ಪುತ್ತೂರು: ದೂರದ ಹಾಸನದಿಂದ ಬಂದು ಹುಟ್ಟು ಹಬ್ಬ ಆಚರಣೆಯ ಮೋಜಿನಲ್ಲಿ ಶ್ರೀ ಮಹಾಲಿಂಗೇಶ್ವರ ದೇವಾಲಯದ ಎದುರು ಗದ್ದೆಯಲ್ಲಿ ಸುಡುಮದ್ದು ಸಿಡಿಸಿದ ವಾಲಿಬಾಲ್ ಆಟಗಾರ ಯುವಕರ ತಂಡವೊಂದು ನಗರದಲ್ಲಿ ಆತಂಕ ಸೃಷ್ಟಿಸಿದ ಘಟನೆ ಬುಧವಾರ ತಡರಾತ್ರಿ ನಡೆದಿದೆ.
ಕಂಬಳದ ಕರೆಯ ಬಳಿಯ ವೇದಿಕೆಯ ಬಳಿ ಬುಧವಾರ ತಡರಾತ್ರಿ ಮಾರುತಿ ಸ್ವಿಫ್ಟ್ ಕಾರಿನಲ್ಲಿ ಬಂದ ನಾಲ್ವರು ಯುವಕರ ತಂಡವು ಮೋಜಿಗಾಗಿ ಸುಡುಮದ್ದು ಕದೋಣಿಯನ್ನು ತಂದು ಸಿಡಿಸಿದ್ದಾರೆ. ದೇವಾಲಯದಲ್ಲಿ ಹಾಗೂ ಪಕ್ಕದಲ್ಲಿ ಯಾವುದೇ ಕಾರ್ಯಕ್ರಮವಿಲ್ಲದ ಹಿನ್ನೆಲೆಯಲ್ಲಿ ಈ ಭಾರೀ ಶಬ್ದದ ಸುಡುಮದ್ದು ತತ್‌ಕ್ಷಣಕ್ಕೆ ಪರಿಸರದಲ್ಲಿ ಆತಂಕವನ್ನು ಸೃಷ್ಟಿಸಿದೆ.
ವಿಚಾರ ತಿಳಿದು ಪೊಲೀಸರು, ಸ್ಥಳೀಯರು ಸ್ಥಳಕ್ಕೆ ಆಗಮಿಸಿದ ಸಂದರ್ಭದಲ್ಲಿ ಯುವಕರ ತಂಡ ಕಾರಿನಲ್ಲಿ ಪರಾರಿಯಾಗಿದೆ. ಪರಿಶೀಲನೆಯ ಸಂದರ್ಭದಲ್ಲಿ ಸದ್ದಿನೊಂದಿಗೆ ಆಕಾಶ ಭಾಗಕ್ಕೆ ಹೋಗಿ ಬಣ್ಣದ ಚಿತ್ತಾರದಲ್ಲಿ ಸಿಡಿಯುವ ಕದೋಣಿ ಸುಡುಮದ್ದು ಸಿಡಿಸಿರುವುದು ಪತ್ತೆಯಾಗಿದೆ ಮತ್ತು ಕಿಡಿಗೇಡಿಗಳಿಗಾಗಿ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ಇದೇ ಸಂದರ್ಭದಲ್ಲಿ ಭಾರೀ ಸದ್ದಿಗೆ ಹೆದರಿ ಸಾರ್ವಜನಿಕರೂ ಸ್ಥಳದಲ್ಲಿ ಸೇರಿದ್ದಾರೆ.
ಲಾಡ್ಜ್ ನಲಿದ್ದರು
ಕಾರಿನಲ್ಲಿ ಬಂದ ಯುವಕರು ಕದೋಣಿ ಸಿಡಿಸಿ ಪರಾರಿಯಾಗುವ ದೃಶ್ಯಾವಳಿಗಳು ಪರಿಸರದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ. ಆತಂಕಕ್ಕೆ ಕಾರಣವಾದ ಪ್ರಕರಣದ ತನಿಖೆ ತೀವ್ರಗೊಳಿಸಿದ ಪೊಲೀಸರು ಕೆಲವು ಗಂಟೆಗಳ ಅಂತರದಲ್ಲಿ ಆರೋಪಿಗಳನ್ನು ನಗರದ ಲಾಡ್ಜ್ ಒಂದರಲ್ಲಿ ಪತ್ತೆ ಹಚ್ಚಿದ್ದಾರೆ.
ವಾಲಿಬಾಲ್ ಆಟಗಾರರು
ವಾಲಿಬಾಲ್ ಕ್ರೀಡಾಪಟುಗಳಾಗಿರುವ ಯುವಕರು ಹುಟ್ಟು ಹಬ್ಬದ ಮೋಜು ಆಚರಿಸುವ ಉದ್ದೇಶದಿಂದ ಜನವಿರಳವಾದ ದೇವಾಲಯ ಗದ್ದೆಗೆ ಆಗಮಿಸಿ ಸುಡುಮದ್ದು ಸಿಡಿಸಿದ್ದಾರೆ ಎಂದು ವಿಚಾರಣೆಯ ಸಂದರ್ಭದಲ್ಲಿ ತಿಳಿಸಿದ್ದಾರೆ. ಆರೋಪಿಗಳನ್ನು ಠಾಣೆಗೆ ಕರೆದೊಯ್ದಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.