Advertisement

ಕಮಲ್ ಹಾಸನ್‌ ವಿರುದ್ಧ ಎಫ್ಐಆರ್‌

05:27 AM May 15, 2019 | Team Udayavani |
‘ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಹಿಂದೂ’ ಎಂಬ ಹೇಳಿಕೆಯು ಮಕ್ಕಳ್‌ ನೀಥಿ ಮಯ್ಯಂ ಅಧ್ಯಕ್ಷ ಕಮಲ್ ಹಾಸನ್‌ಗೆ ಮುಳುವಾಗಿ ಪರಿಣಮಿಸಿದೆ. ಕಮಲ್ ವಿರುದ್ಧ ಮಂಗಳವಾರ ತಮಿಳುನಾಡಿನ ಅರವಕುರಿಚಿಯಲ್ಲಿ ಎಫ್ಐಆರ್‌ ದಾಖಲಿಸಲಾಗಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಾಗೂ ಎರಡು ಕೋಮುಗಳ ನಡುವೆ ದ್ವೇಷಕ್ಕೆ ಪ್ರಚೋದನೆ ನೀಡಿದ ಆರೋಪ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಇನ್ನೊಂದೆಡೆ, ಹಿಂದೂ ಸೇನಾ ಎಂಬ ಸಂಘಟನೆಯ ಅಧ್ಯಕ್ಷ ವಿಷ್ಣು ಗುಪ್ತಾ ಎಂಬವರು ದಿಲ್ಲಿಯ ಕೋರ್ಟ್‌ವೊಂದರಲ್ಲಿ ಕಮಲ್ ಹಾಸನ್‌ ವಿರುದ್ಧ ದೂರು ಸಲ್ಲಿಸಿದ್ದು, 16ರಂದು ಇದು ವಿಚಾರಣೆಗೆ ಬರುವ ಸಾಧ್ಯತೆಯಿದೆ. ಜೊತೆಗೆ, ದಿಲ್ಲಿ ಹೈಕೋರ್ಟ್‌ನಲ್ಲಿ ಕಮಲ್ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ಸಲ್ಲಿಕೆಯಾಗಿದೆ. ರಾಜಕೀಯ ಲಾಭಕ್ಕಾಗಿ ಧರ್ಮವನ್ನು ದುರ್ಬಳಕೆ ಮಾಡುವುದನ್ನು ತಡೆಯುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶಿಸಿ ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಜೇಟ್ಲಿಗೆ ರಮ್ಯಾ ತಿರುಗೇಟು
ಸಿಎಂ ಮಮತಾರನ್ನು ಸರ್ವಾಧಿಕಾರಿ ಎಂದು ಟೀಕಿಸಿದ ಸಚಿವ ಜೇಟ್ಲಿ ವಿರುದ್ಧ ಕಾಂಗ್ರೆಸ್‌ ಸಾಮಾಜಿಕ ಮಾಧ್ಯಮ ವಿಭಾಗದ ಮುಖ್ಯಸ್ಥೆ ರಮ್ಯಾ ದಿವ್ಯ ಸ್ಪಂದನ ಕಿಡಿಕಾರಿದ್ದಾರೆ. ದೀದಿಯ ತಿರುಚಿದ ಫೋಟೋ ಹಾಕಿದ್ದಕ್ಕೆ ಬಿಜೆಪಿ ಯುವ ಮೋರ್ಚಾ ನಾಯಕಿಯನ್ನು ಬಂಧಿಸಿರುವುದನ್ನು ಪ್ರಶ್ನಿಸುವ ವೇಳೆ ಜೇಟ್ಲಿ ದೀದಿ ಯನ್ನು ಸರ್ವಾಧಿಕಾರಿ ಎಂದು ಕರೆದಿದ್ದರು. ‘ಈ ಮುಕ್ತ ಸಮಾಜದಲ್ಲಿ ತಮಾಷೆ ಇನ್ನೂ ಜೀವಂತವಾಗಿದ್ದು, ಸರ್ವಾಧಿಕಾರಿಗಳು ಇತರರನ್ನು ನೋಡಿ ನಗುತ್ತಾರೆ. ಆದರೆ ತಮ್ಮನ್ನು ನೋಡಿ ಯಾರೂ ನಗಬಾರದೆಂದು ಬಯಸುತ್ತಾರೆ’ ಎಂದು ಜೇಟ್ಲಿ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ದಿವ್ಯಸ್ಪಂದನ, ‘ಜೇಟ್ಲಿಯವರೇ, ನೀವು ಹೇಳಿದ್ದನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ, ಮೋದಿ ಯವರ ಕುರಿತು ನಾನು ತಮಾಷೆ ಮಾಡಿದ್ದಕ್ಕೆ ನನ್ನ ವಿರುದ್ಧ ದೇಶದ್ರೋಹದ ಆರೋಪ ಹೊರಿಸಿದ್ದೀರಲ್ಲ? ನಿಮ್ಮ ಪ್ರಕಾರ, ಮೋದಿಯವರೂ ಸರ್ವಾಧಿಕಾರಿಯೇ?’ ಎಂದು ಪ್ರಶ್ನಿಸಿದ್ದಾರೆ.

ತಿರುಚಿದ ಫೋಟೋ: ಕ್ಷಮೆಗೆ ತಾಕೀತು
ಸಾಮಾಜಿಕ ಜಾಲತಾಣಗಳಲ್ಲಿ ಪ.ಬಂಗಾಲ ಸಿಎಂ ಮಮತಾ ಬ್ಯಾನರ್ಜಿ ಅವರ ತಿರುಚಿದ ಫೋಟೋವನ್ನು ಅಪ್‌ಲೋಡ್‌ ಮಾಡಿ, ಬಂಧಿತರಾಗಿದ್ದ ಬಿಜೆಪಿ ಯುವ ಮೋರ್ಚಾ ನಾಯಕಿ ಪ್ರಿಯಾಂಕಾ ಶರ್ಮಾಗೆ ಸುಪ್ರೀಂ ಕೋರ್ಟ್‌ ಮಂಗಳವಾರ ಜಾಮೀನು ನೀಡಿದೆ. ಆದರೆ, ತಿರುಚಿದ ಫೋಟೋ ಹಾಕಿದ್ದಕ್ಕೆ ಮಮತಾ ಬ್ಯಾನರ್ಜಿ ಅವರಲ್ಲಿ ಲಿಖೀತ ರೂಪದಲ್ಲಿ ಕ್ಷಮೆ ಯಾಚಿಸುವಂತೆಯೂ ಶರ್ಮಾಗೆ ನ್ಯಾಯಪೀಠ ತಾಕೀತು ಮಾಡಿದೆ.

Advertisement

ಕಾಂಗ್ರೆಸ್‌ಗೆ ಡ್ರೈವರ್‌ ಸೀಟ್ ಕೊಡಲ್ಲ
ಕಾಂಗ್ರೆಸ್ಸೇತರ- ಬಿಜೆಪಿಯೇತರ ತೃತೀಯ ರಂಗ ರಚನೆಗೆ ಉತ್ಸುಕರಾಗಿದ್ದ ತೆಲಂಗಾಣ ಸಿಎಂ ಕೆ. ಚಂದ್ರಶೇಖರ್‌ ರಾವ್‌ಗೆ ಪ್ರಾದೇಶಿಕ ಪಕ್ಷಗಳಿಂದ ಅಂದುಕೊಂಡಷ್ಟು ಸ್ಪಂದನೆ ವ್ಯಕ್ತವಾಗಿಲ್ಲ. ಡಿಎಂಕೆ ನಾಯಕ ಸ್ಟಾಲಿನ್‌ ಅವರೂ, ‘ಕಾಂಗ್ರೆಸ್ಸೇತರ- ಬಿಜೆಪಿಯೇತರ ತೃತೀಯ ರಂಗ ಸ್ಥಾಪನೆ ಸಾಧ್ಯವಿಲ್ಲ. ಏನೇ ತೀರ್ಮಾನ ಕೈಗೊಳ್ಳುವುದಿದ್ದರೂ ಮೇ 23ರ ಬಳಿಕವೇ’ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ. ಹೀಗಾಗಿ, ಕೆಸಿಆರ್‌ ತಮ್ಮ ನಿಲುವನ್ನು ಸ್ವಲ್ಪಮಟ್ಟಿಗೆ ಸಡಿಲಿಸಿದ್ದಾರೆ.ಮಂಗಳವಾರ ಮಾತನಾಡಿದ ಟಿಆರ್‌ಎಸ್‌ ವಕ್ತಾರ ಆಬಿದ್‌ ರಸೂಲ್ ಖಾನ್‌, ‘ಕೇಂದ್ರದಲ್ಲಿ ಸರಕಾರ ರಚನೆಗೆ ಕಾಂಗ್ರೆಸ್‌ನ ಬೆಂಬಲ ಪಡೆಯುವಲ್ಲಿ ನಾವು ಮುಕ್ತರಾಗಿದ್ದೇವೆ. ಆದರೆ, ಯಾವ ಕಾರಣಕ್ಕೂ ಕಾಂಗ್ರೆಸ್‌ಗೆ ಡ್ರೈವಲ್ ಸೀಟು ಬಿಟ್ಟುಕೊಡಲ್ಲ’ ಎಂದಿದ್ದಾರೆ. ಈ ಮೂಲಕ ಪ್ರಧಾನಿ ಹುದ್ದೆಯನ್ನು ಕಾಂಗ್ರೆಸ್‌ಗೆ ಕೊಡಲ್ಲ ಎಂದು ಪರೋಕ್ಷವಾಗಿ ಟಿಆರ್‌ಎಸ್‌ ಸ್ಪಷ್ಟಪಡಿಸಿದೆ.

ಬಿಜೆಪಿಯಿಂದ ಆರೆಸ್ಸೆಸ್‌ ದೂರ
ಪ್ರಧಾನಿ ಮೋದಿ ನೇತೃತ್ವದ ಸರಕಾರ ಮುಳುಗುತ್ತಿರುವ ಹಡಗಿದ್ದಂತೆ. ಈಗ ಆರೆಸ್ಸೆಸ್‌ ಕೂಡ ಬಿಜೆಪಿಯಿಂದ ದೂರವಾಗುತ್ತಿದೆ ಎಂದು ಬಿಎಸ್‌ಪಿ ನಾಯಕಿ ಮಾಯಾವತಿ ಹೇಳಿದ್ದಾರೆ. ಈ ಬಾರಿ ಆರ್‌ಎಸ್‌ಎಸ್‌ ಸದಸ್ಯರು ಬಿಜೆಪಿ ಪರ ಪ್ರಚಾರ ನಡೆಸಿದ್ದನ್ನು ನಾನು ನೋಡಿಯೇ ಇಲ್ಲ. ಆರ್‌ಎಸ್‌ಎಸ್‌ ಕೂಡ ಬಿಜೆಪಿ ಜೊತೆ ನಿಲ್ಲುತ್ತಿಲ್ಲ ಎಂದಿದ್ದಾರೆ.ಬಿಜೆಪಿಯಿಂದ ಆರೆಸ್ಸೆಸ್‌ ದೂರಪ್ರಧಾನಿ ಮೋದಿ ನೇತೃತ್ವದ ಸರಕಾರ ಮುಳುಗುತ್ತಿರುವ ಹಡಗಿದ್ದಂತೆ. ಈಗ ಆರೆಸ್ಸೆಸ್‌ ಕೂಡ ಬಿಜೆಪಿಯಿಂದ ದೂರವಾಗುತ್ತಿದೆ ಎಂದು ಬಿಎಸ್‌ಪಿ ನಾಯಕಿ ಮಾಯಾವತಿ ಹೇಳಿದ್ದಾರೆ. ಈ ಬಾರಿ ಆರ್‌ಎಸ್‌ಎಸ್‌ ಸದಸ್ಯರು ಬಿಜೆಪಿ ಪರ ಪ್ರಚಾರ ನಡೆಸಿದ್ದನ್ನು ನಾನು ನೋಡಿಯೇ ಇಲ್ಲ. ಆರ್‌ಎಸ್‌ಎಸ್‌ ಕೂಡ ಬಿಜೆಪಿ ಜೊತೆ ನಿಲ್ಲುತ್ತಿಲ್ಲ ಎಂದಿದ್ದಾರೆ.
Advertisement

Udayavani is now on Telegram. Click here to join our channel and stay updated with the latest news.

Next