ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಗ್ರಾಮದ ಬಡ್ಕಿನಹಳ್ಳ ಎಂಬಲ್ಲಿ ಸಿಮೆಂಟ್ ತುಂಬಿಕೊಂಡು ಬರುತ್ತಿದ್ದ ಲಾರಿಯೊಂದರಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ.
ಲಾರಿಗೆ ಬೆಂಕಿ ಕಾಣಿಸಿಕೊಂಡ ಹಿನ್ನಲೆ ಚಾಲಕ ಮತ್ತು ಇನ್ನೋರ್ವ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ.
ಈ ಲಾರಿಯು ಸಿಮೆಂಟ್ ಹೇರಿಕೊಂಡು ಬೆಂಗಳೂರಿನಿಂದ ಮಂಗಳೂರಿಗೆ ಹೋಗುತ್ತಿತ್ತು ಎನ್ನಲಾಗಿದೆ. ಬಡ್ಕಿನಹಳ್ಳ ಬಳಿ ಲಾರಿಯ ಎಡಬದಿಯ ಚಕ್ರದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು, ನಂತರ ಲಾರಿಯ ಮೇಲ್ಬಾಗಕ್ಕೆ ಹಬ್ಬಿದೆ.
ವಿಚಾರ ತಿಳಿದ ನೆಲ್ಯಾಡಿ ಹೊರ ಠಾಣಾ ಪೊಲೀಸರು ಹಾಗೂ ಸ್ಥಳೀಯರು, ಪುತ್ತೂರು ವಿಭಾಗದ ಅಗ್ನಿ ಶಾಮಕ ದಳದವರ ನೆರವಿನಿಂದ ಬೆಂಕಿ ನಂದಿಸಲು ಯಶಸ್ವಿಯಾಗಿದ್ದಾರೆ.