ಕಾರವಾರ: ಐಎನ್‌ಎಸ್ ಕದಂಬ ನೌಕಾನೆಲೆಗೆ ಲಂಗುರ ಹಾಕಲು ಬಂದಿದ್ದ ಯುದ್ಧ ನೌಕೆ ಐಎನ್‌ಎಸ್ ವಿಕ್ರಮಾದಿತ್ಯದ ಬಾಯ್ಲರ್ ಘಟಕದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಅಗ್ನಿ ನಿಯಂತ್ರಿಸಲು ಯತ್ನಿಸಿದ ಲೆಫ್ಟಿನೆಂಟ್ ಕಮಾಂಡರ್ ಡಿ.ಎಸ್. ಚೌಹಾಣ್ ತೀವ್ರ ಗಾಯಗಳಿಂದ ಐಎನ್‌ಎಸ್ ಪತಂಜಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಯುದ್ಧ ನೌಕೆ ಐಎನ್‌ಎಸ್ ವಿಕ್ರಮಾದಿತ್ಯ ಕಾರವಾರದ ಆಳ ಸಮುದ್ರದಲ್ಲಿ ಬೀಡು ಬಿಟ್ಟಿತ್ತು. ಶುಕ್ರವಾರ ಐಎನ್‌ಎಸ್ ಕದಂಬ ನೌಕಾನೆಲೆಯಲ್ಲಿ ಲಂಗುರ ಹಾಕಲು ಬಂದಾಗ ಅಗ್ನಿ ಅನಾಹುತ ಸಂಭವಿಸಿದೆ. ತಕ್ಷಣ ಸಿಬ್ಬಂದಿ ತಹಬದಿಗೆ ತಂದರು. ಚೌಹಾಣ್ ಸಹಿತ ಹಲವು ಸಿಬ್ಬಂದಿ ಬಾಯ್ಲರ್ ಘಟಕದ ಬೆಂಕಿ ಆರಿಸಲು ಯತ್ನಿಸಿದಾಗ ಚೌಹಾಣ್ ತೀವ್ರವಾಗಿ ಗಾಯಗೊಂಡಿದ್ದು ಐಎನ್‌ಎಸ್ ಪತಂಜಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.
ತನಿಖೆಗೆ ಆದೇಶ: ಯುದ್ಧ ನೌಕೆ ಐಎನ್‌ಎಸ್ ವಿಕ್ರಮಾದಿತ್ಯದಲ್ಲಿ ಬೆಂಕಿ ಅನಾಹುತದ ಘಟನೆಗೆ ಕಾರಣವೇನೆಂದು ತನಿಖೆ ನಡೆಸಲು ದೆಹಲಿಯಿಂದ ನೌಕಾನೆಲೆ ಹೆಡ್‌ಕ್ವಾಟರ್ಸ್ ಆದೇಶಿಸಿದೆ. ಈ ಘಟನೆ ನೌಕಾಸೇನೆಯನ್ನು ದಿಗ್ಭ್ರಮೆಗೊಳಿಸಿದೆ. ಕಾರಣ ಯುದ್ಧ ನೌಕೆ ಐಎನ್‌ಎಸ್ ವಿಕ್ರಮಾದಿತ್ಯ ಹೆಲಿಕಾಕ್ಟರ್ ಮತ್ತು ಏರ್‌ಕ್ರಾಫ್ಟ್‌ಗಳು ಲ್ಯಾಂಡಿಂಗ್ ಆಗುವ ಮತ್ತು ನೌಕೆಯಿಂದಲೇ ಹಾರುವ ಅತ್ಯಾಧುನಿಕ ನೌಕೆ. ಈ ನೌಕೆ ಅತ್ಯಂತ ವಿಶಾಲವಾದ ಪ್ಲಾಟ್ ಫಾರಂ, ಅತಿ ಉದ್ದದ ರನ್ ವೇ ಹೊಂದಿದೆ.
ಮೇ 1ರಿಂದ ಜಂಟಿ ಸಮರಾಭ್ಯಾಸ: ಮೇ 1ರಿಂದ ಒಂದು ವಾರ ಇಂಡೋ-ಫ್ರಾನ್ಸ್ ನೌಕಾದಳ ಸಮರಾಭ್ಯಾಸ ನಡೆಯಲಿದೆ. ವರುಣ್ ಹೆಸರಿನ ಕಾರ್ಯಾಚರಣೆಗೆ ಯುದ್ಧ ನೌಕೆ ಐಎನ್‌ಎಸ್ ವಿಕ್ರಮಾದಿತ್ಯ ಕದಂಬ ನೌಕಾನೆಲೆಗೆ ಬಂದಿತ್ತು. ವರುಣ್ ಕಾರ್ಯಾಚರಣೆಗೆ ಅದು ತಯಾರಾಗಬೇಕಿತ್ತು. ಮಿಗ್-29 ಹಾಗೂ ಸಬ್ ಮೆರಿನ್ ಸಹಿತ ರಫೆಲ್ ಯುದ್ಧ ವಿಮಾನಗಳ ಹಾರಾಟ ಸಹ ನಡೆಯುವುದಿತ್ತು. ಫ್ರಾನ್ಸ್ ಎಫ್‌ಎನ್‌ಎಸ್ ಕ್ಯಾರಿಯರ್, ಡಿ ಗುಲ್ಲೇ, ನೇವಲ್ ಜೆಟ್ಸ್ ಜಂಟಿ ಹಾರಾಟಕ್ಕೆ ಸಿದ್ಧತೆ ಮಾಡಿಕೊಳ್ಳತೊಡಗಿತ್ತು. ವಿಕ್ರಮಾದಿತ್ಯದಲ್ಲಿನ ಅವಘಡ ವರುಣ್ ಕಾರ್ಯಾಚರಣೆ ಮೇಲೆ ಕರಿನೆರಳು ಬೀರಿದೆ.