ಹೈದರಾಬಾದ್ : ತೆಲಂಗಾಣದ ವಾರಂಗಲ್ ನಗರದಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಬೆಂಕಿ ಅನಾಹುತ ಸಂಭವಿಸಿದ ಕಾರಣ 45ರ ಹರೆಯದ ರೋಗಿಯೊಬ್ಬರು ಉಸಿರುಗಟ್ಟಿ ಮೃತಪಟ್ಟಿರುವುದು ವರದಿಯಾಗಿದೆ.
ಬೆಂಕಿ ಅನಾಹುತ ಸಂಭವಿಸಿದೊಡನೆಯೇ ಸುಮಾರು 190 ರೋಗಿಗಳು ಸೇರಿದಂತೆ ಒಟ್ಟು 400 ಮಂದಿಯನ್ನು ಆಸ್ಪತ್ರೆಯಿಂದ ಸ್ಥಳಾಂತರಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ನಾಲ್ಕು ಮಹಡಿಗಳ ಆಸ್ಪತ್ರೆಯಲ್ಲಿ ಶಾರ್ಟ್ ಸರ್ಕ್ನೂಟ್ ಉಂಟಾದ ಕಾರಣ ಆಮ್ಲಜನಕ ಸಿಲಿಂಡರ್ ಸ್ಫೋಟಗೊಂಡು ಬೆಂಕಿ ಅನಾಹುತಕ್ಕೆ ಕಾರಣವಾಯಿತು. ಆಸ್ಪತ್ರೆ ಕಟ್ಟಡದ ಒಂದು ಭಾಗದಲ್ಲಿ ಸಣ್ಣ ಮಟ್ಟದಲ್ಲಿ ಕಾಣಿಸಿಕೊಂಡ ಬೆಂಕಿಯನ್ನು ಕೂಡಲೇ ನಂದಿಸಲಾಯಿತು. ಆದರೂ ಒಬ್ಬ ರೋಗಿ ಬೆಂಕಿಯಿಂದಾದ ದಟ್ಟನೆಯ ಹೊಗೆಯಿಂದ ಉಸಿರುಗಟ್ಟಿ ಮೃತಪಟ್ಟರು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಆಸ್ಪತ್ರೆಯಿಂದ ತೆರವುಗೊಳಿಸಲಾದ 190 ರೋಗಿಗಳನ್ನು ವಾರಂಗಲ್ ನಗರದ ವಿವಿಧ ಆಸ್ಪತ್ರೆಗಳಿಗೆ ಸೇರಿಸಲಾಯಿತು. ಈ ರೋಗಿಗಳ ಪೈಕಿ ಒಬ್ಟಾತನ ಸ್ಥಿತಿ ಗಂಭೀರವಿದೆ ಎಂದು ಮೂಲಗಳು ತಿಳಿಸಿವೆ.
ಉಪ ಮುಖ್ಯಮಂತ್ರಿ ಕೆ ಶ್ರೀಹರಿ ಅವರು ಆಸ್ಪತ್ರೆಗೆ ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆಯ ಅವಲೋಕನ ನಡೆಸಿ ಘಟನೆಯ ತನಿಖೆಗೆ ಆದೇಶಿಸಿದರು.
ಬೆಂಕಿ ಅನಾಹುತಕ್ಕೆ ನಿಖರ ಕಾರಣವೇನೆಂದು ತಿಳಿಯಲು ಪೊಲೀಸ್, ಅಗ್ನಿ ಶಾಮಕ ಹಾಗೂ ವಿದ್ಯುತ್ ಇಲಾಖೆಯ ಉನ್ನತ ಅಧಿಕಾರಿಗಳನ್ನು ಒಳಗೊಂಡ ತಂಡವನ್ನು ತಾನು ರಚಿಸಿರುವುದಾಗಿ ವಾರಂಗಲ್ ಪೊಲೀಸ್ ಕಮಿಷನರ್ ಜಿ ಸುಧೀರ್ ಬಾಬು ತಿಳಿಸಿದ್ದಾರೆ.