ಸೊರಬ: ಅಗ್ನಿಶಮನ ಕಾರ್ಯದಲ್ಲಿ ಅಗ್ನಿಶಾಮಕ ಸಿಬ್ಬಂದಿ ದಿಟ್ಟತನ, ಪ್ರಾಣತ್ಯಾಗ, ಬಲಿದಾನದಿಂದ ತಮ್ಮ ವೈಯಕ್ತಿಕ ಜೀವವನ್ನು ಬಲಿಕೊಟ್ಟು ಸಾರ್ವಜನಿಕರ ಪ್ರಾಣ, ಆಸ್ತಿ, ಮಾನರಕ್ಷಣೆ ಮಾಡಿರುತ್ತಾರೆ. ಹಾಗೆ ಮೃತಪಟ್ಟ ಸಿಬ್ಬಂದಿ ಆತ್ಮಕ್ಕೆ ಶಾಂತಿ ಮತ್ತು ಗೌರವ ಸೂಚಿಸುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿದೆ ಎಂದು ಶಾಸಕ ಎಸ್. ಕುಮಾರ್ ಬಂಗಾರಪ್ಪ ಹೇಳಿದರು.
ಪಟ್ಟಣದ ಅಗ್ನಿಶಾಮಕ ಠಾಣೆಯಲ್ಲಿ ಅಗ್ನಿಶಾಮಕ ಸೇವಾ ಸಪ್ತಾಹದ ಅಂಗವಾಗಿ ಹುತಾತ್ಮ ಅಗ್ನಿಶಾಮಕ ಸಿಬ್ಬಂದಿಗೆ ಪುಷ್ಪ ನಮನ, ಗೌರವ ವಂದನೆ ಸಲ್ಲಿಸಿ ಅವರು ಮಾತನಾಡಿದರು.
ಅಗ್ನಿಶಾಮಕ ಸಿಬ್ಬಂದಿಯು ಪ್ರತಿಯೊಂದು ತುರ್ತು ಸಂದರ್ಭಗಳಲ್ಲಿ ಜೀವದ ಹಂಗು ತೊರೆದು ಪ್ರಾಣರಕ್ಷಣೆ ಮಾಡುತ್ತಾರೆ. ಜಾತಿ, ಮತ, ಧರ್ಮ ಹಾಗೂ ಲಿಂಗಗಳ ಬೇಧವಿಲ್ಲದೆ ಜೀವ ರಕ್ಷಣೆಗೆ ಮುಂದಾಗುತ್ತಾರೆ. ಅಂತಹ ಧೀರ ಸಿಬ್ಬಂದಿಗಳ ಕಾರ್ಯ ಗೌರವಕ್ಕೆ ಅರ್ಹವಾದುದು. ಈ ಸಪ್ತಾಹ ಕೇವಲ ಕಾರ್ಯಕ್ರಮವಲ್ಲ. ಮುಂದಿನ ಕಾರ್ಯಗಳಿಗೆ ಸಿಬ್ಬಂದಿಯನ್ನು ಉತ್ತೇಜಿಸುವ ಕಾರ್ಯವಾಗಿದೆ ಎಂದರು.
ಅಗ್ನಿಶಾಮಕ ಠಾಣೆಯ ಠಾಣಾಧಿ ಕಾರಿ ಕೆ. ಮಹಾಬಲೇಶ್ವರ ಮಾತನಾಡಿ, ಎರಡನೇ ಮಹಾಯುದ್ಧದ ವೇಳೆ ಮುಂಬೈನಲ್ಲಿ ಹಡಗು ದುರಂತದಲ್ಲಿ ನಡೆದ ಅಗ್ನಿ ಅನಾಹುತ ತಪ್ಪಿಸುವ ವೇಳೆ 66 ಧಕ್ಷ ಅಗ್ನಿಶಾಮಕ ಸಿಬ್ಬಂದಿ ಹುತಾತ್ಮರಾಗಿದ್ದರು. ಅವರ ನೆನಪಿಗಾಗಿ ಪ್ರತಿ ವರ್ಷ ಏ.14ರಿಂದ ಏಳು ದಿನ ಅಗ್ನಿಶಾಮಕ ಸೇವಾ ಸಪ್ತಾಹವನ್ನಾಗಿ ಆಚರಿಸಲಾಗುತ್ತಿದೆ. ಜೊತೆಗೆ ಸಾರ್ವಜನಿಕರಿಗೆ ಅಗ್ನಿ ಅನಾಹುತ ಹಾಗೂ ಇತರೆ ತುರ್ತು ಸಂದರ್ಭಗಳ ಬಗ್ಗೆ ಮುನ್ನೆಚ್ಚರಿಕೆಯನ್ನು ಈ ಸಪ್ತಾಹದ ಮೂಲಕ ನೀಡಲಾಗುತ್ತದೆ ಎಂದ ಅವರು, ತಾಲೂಕಿನ ಶಾಲಾ-ಕಾಲೇಜು, ಸಂಘ-ಸಂಸ್ಥೆಗಳು ಉಚಿತ ಅಗ್ನಿಶಮನ ಉಪನ್ಯಾಸಕ್ಕಾಗಿ 08184-272400 ಅಥವಾ 101ಗೆ ಸಂಪರ್ಕಿಸಬಹುದು ಎಂದು ತಿಳಿಸಿದರು.
ಅಗ್ನಿಶಾಮಕ ಸಿಬ್ಬಂದಿ ಡಿ.ವಿ. ಮಂಜುನಾಥ್ ಸ್ವಾಗತಿಸಿದರು. ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ರಾಜು ಹಿರಿಯಾವಲಿ, ಅಗ್ನಿಶಾಮಕ ಸಿಬ್ಬಂದಿ ಹಾಗೂ ಗೃಹರಕ್ಷಕ ದಳದ ಸಿಬ್ಬಂದಿ ಇದ್ದರು.