ಹೊಸದಿಲ್ಲಿ : 2019ರ ಲೋಕಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಇಂದು ಗುರವಾರ ಬಿರುಸಿನಿಂದ ಸಾಗುತ್ತಿರುವಂತೆಯೇ ಬಿಜೆಪಿ ನೇತೃತ್ವದ ಎನ್‌ಡಿಎ 343 ಕ್ಷೇತ್ರಗಳಲ್ಲಿ ಭರ್ಜರಿ ಮುನ್ನಡೆಯನ್ನು ಸಾಧಿಸಿದ್ದು ಮತ್ತೆ ಅಧಿಕಾರಕ್ಕೆ ಮರಳುವುದು ಬಹುತೇಕ ಖಚಿತವಾಗುತ್ತಿರುವಂತೆಯೇ ಇತ್ತ ಕೇಂದ್ರ ಹಣಕಾಸು ಸಚಿವ ಅರುಣ್ ಜೇತ್ಲಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಸೂಚನೆಯ ಪ್ರಕಾರ ಬಿಜೆಪಿ ನೇತೃತ್ವದ ಹೊಸ ಸರಕಾರದ ಮೊದಲ 100 ದಿನಗಳ ಆರ್ಥಿಕ ಅಜೆಂಡಾ ರೂಪಿಸುವಲ್ಲಿ ಬ್ಯುಸಿಯಾಗಿದ್ದಾರೆ.
ಖಾಸಗಿ ಬಂಡವಾಳ ಹೂಡಿಕೆ, ಬೃಹತ್ ಪ್ರಮಾಣದ ಉದ್ಯೋಗ ಸೃಷ್ಟಿ ಮತ್ತು ಕೃಷಿ ವಲಯಕ್ಕೆ ಹೆಚ್ಚಿನ ಪರಿಹಾರ ಕೊಡುವುದು ಈ ಅಜೆಂಡಾದಲ್ಲಿ ಮುಖ್ಯವಾಗಿವೆ ಎಂದು ಮೂಲಗಳು ತಿಳಿಸಿವೆ.
ಜತೆಗೆ ಈ ಅಜೆಂಡಾದಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷ ತೆರಿಗೆ ವಸೂಲಾತಿಯನ್ನು ಸುಧಾರಿಸುವುದು, ಜಿಎಸ್‌ಟಿ ತೆರಿಗೆ ಸ್ಲಾಬ್‌ಗಳನ್ನು ಸರಳೀಕರಿಸುವುದು ಕೂಡ ಸೇರಿದೆ ಎಂದು ಮೂಲಗಳು ತಿಳಿಸಿವೆ.
ಬಹುತೇಕ ಈ ವರ್ಷ ಜುಲೈ ತಿಂಗಳಲ್ಲಿ ಮಂಡಿಸಲಾಗುವ 2019-20ರ ಸಾಲಿನ ಅಂತಿಮ ಬಜೆಟ್ ನಲ್ಲಿ, ಈಗಾಗಲೇ ಮಧ್ಯಾವಧಿ ಬಜೆಟ್ ನಲ್ಲಿ ಪ್ರಕಟಿಸಲಾಗಿರುವಂತೆ, ಆದಾಯ ತೆರಿಗೆ ಸಂಬಂಧಿತ ಟ್ಯಾಕ್ಸ್ ಸ್ಲಾಬ್ ಗಳಿಗೆ ಬದಲಾವಣೆ ತರುವುದು ಕೂಡ ಈ ಅಜೆಂಡಾದಲ್ಲಿನ ಮುಖ್ಯ ವಿಷಯವಾಗಿದೆ.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಇತರ ಎಲ್ಲ ಸಚಿವಾಲಯಗಳಿಗೆ ಮತ್ತು ಇಲಾಖೆಗಳಿಗೆ ಬಿಜೆಪಿ ನೇತೃತ್ವದ ಹೊಸ ಎನ್‌ಡಿಎ ಸರಕಾರದ ಮೊದಲ 100 ದಿನಗಳ ಅಜೆಂಡಾ ತಯಾರಿಸುವಂತೆ ಸೂಚಿಸಿರುವುದಾಗಿ ಮೂಲಗಳು ತಿಳಿಸಿವೆ.
ಹೊಸ ಸರಕಾರದ ಮುಂದಿನ ಕೆಲವೇ ದಿನಗಳಲ್ಲಿ ಅಧಿಕಾರಕ್ಕೆ ಬರಲಿದೆ.
ಕೈಗಾರಿಕೆ ಬೆಳವಣಿಗೆ, ಸಾಲ ನೀಡಿಕೆ ಪ್ರಮಾಣ ಹೆಚ್ಚಳ, ಬ್ಯಾಂಕಿಂಗ್ ವಲಯದ ಬಲವೃದ್ಧಿ, ಮತ್ತು ನಿಧಿ ಒದಗಣೆ ಆಗದ ಕ್ಷೇತ್ರಗಳಿಗೆ ನಿಧಿ ಒದಗಿಸುವುದೇ ಮೊದಲಾದ ವಿಷಯಗಳಿಗೆ 100 ದಿನಗಳ ಅಜೆಂಡಾ ದಲ್ಲಿ ಆದ್ಯತೆ ನೀಡುವಂತೆ ಪ್ರಧಾನಿ ಮೋದಿ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.