ಬೆಂಗಳೂರು: ಭಾರತದ ಖ್ಯಾತ ಬ್ಯಾಡ್ಮಿಂಟನ್ ಆಟಗಾರ, ಬೆಂಗಳೂರಿನ ಪ್ರಕಾಶ್ ಪಡುಕೋಣೆ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ ಲಕ್ಷ್ಯ ಸೇನ್, ವಯಸ್ಸಿನ ನಕಲಿ ಪ್ರಮಾಣಪತ್ರ ನೀಡಿದ್ದಾರೆಂದು ಆರೋಪಿಸಲಾಗಿದೆ. ಈ ಸಂಬಂಧ ನಗರದ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ವಿಚಾರಣೆ ಆರಂಭವಾಗಿದೆ. ಈ ಕುರಿತು ಎಂ.ಜಿ.ನಾಗರಾಜ್ ಎನ್ನುವವರು ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಲಕ್ಷ್ಯ ಸೇನ್ ಜೊತೆಗೆ ಅವರ ಕೋಚ್ ವಿಮಲ್ ಕುಮಾರ್, ತಂದೆ ಧೀರೇಂದ್ರ ಸೇನ್, ಅಣ್ಣ ಚಿರಾಗ್ ಸೇನ್, ತಾಯಿ ನಿರ್ಮಲಾ ಸೇನ್ ಹೆಸರೂ ಎಫ್ಐಆರ್‌ನಲ್ಲಿ ಕಾಣಿಸಿಕೊಂಡಿದೆ. ಲಕ್ಷ್ಯ ಮೂಲತಃ ಉತ್ತರಾ ಖಂಡದವರು. ಸದ್ಯ ಬೆಂಗಳೂರಿನಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಇವರ ವಿರುದ್ಧ ಸ್ವತಃ ಬ್ಯಾಡ್ಮಿಂಟನ್ ಅಕಾಡೆಮಿಯೊಂದರ ಕೋಚ್ ನಾಗರಾಜ್ ಧ್ವನಿಯೆತ್ತಿದ್ದಾರೆ.
ಬೇರೆ ಬೇರೆ ವಯೋಮಿತಿಯ ಬ್ಯಾಡ್ಮಿಂಟನ್ ಕೂಟಗಳಲ್ಲಿ ಲಕ್ಷ್ಯ ಸೇನ್‌ಪಾಲ್ಗೊಳ್ಳುವಂತೆ ಮಾಡಲು, ವಿಮಲ್ ಕುಮಾರ್ ಅವರು ಲಕ್ಷ್ಯ ತಂದೆ ತಾಯಿಯೊಂದಿಗೆ ಸೇರಿಕೊಂಡು 2010ರಲ್ಲೇ ನಕಲಿ ಜನ್ಮದಿನ ಪ್ರಮಾಣಪತ್ರ ನೀಡಿದ್ದಾರೆನ್ನುವುದು ನಾಗರಾಜ್ ಆರೋಪ.
ನಾಗರಾಜ್ ಹೇಳುವುದೇನು?: ಲಕ್ಷ್ಯ ಸೇನ್ ನಕಲಿ ವಯೋಮಿತಿಯ ಬಗ್ಗೆ 2015ರಲ್ಲೇ ಒಮ್ಮೆ ದೂರು ದಾಖಲಾಗಿತ್ತು. ಆಗ ದೆಹಲಿ ಕ್ರೀಡಾವಿಭಾಗಕ್ಕೆ ಸಂಬಂಧಿಸಿದ ಸಿಬಿಐ ತಂಡ ತನಿಖೆ ನಡೆಸಿತ್ತು. ಅವರು ನೀಡಿದ ಮಾಹಿತಿಯ ಪ್ರಕಾರ, ಲಕ್ಷ್ಯ ಸೇನ್ ಅಣ್ಣ ಚಿರಾಗ್ ಸೇನ್ 1996ರಲ್ಲಿ, ಲಕ್ಷ್ಯ 1998ರಲ್ಲಿ ಹುಟ್ಟಿರುವ ಸುಳಿವಿದೆ. ಆದರೆ ಲಕ್ಷ್ಯ ಅವರ ಪೋಷಕರು ಇನ್ನೊಮ್ಮೆ ನೀಡಿರುವ ಪ್ರಮಾಣಪತ್ರದಲ್ಲಿ, ಲಕ್ಷ್ಯ 2001ರಲ್ಲಿ ಜನಿಸಿದ್ದಾರೆ ಎಂದು ಹೇಳಲಾಗಿದೆ. 4 ವರ್ಷದ ಹುಡುಗ ಲಕ್ಷ್ಯ 2ನೇ ತರಗತಿ ಎಂದೂ ಒಮ್ಮೆ ತೋರಿಸಲಾಗಿದೆ. ಇವೆಲ್ಲ ಒಟ್ಟಾರೆ ಲಕ್ಷ್ಯ ನಕಲಿ ಪ್ರಮಾಣಪತ್ರ ನೀಡಿದ್ದಕ್ಕೆ ಸಾಕ್ಷಿಯಾಗಿದೆ ಎನ್ನುವುದು ಆರೋಪ.
ವಿಮಲ್ ಹೇಳುವುದೇನು?: ಕೋಚ್ ವಿಮಲ್ ಕುಮಾರ್ ಈ ಬಗ್ಗೆ ತನಗೇನು ಗೊತ್ತಿಲ್ಲ ಎಂದು ಹೇಳಿದ್ದಾರೆ. 2010ರಲ್ಲಿ ಲಕ್ಷ್ಯ ತಮ್ಮ ಅಕಾಡೆಮಿಗೆ ಬಂದರು. ಎಲ್ಲರಂತೆ ಅವರಿಗೂ ತರಬೇತಿ ನೀಡಿದ್ದೇನೆ. ದೂರುದಾರರು ಏನು ಹೇಳಿದ್ದಾರೆಂದೂ ತನಗೆ ಗೊತ್ತಿಲ್ಲ ಎಂದು ವಿಮಲ್ ಹೇಳಿದ್ದಾರೆ. ಲಕ್ಷ್ಯ ಸೇನ್ ಪ್ರಸ್ತುತ ಭಾರತ ಕಂಡ ಪ್ರಖ್ಯಾತ ಬ್ಯಾಡ್ಮಿಂಟನ್ ಆಟಗಾರರಾಗಿದ್ದಾರೆ. ಅವರು 2021ರ ಹುವೆಲ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚು, 2022ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ, ಬೆಳ್ಳಿಯನ್ನು ಗೆದ್ದಿದ್ದಾರೆ.