Advertisement

ಸಾಯಿಬಾಬಾರ 3ನೇ ಅವತಾರ ಎಂದು ನಂಬಿಸಿ ಲಕ್ಷಾಂತರ ರೂ. ವಂಚನೆ: ಎಫ್ಐಆರ್‌  ದಾಖಲು

03:28 PM Sep 04, 2022 | Team Udayavani |

ಚನ್ನಪಟ್ಟಣ: ಸಾಯಿಬಾಬಾ ಅವತಾರ ಎಂದು ಜನರನ್ನು ನಂಬಿಸಿ, ಲಕ್ಷಾಂತರ ರೂ. ಹಣ ವಸೂಲಿ ಮಾಡುತ್ತಿದ್ದ ವ್ಯಕ್ತಿ ವಿರುದ್ಧ ನಗರದ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಮಹಾರಾಷ್ಟ್ರದ ಕೊಲ್ಲಾಪುರದ ಸಚಿನ್‌ ಆಕಾರಾಂ ಸರ್‌ಗರ್‌ ಎಂಬ ವ್ಯಕ್ತಿ ನಾನು ಸಾಯಿಬಾಬಾರ 3ನೇ ಅವತಾರ ಎಂದು ನಂಬಿಸಿ ಕೆಲ ಭಕ್ತರಿಂದ ಲಕ್ಷಾಂತರ ರೂ. ವಂಚಿಸಿದ್ದ ಎಂದು ಹೇಳಲಾಗಿದ್ದು, ವಂಚನೆಗೊಳಗಾದ ಭಕ್ತೆ ಸಿಂಧೂ ಎಂಬುವರು ದೂರು ದಾಖಲಿಸಿದ್ದರು.

ಪ್ರೇಮ ಸಾಯಿ ಎಂದು ನಂಬಿಸಿದ್ದ ಪುಟ್ಟಪರ್ತಿ ಸಾಯಿಬಾಬಾ ಮರಣಾ ನಂತರ ಚನ್ನಪಟ್ಟಣ ತಾಲೂಕಿನ ದೊಡ್ಡಮಳೂರು ಗ್ರಾಮದಲ್ಲಿ ಪ್ರೇಮಸಾಯಿಬಾಬಾ ಆಗಿ ಅವತರಿಸುತ್ತಾರೆ ಎಂಬ ಉಲ್ಲೇಖವನ್ನು ಬಂಡವಾಳ ಮಾಡಿಕೊಂಡ ಈತ, ಮಳೂರು ಸಮೀಪ ಕಾಣಿಸಿಕೊಂಡು ನಾನೇ ಪ್ರೇಮ್‌ ಸಾಯಿಬಾಬಾ ಎಂದು ಭಕ್ತರನ್ನು ನಂಬಿಸಿದ್ದ.

ಮಂಡಿಪೇಟೆ ಯಶೋಧಮ್ಮ ಮನೆಯಲ್ಲಿ ಭಜನೆ ಕಾರ್ಯಕ್ರಮ ನಡೆಸುತ್ತಿದ್ದನು. ಸಿಂಧೂ ಭಜನೆಯಲ್ಲಿ ಪಾಲ್ಗೊಂಡಿದ್ದರು. ಗುರು ವಾರ ಭಜನೆಗೆ ಹೆಚ್ಚು ಜನ ಬರುವ ಕಾರಣ ನಿಮ್ಮ ತೋಟದ ಮನೆಯಲ್ಲಿ ಅವಕಾಶ ನೀಡಿ ಎಂಬ ಮನವಿಗೆ ಸಿಂಧೂ ಪತಿಯೊಂದಿಗೆ ಮಾತನಾಡಿ ಅನು ಮತಿ ನೀಡಿದ್ದರು. ಬಳಿಕ ಈ ಜಾಗವನ್ನು ಪ್ರೇಮ್‌ ಸಾಯಿ ಟ್ರಸ್ಟ್‌ಗೆ ಬರೆಯುವಂತೆ ಒತ್ತಾಯಿಸಿದ್ದರೆಂದು ದೂರಿನಲ್ಲಿ ತಿಳಿಸಿದ್ದಾರೆ.

ಹಣ ವಸೂಲಿ: ಸಿಂಧೂರಿಂದ 1.50 ಲಕ್ಷ ರೂ. ವೆಂಕಟೇಶ ಎಂಬುವ ರಿಂದ 1 ಲಕ್ಷ ರಾಜೇಶ್‌ ಎಂಬುವರಿಂದ 2 ಲಕ್ಷ ರೂ. ಚನ್ನೇಗೌಡ ಎಂಬುವರಿಂದ 1 ಲಕ್ಷ ಹಾಗೂ ಇನ್ನು ಹಲವರಿಂದ ಹಣ ಪಡೆದಿರುವುದು ಬೆಳಕಿಗೆ ಬಂದಿದೆ.

Advertisement

ಕೊಲ್ಲಾಪುರ ಭಕ್ತರಿಂದ ಮಾಹಿತಿ: ಗುರುಪೌರ್ಣಮಿ ಯಂದು ಕೊಲ್ಲಾಪುರ ಮೂಲದ ಕೆಲ ಭಕ್ತರು ಆಗಮಿಸಿದ್ದರು. ಅವರಿಂದ ಈತನ ವಿವರ ತಿಳಿದು ಕೊಲ್ಲಾಪುರಕ್ಕೆ ತೆರಳಿದ್ದ ಚನ್ನೇಗೌಡ, ಪ್ರೇಮ್‌ ಸಾಯಿಬಾಬ ಕುರಿತ ಎಲ್ಲ ಮಾಹಿತಿ ಸಂಗ್ರಹಿಸಿದ್ದಾರೆ. ಈತ ಮದುವೆಯಾಗಿ ಮಕ್ಕಳಿದ್ದಾರೆ. ಈತ ಡೋಂಗಿ ಬಾಬಾ ಎಂಬುದು ಗೊತ್ತಾಗಿದೆ.

ಈ ನಿಟ್ಟಿನಲ್ಲಿ ಡೋಂಗಿ ಬಾಬಾ ಹಾಗೂ ಪ್ರೇಮ ಸ್ವರೂಪಿಣಿ ಸಾಯಿ ಟ್ರಸ್ಟ್‌ ಟ್ರಸ್ಟಿಗಳಾದ ವಿನಾಕ್‌ ರಾಜ್‌ ಅಲಿಯಾಸ್‌ ಸಾಯಿರಾಜ್‌, ಜಯಂತ್‌, ಯಶೋಧಮ್ಮ, ಉಮಾಶಂಕರ್‌, ಪ್ರಶಾಂತ್‌ ವಿರುದ್ಧ ಮಂಗಳವಾರಪೇಟೆ ಮರಳುಹೊಲದ ನಿವಾಸಿ ಸಿಂಧೂ ದೂರು ದಾಖಲಿಸಿದ್ದು, ನಕಲಿ ಬಾಬಾ ಪತ್ತೆಗಾಗಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next