ಮುಂಬಯಿ : ಮುಂಬಯಿ ಮೂಲದ ಉದ್ಯಮಿಯೊಬ್ಬರು ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ, ಅವರ ಪತಿ ರಾಜ್ ಕುಂದ್ರಾ ಮತ್ತು ಇತರ ಕೆಲವರ ವಿರುದ್ಧ 1.51 ಕೋಟಿ ರೂಪಾಯಿ ವಂಚನೆ ಆರೋಪದ ಮೇಲೆ ಪ್ರಕರಣವನ್ನು ದಾಖಲಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
ಶನಿವಾರ ಸಂಜೆ ನಿತಿನ್ ಬರೈ ಎನ್ನುವ ಉದ್ಯಮಿ ಬಾಂದ್ರಾ ಠಾಣೆಗೆ ದೂರು ನೀಡಿದ್ದು, ಎಫ್ ಐಆರ್ ದಾಖಲಿಸಲಾಗಿದೆ.
ಜುಲೈ 2014 ರಲ್ಲಿ, ಎಸ್‌ಎಫ್‌ಎಲ್ ಫಿಟ್‌ನೆಸ್ ಕಂಪನಿಯ ನಿರ್ದೇಶಕ ಕಾಶಿಫ್ ಖಾನ್, ಶಿಲ್ಪಾ ಶೆಟ್ಟಿ, ಕುಂದ್ರಾ ಮತ್ತು ಇತರರು ಲಾಭ ಗಳಿಸಲು ಉದ್ಯಮಕ್ಕೆ 1.51 ಕೋಟಿ ರೂಪಾಯಿ ಹೂಡಿಕೆ ಮಾಡಲು ಹೇಳಿ ವಂಚಿಸಿದ್ದಾರೆ ದರು ಎಂದು ದೂರುದಾರ ನಿತಿನ್ ಬರೈ ಆರೋಪಿಸಿದ್ದಾರೆ.
ಫಿಟ್‌ನೆಸ್ ಕಂಪನಿಯು ತನಗೆ ಫ್ರಾಂಚೈಸಿಯನ್ನು ನೀಡುತ್ತದೆ ಮತ್ತು ಪುಣೆಯ ಹಡಪ್‌ಸರ್ ಮತ್ತು ಕೋರೆಗಾಂವ್‌ನಲ್ಲಿ ಜಿಮ್ ಮತ್ತು ಸ್ಪಾ ತೆರೆದು ಕೊಡುವುದಾಗಿ ತನಗೆ ಭರವಸೆ ನೀಡಿತು, ಆದರೆ ಅದು ಕಾರ್ಯರೂಪಕ್ಕೆ ಬರಲಿಲ್ಲ.ಎಂದು ದೂರುದಾರ ಹೇಳಿಕೊಂಡಿರುವುದಾಗಿ ಎಫ್‌ಐಆರ್ ನಲ್ಲಿ ನಮೂದಾಗಿದೆ.
ಹಣವನ್ನು ಮರಳಿ ಕೇಳಿದಾಗ, ಬೆದರಿಕೆ ಹಾಕಲಾಗಿದೆ ಎಂದು ದೂರುದಾರ ನೀಡಿರುವ ದೂರನ್ನು ಉಲ್ಲೇಖಿಸಿ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ದೂರಿನ ಆಧಾರದ ಮೇಲೆ, ಬಾಂದ್ರಾ ಪೊಲೀಸರು 420 (ವಂಚನೆ), 120-ಬಿ (ಕ್ರಿಮಿನಲ್ ಪಿತೂರಿ), 506 (ಅಪರಾಧದ ಬೆದರಿಕೆ) ಮತ್ತು 34 (ಸಾಮಾನ್ಯ ಉದ್ದೇಶ) ಸೇರಿದಂತೆ ವಿವಿಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.