Advertisement
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರನ್ನು ಪ್ರಕರಣದ 2ನೇ ಆರೋಪಿ ಮಾಡಲಾಗಿದ್ದು, ರಮೇಶ್ ಗೌಡ ಮೊದಲ ಆರೋಪಿಯಾಗಿದ್ದಾರೆ. ಹಣ ನೀಡುವಂತೆ ಬೆದರಿಕೆ ಹಾಕಿದ್ದಾರೆಂದು ಆರೋಪಿಸಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ರಿಯಲ್ ಎಸ್ಟೇಟ್ ಉದ್ಯಮಿ ವಿಜಯ್ ಟಾಟಾ ಅವರು ಬೆಂಗಳೂರಿನ ಅಮೃತಹಳ್ಳಿ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಎಫ್ಐಆರ್ ದಾಖಲಾಗಿದೆ.
ನಿರಂತರವಾಗಿ ಸಂಪರ್ಕದಲ್ಲಿದ್ದ ರಮೇಶ್ ಗೌಡ ಆ. 24ರಂದು ರಾತ್ರಿ 10 ಗಂಟೆಗೆ ಮನೆಗೆ ಆಗಮಿಸಿ ಊಟ ಮಾಡುತ್ತಾ ಚನ್ನಪಟ್ಟಣ ಉಪ ಚುನಾವಣೆ ಬಗ್ಗೆ ವಿವರಿಸತೊಡಗಿದರು. ನಿಖೀಲ್ ಕುಮಾರಸ್ವಾಮಿಯವರಿಗೆ ಟಿಕೆಟ್ ನೀಡುವುದು ಅಂತಿಮವಾಗಿದ್ದು, ಈ ಬಾರಿಯ ಚುನಾವಣ ಕಾರ್ಯಗಳಲ್ಲಿ ಸಕ್ರಿಯವಾಗಿರಲು ಮನವಿ ಮಾಡಿದರು. ಅದರ ಬಗ್ಗೆ, ನಾನು ಆಲೋಚಿಸುತ್ತಿರುವಾಗಲೇ ತಮ್ಮ ಮೊಬೈಲ್‌ನಿಂದ ಎಚ್.ಡಿ. ಕುಮಾರಸ್ವಾಮಿಗೆ ಕರೆ ಮಾಡಿದರು. ನನ್ನ ಜತೆ ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ ಚನ್ನಪಟ್ಟಣ ಉಪಚುನಾವಣೆ ಬಗ್ಗೆ ಪ್ರಸ್ತಾಪಿಸಿದರು. ಈ ಬಾರಿ ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಮಗೆ ಗೆಲುವು ಅನಿವಾರ್ಯ. ಚುನಾವಣ ಖರ್ಚಿಗಾಗಿ ನೀವು 50 ಕೋಟಿ ರೂ. ಕೊಡಬೇಕಾಗುತ್ತದೆ ಎಂದು ದೂರಿನಲ್ಲಿ ವಿಜಯ್ ಟಾಟಾ ಉಲ್ಲೇಖಿಸಿದ್ದಾರೆ.