೆರಳಲು ಸಿಪಿಐ ಜೆ.ಎಸ್‌.ನ್ಯಾಮಗೌಡರ್‌ ಅವರ ಆದೇಶದ ಮೇರೆಗೆ ಸಂಚಾರ ಪೊಲೀಸ್‌ ಠಾಣೆ ಪಿಎಸ್‌ಐ ಬಸವರಾಜ ಅನುವು ಮಾಡಿಕೊಟ್ಟರು.

ಪರವಾನಗಿ ಬೇರೆ, ಉತ್ಪಾದನೆ ಬೇರೆ: ಕೆಲವು ವರ್ಷಗಳ ಹಿಂದೆ ವ್ಯಕ್ತಿಯೊಬ್ಬರು ರೈಸ್‌ಮಿಲ್ ಹೆಸರಲ್ಲಿ ಪಡೆದ ಪರವಾನಗಿಯನ್ನೇ ಇಟ್ಟುಕೊಂಡು ತೆಲಂಗಾಣದ ಹೈದರಾಬಾದ್‌ ಮೂಲದ ಎಂ.ಡಿ.ಆಸೀಫ್‌ ಪೇಂಟಿಂಗ್‌ನಲ್ಲಿ ಮಿಶ್ರಣ ಮಾಡುವ ಕಿನ್ನಲ್ ಉತ್ಪಾದಿಸುತ್ತಿದ್ದರು. ಉತ್ಪಾದನೆ ವಿಷ‌ಯ ಹಾಗಿರಲಿ, ಕಾರ್ಖಾನೆ ಪರವಾನಗಿ ಅವಧಿ 2019 ಜನವರಿ 1ಕ್ಕೆ ಪೂರ್ಣಗೊಂಡಿದ್ದರೂ ನವೀಕರಣ ಮಾಡಿಸಿಕೊಳ್ಳದಿರುವ ವಿಷಯ ದಾಖಲೆ ಪರಿಶೀಲನೆ ವೇಳೆ ಅಧಿಕಾರಿಗಳ ಗಮನಕ್ಕೆ ಬಂದಿದೆ.

Advertisement

ಸುರಕ್ಷತೆ ಕೊರತೆ ಪ್ರಕರಣ ದಾಖಲು: ಕಾರ್ಖಾನೆಯಲ್ಲಿ ಕಾರ್ಮಿಕರ ಸುರಕ್ಷತೆ ಸೇರಿದಂತೆ ತುರ್ತು ಸಂದರ್ಭದಲ್ಲಿ ಅಪಾಯದಿಂದ ತಪ್ಪಿಸಿಕೊಳ್ಳಲು ಯಾವುದೇ ಸೌಲಭ್ಯ ಇಲ್ಲದಿರುವುದೇ ಈ ಅವಘಡಕ್ಕೆ ಕಾರಣ ಎಂದು ಆರೋಪಿಸಿ ಪ್ರತ್ಯಕ್ಷದರ್ಶಿಯೊಬ್ಬರು ನೀಡಿದ ದೂರು ಆಧರಿಸಿ, ಕಾರ್ಖಾನೆ ಮಾಲೀಕ ಎಂ.ಡಿ.ಆಸೀಫ್‌ ಮತ್ತು ಎಂ.ಡಿ.ಯುಸೂಫ್‌ ಅವರ ವಿರುದ್ಧ ಹುಮನಾಬಾದ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಸಿಪಿಐ ಜೆ.ಎಸ್‌.ನ್ಯಾಮಗೌಡರ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next