ಬೆಂಗಳೂರು: ಮಹಾತ್ಮಗಾಂಧಿ ರಸ್ತೆಯ ಕಾವೇರಿ ಜಂಕ್ಷನ್ ಬಳಿಯಿರುವ ನವರತನ್ ಆಂಟಿಕ್ ಆರ್ಟ್ ಕ್ರಾಫ್ಟ್ ಅಂಗಡಿಯ ಕಟ್ಟಡದಲ್ಲಿ ಆಕಸ್ಮಿಕ ಅಗ್ನಿ ದುರಂತ ಸಂಭವಿಸಿದ್ದು, ಲಕ್ಷಾಂತರ ರೂ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾದ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ.
ಮಂಗಳವಾರ ನಸುಕಿನ 3.30ರ ಸುಮಾರಿಗೆ ಶಾರ್ಟ್ ಸರ್ಕೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಸ್ಥಳೀಯರು ಹಾಗೂ ವಾಹನ ಸವಾರರು ಅಗ್ನಿ ಶಾಮಕ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ಕೂಡಲೇ 10 ಅಗ್ನಿಶಾಮಕ ವಾಹನಗಳ ಜತೆ ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ ಸುಮಾರು ನಾಲ್ಕು ಗಂಟೆಗಳ ಕಾಲ ಬೆಂಕಿ ನಂದಿಸಿದ್ದಾರೆ.
ಈ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಉಪನಿರ್ದೇಶಕ ವರದರಾಜನ್, ಮುಂಜಾನೆ ಕಟ್ಟಡದಲ್ಲಿ ಶಾರ್ಟ್ ಸರ್ಕ್ನೂಟ್‌ನಿಂದ ಬೆಂಕಿ ಕಾಣಿಸಿಕೊಂಡಿರುವ ಸಾಧ್ಯತೆಯಿದೆ. 10 ಅಗ್ನಿಶಾಮಕ ವಾಹನಗಳು ಕಾರ್ಯಾಚರಣೆ ಆರಂಭಿಸಲಾಯಿತು. ಬೆಂಕಿಯ ತೀವ್ರತೆಗೆ ಕಟ್ಟಡದ ಒಳಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಕೊನೆಗೆ ಕಟ್ಟಡದ ಕಿಟಕಿ ಗಾಜು ಹೊಡೆದು ಒಳಗೆ ಪ್ರವೇಶಿಸಿ ಬೆಂಕಿ ನಂದಿಸಲಾಯಿತು. ಒಳಗಡೆ ಪೀಠೊಪಕರಣಗಳು ಭಸ್ಮವಾಗಿವೆ ಎಂದರು.
“ನಾಲ್ಕೈದು ಅಂತಸ್ತಿನ ಕಟ್ಟಡವಾದ್ದರಿಂದ ಬೆಂಕಿ ನಂದಿಸಲು ಕಷ್ಟವಾಯಿತು. ಕಟ್ಟಡದಲ್ಲಿ ಅಗ್ನಿ ನಂದಕಗಳನ್ನು ಅಳವಡಿಸಿಲ್ಲ. ಹೀಗಾಗಿ ಬೆಂಕಿ ಕಿನ್ನಾಲಿಗೆ ಎಲ್ಲೆಡೆ ವ್ಯಾಪಿಸಿದೆ. ಸರ್ಕಾರದ ಆದೇಶದಂತೆ ಅಗ್ನಿ ದುರಂತಕ್ಕೆ ಸಂಬಂಧಿಸಿದ ರಕ್ಷಣಾ ಕ್ರಮಗಳನ್ನು ಕೈಗೊಳ್ಳಬೇಕು. ಈ ಹಿನ್ನೆಲೆಯಲ್ಲಿ ಕಟ್ಟಡದ ಮಾಲೀಕರ ವಿರುದ್ಧ ಕ್ರಮಕೈಗೊಳ್ಳಲಾಗುವುದು’ ಎಂದು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಉಪನಿರ್ದೇಶಕ ಮಾರ್ಕಂಡೇಯ ಹೇಳಿದರು.