ನರ್ಮದಾ, ಗುಜರಾತ್ : ಗುಜರಾತ್‌ನ ನರ್ಮದಾ ಜಿಲ್ಲೆಯಲ್ಲಿ 1,989 ಕೋಟಿ ರೂ. ವೆಚ್ಚದಲ್ಲಿ ರೂಪಿಸಲಾಗುತ್ತಿರುವ ಭಾರೀ ಗಾತ್ರದ ಸರ್ದಾರ್ ವಲಭಭಾಯಿ ಪಟೇಲ್ ಪ್ರತಿಮೆಯ ಫಿನಿಶಿಂಗ್ ಕೆಲಸಗಳು ಇದೇ ಅಕ್ಟೋಬರ್ 25ರೊಳಗೆ ಮುಗಿಯಲಿದೆ ಎಂದು ಅಧಿಕೃತ ಪ್ರಕಟನೆ ತಿಳಿಸಿದೆ.
182 ಮೀಟರ್ ಎತ್ತರದ ಸರ್ದಾರ್ ಪಟೇಲ್ ಪ್ರತಿಮೆಯನ್ನು ಅವರ ಜನ್ಮದಿನವಾದ ಅಕ್ಟೋಬರ್ 31ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸುವರೆಂದು ಈ ಮೊದಲು ರಾಜ್ಯ ಸರಕಾರ ಹೇಳಿತ್ತು.
“ಏಕತೆಯ ಪ್ರತಿಮೆ’ ಎಂದೇ ಕರೆಯಲ್ಪಡುವ ಈ ಪ್ರತಿಮೆ ನಿರ್ಮಾಣ ತಾಣಕ್ಕೆ ಇಂದು ಶನಿವಾರ ಮುಖ್ಯಮಂತ್ರಿ ವಿಜಯ್ ರೂಪಾಣಿ ಮತ್ತು ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ಅವರು ಭೇಟಿ ನೀಡಿ ಪ್ರತಿಮೆ ನಿರ್ಮಾಣ ಕಾರ್ಯದ ಪ್ರಗತಿಯನ್ನು ಅವಲೋಕಿಸಿದರು.
ಪ್ರತಿಮೆಯ ಒಳಭಾಗದ ಉಕ್ಕು ಮತ್ತು ಹಿತ್ತಾಳೆಯ ಸಂರಚನೆಯನ್ನು ಸೆ.10 ಮತ್ತು ಅ.20ರೊಳಗೆ ಅನುಕ್ರಮವಾಗಿ ಪೂರ್ಣಗೊಳಿಸಲಾಗುವುದು ಮತ್ತು ಅ.25ರೊಳಗೆ ಫಿನಿಶಿಂಗ್ ಕೆಲಸಗಳನ್ನು ಮುಗಿಸಲಾಗುವುದು ಎಂಬ ಮಾಹಿತಿಯನ್ನು ಈ ಸಂದರ್ಭದಲ್ಲಿ ಮುಖ್ಯಮಂತ್ರಿಗೆ ನೀಡಲಾಯಿತು ಎಂದು ಅಧಿಕೃತ ಸರಕಾರಿ ಪ್ರಕಟನೆ ತಿಳಿಸಿದೆ.
ಸ್ವಾತಂತ್ರ್ಯದ ಬಳಿಕ ದೇಶವನ್ನು ಒಗ್ಗೂಡಿಸುವ ಗುರುತರ ಸವಾಲಿನ ಅತ್ಯಂತ ಕಷ್ಟಕರ ಕೆಲಸವನ್ನು ಸರ್ದಾರ್ ಪಟೇಲರು “ಉಕ್ಕಿನ ಮನುಷ್ಯ’ನಾಗಿ ನೆರವೇರಿಸಿದರು. ಈ ಮಹಾನ್ ನಾಯಕನನ್ನು ಸೂಕ್ತ ರೀತಿಯಲ್ಲಿ ಗೌರವಿಸುವ ಉದ್ದೇಶದಲ್ಲಿ ಈ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ರೂಪಿಸಿದ್ದರು ಎಂದು ಸಿಎಂ ರೂಪಾಣಿ ಹೇಳಿದರು.
ಸರ್ದಾರ್ ಪಟೇಲರನ್ನು ಕಾಂಗ್ರೆಸ್ ಸದಾ ನಿರ್ಲಕ್ಷಿಸಿಕೊಂಡು ಬಂದಿದೆ; ಕಾಂಗ್ರೆಸ್ ನವರು ಕೇವಲ ನೆಹರೂ – ಗಾಂಧಿ ಕುಟುಂಬದವರನ್ನು ಮಾತ್ರವೇ ಸ್ಮರಿಸುತ್ತಾರೆ ಎಂದು ರೂಪಾಣಿ ಟೀಕಿಸಿದರು.