ಮುಂಬಯಿ: ಗಾಯಕ ಬಾದ್ ಷಾ, ನಟ ಸಂಜಯ್ ದತ್ ಸೇರಿದಂತೆ 40 ಮಂದಿಯ ವಿರುದ್ದ ಡಿಜಿಟಲ್ ಪೈರಸಿ ಆರೋಪದ ಮೇಲೆ ಮಾಧ್ಯಮ ಕಂಪನಿ ಎಫ್ ಐಆರ್ ದಾಖಲಿಸಿದೆ ಎಂದು ʼಇಂಡಿಯಾ ಟುಡೇʼ ವರದಿ ಮಾಡಿದೆ.
ವಯಾಕಾಮ್ 18 ನೆಟ್‌ವರ್ಕ್ ಐಪಿಎಲ್ ಪಂದ್ಯಗಳನ್ನು ಸ್ಟ್ರೀಮ್ ಮಾಡಲು ಬೌದ್ಧಿಕ ಆಸ್ತಿ ಹಕ್ಕುಗಳನ್ನು (Intellectual Property Rights) ಹೊಂದಿದೆ. ಆದರೆ ಅಕ್ರಮವಾಗಿ ಫೇರ್‌ಪ್ಲೇ ಹೆಸರಿನ ಬೆಟ್ಟಿಂಗ್ ಅಪ್ಲಿಕೇಶನ್‌ನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಗಳನ್ನು ಸ್ಟ್ರೀಮ್ ಮಾಡಲಾಗುತ್ತಿತ್ತು.
ಈ ಅಪ್ಲಿಕೇಶನ್‌ನಲ್ಲಿ ಪಂದ್ಯಗಳ ಕುರಿತಾಗಿ ಕೆಲ ನಟರು ಪ್ರಚಾರ ಮಾಡಿದ್ದರು. ಈ ಕಾರಣದಿಂದ ಡಿಜಿಟಲ್ ಪೈರಸಿ ಪ್ರಕರಣ ದಾಖಲಾಗಿದ್ದು, ಇದರಲ್ಲಿ ಸಂಜಯ್ , ಬಾದ್ ಷಾ ಅವರು ಸೇರಿದಂತೆ 40 ಮಂದಿಯ ಹೆಸರಿದೆ. ಪ್ರಕರಣ ಸಂಬಂಧ ಹೆಚ್ಚಿನ ನಟರಿಗೆ ಸಮನ್ಸ್ ನೀಡುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.
ಫೇರ್‌ಪ್ಲೇ ಅಪ್ಲಿಕೇಶನ್ ಗೂ ಸೌರಭ್ ಚಂದ್ರಕರ್ ಮತ್ತು ರವಿ ಉಪ್ಪಲ್ ಅವರ ಮಹಾದೇವ್ ಅಪ್ಲಿಕೇಶನ್ ಗೂ ಸಂಬಂಧವಿದೆ ಎನ್ನಲಾಗಿದೆ. ಸದ್ಯ ಜಾರಿ ನಿರ್ದೇಶನಾಲಯ ಮಹಾದೇವ್ ಬುಕ್ ಆ್ಯಪ್ ವಿರುದ್ಧ ಅಕ್ರಮ ಹಣ ವರ್ಗಾವಣೆಯ ಕೇಸ್ ದಾಖಲಿಸಿ ತನಿಖೆ ನಡೆಸುತ್ತಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಣಬೀರ್ ಕಪೂರ್, ಹುಮಾ ಖುರೇಷಿ, ಕಪಿಲ್ ಶರ್ಮಾ ಮತ್ತು ಶ್ರದ್ಧಾ ಕಪೂರ್ ಸೇರಿದಂತೆ ಇತರರಿಗೆ ಸಮನ್ಸ್ ನೀಡಲಾಗಿದೆ.
ಇನ್ನು ಗಾಯಕ ಬಾದ್ ಷಾ ಸೋಮವಾರ ಮಹಾರಾಷ್ಟ್ರ ಸೈಬರ್ ಕಚೇರಿಗೆ ಹಾಜರಾಗಿದ್ದಾರೆ.