ಹಾಪುರ್: ರಾಸಾಯನಿಕ ಕಾರ್ಖಾನೆಯೊಂದರಲ್ಲಿ ಸಂಭವಿಸಿದ ಬೆಂಕಿಯಲ್ಲಿ 12 ಜನರು ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ನಡೆದಿದೆ. ಪೊಲೀಸರು ಮತ್ತು ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ನವದೆಹಲಿಯಿಂದ 60 ಕಿಲೋಮೀಟರ್ ದೂರದಲ್ಲಿರುವ ಧೌಲಾನಾದಲ್ಲಿನ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟಗೊಂಡ ನಂತರ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸ್ ವಕ್ತಾರ ಸುರೇಂದ್ರ ಸಿಂಗ್ ತಿಳಿಸಿದ್ದಾರೆ.
ಕಾರ್ಖಾನೆಯು ಸಿಎನ್‌ಜಿ ಪಂಪ್‌ನ ಪಕ್ಕದಲ್ಲಿದೆ. ಅಧಿಕಾರಿಗಳ ಪ್ರಕಾರ ಸ್ಥಳದಲ್ಲಿ ರಕ್ಷಣಾ ಮತ್ತು ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸ್ಫೋಟದ ಪ್ರಭಾವ ಎಷ್ಟು ತೀವ್ರವಾಗಿದೆ ಎಂದರೆ ಸುತ್ತಮುತ್ತಲಿನ ಕೆಲವು ಕಾರ್ಖಾನೆಗಳ ಮೇಲ್ಛಾವಣಿಗಳು ಹಾನಿಗೊಳಗಾಗಿವೆ. ಕಾರ್ಖಾನೆಯಲ್ಲಿ ಬೆಂಕಿ ನಂದಿಸಲು ಅಗ್ನಿಶಾಮಕ ದಳಕ್ಕೆ ಮೂರು ಗಂಟೆ ಬೇಕಾಯಿತು ಎಂದು ವರದಿಯಾಗಿದೆ.
ಇದನ್ನೂ ಓದಿ:ಇನ್ನೂ ಸಿಕ್ಕಿಲ್ಲ ಸೂರು; 3 ವರ್ಷಗಳ ಹಿಂದಿನ ಸಂತ್ರಸ್ತರಿಗೆ ಸಿಗದ ಗೃಹ ಸೌಭಾಗ್ಯ
ಘಟನೆಯಲ್ಲಿ 12 ಮಂದಿ ಸಾವನ್ನಪ್ಪಿದ್ದು, 21 ಮಂದಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹಾಪುರ್‌ನ ಪೊಲೀಸ್ ವರಿಷ್ಠಾಧಿಕಾರಿ ದೀಪಕ್ ಭುಕರ್ ಹೇಳಿದ್ದಾರೆ.
“ಕಾರ್ಖಾನೆಗೆ ಎಲೆಕ್ಟ್ರಾನಿಕ್ ವಸ್ತುಗಳನ್ನು ತಯಾರಿಸಲು ಪರವಾನಗಿ ನೀಡಲಾಗಿದೆ. ಮತ್ತು ಈಗ, ಇಲ್ಲಿ ನಿಖರವಾಗಿ ಏನು ನಡೆಯುತ್ತಿದೆ ಎಂಬುದು ತನಿಖೆಯ ವಿಷಯವಾಗಿದೆ. ಇದು ದುಃಖಕರ ಘಟನೆಯಾಗಿದೆ. ವಿಧಿವಿಜ್ಞಾನ ತಂಡಗಳು ಇಲ್ಲಿಗೆ ತಲುಪಿ ಮಾದರಿಗಳನ್ನು ಸಂಗ್ರಹಿಸುತ್ತಿವೆ” ಎಂದು ಹಾಪುರ್ ಮೇಧಾ ಜಿಲ್ಲಾ ಮ್ಯಾಜಿಸ್ಟ್ರೇಟ್ ರೂಪಮ್ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಜೀವಹಾನಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ.