ಶಿರಸಿ: ಕಳೆದ ಮಳೆಗಾಲದಲ್ಲಿ ಕೆರೆಯ ಒಂದು ಪಾರ್ಶ್ವದ ಒಡ್ಡು ಒಡೆದು ಅಪಾಯದ ಕರೆಗಂಟೆ ಬಾರಿಸಿದ್ದ ತಾಲೂಕಿನ ಬೆಟ್ಟಕೊಪ್ಪ ಗ್ರಾಮದ ಕೆರೆ ಬಹುತೇಕ ದುರಸ್ತಿಯಾಗಿದ್ದು, ಇದೀಗ ನಳನಳಿಸುವಂತೆ ಆಗಿದೆ.
ಇದನ್ನು ಗಮನಿಸಿದ ಗ್ರಾಮಸ್ಥರಿಂದ ಕಾಯಂ ದುರಸ್ತಿ ಮಾಡಿಸಲು ಸಾಧ್ಯವಾಗದೇ ಇದ್ದಾಗ ಜನಪ್ರತಿನಿಧಿಗಳ ಬಳಿ ವಿನಂತಿಸಿಕೊಂಡಿದ್ದರು. ಸ್ಪಂದಿಸಿದ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ಜಿಪಂ ಸದಸ್ಯೆ ಉಷಾ ಹೆಗಡೆ ಅವರ ಪ್ರಸ್ತಾವನೆಗೆ ಈ ಹಿಂದೆ ಜಿ.ಪಂ ಸಿಇಒ ರೋಶನ್ ಅನುಮತಿ ನೀಡಿದ್ದರು. ಇತರರು ಕೆರೆ ಅಭಿವೃದ್ಧಿ ಮಾಡುವಂತೆ ಸೂಚನೆ ನೀಡಿದ್ದರು.
ಜಿಪಂ ಇಂಜನೀಯರಿಂಗ ಶಿರಸಿ ಉಪ ವಿಭಾಗದಿಂದ ಕೆರೆಗಳ ನಿರ್ವಹಣೆ ಯೋಜನೆ ಅಡಿ ತಾತ್ಕಾಲಿಕ ದುರಸ್ತಿ ನಡೆಸಲು 3.17 ಲಕ್ಷ ರೂ. ಮೊತ್ತದಲ್ಲಿ ಕಾಮಗಾರಿಗೆ ಅನುಮತಿ ಸಿಕ್ಕಿತ್ತು. ಎರಡು ತಿಂಗಳ ಕಾರ್ಯದಿಂದ 50 ಅಡಿ ಉದ್ದದಲ್ಲಿ ಏರಿಯ ಪುನರ್ ನಿರ್ಮಾಣ ಮಾಡಲಾಗಿದೆ. ಇನ್ನೊಂದೆಡೆ ಕುಸಿದಿದ್ದ ಪಿಚ್ಚಿಂಗ್ ಮರಳಿ ಕಟ್ಟಲಾಗಿದೆ. ಕೆರೆಯಲ್ಲಿ ಇದೀಗ ನೀರು ನಿಂತಿದ್ದು, ಈ ಭಾಗದ ಜನ ಜಾನುವಾರುಗಳಿಗೆ, ಪಶು ಪಕ್ಷಿಗಳಿಗೆ, ರೈತರ ತೋಟಗಳಿಗೆ ನೆರವಾಗಿದೆ.
ಇಲಾಖೆ ಅಧಿಕಾರಿ ರಾಮಚಂದ್ರ ಗಾಂವಕರ್ ಹಾಗೂ ಇತರ ಅಧಿಕಾರಿಗಳ ಸೂಚನೆ ಪ್ರಕಾರ ಗುತ್ತಿಗೆದಾರ ಗಣೇಶ ಆಚಾರಿ ಕಾಮಗಾರಿ ನಡೆಸಿದ್ದಾರೆ. ಜಿಪಂ ಸದಸ್ಯೆ ಉಷಾ ಹೆಗಡೆ ಸ್ಥಳ ಭೇಟಿ ಮಾಡಿ ಕಾಮಗಾರಿಯನ್ನೂ ವೀಕ್ಷಿಸಿದ್ದರು. ಇದೀಗ ಕೆರೆ ನಳನಳಿಸುತ್ತಿದ್ದು, ತುಂಬಿದ ಕೆರೆ ನೋಡಲು ಕೂಡ ಸುಂದರವಾಗಿದೆ ಎಂಬುದು ಅಭಿಮತವಾಗಿದೆ.
Advertisement
ಗ್ರಾಮದ ಸರ್ವೆ ನಂಬರ್ 49ರಲ್ಲಿ ಇರುವ ಒಂದು ಎಕರೆ ವಿಸ್ತೀರ್ಣದ ಕೆರೆ ಕಳೆದ ಮಳೆಗಾಲದಲ್ಲಿ ತೂತು ಬಿದ್ದು ಒಡ್ಡು ಒಡೆಯುವ ಅಪಾಯ ಇತ್ತು. ಒಂದುವರೆ ದಶಕಗಳ ಹಿಂದೆ ಕೆರೆಯ ಹೂಳನ್ನು ಎತ್ತಿ ಚೆಂದಗೊಳಿಸಲಾಗಿದ್ದ ಕೆರೆಯ ನೀರೂ ನಿಲ್ಲದಂತಹ ಡೊಂಬ ಬಿದ್ದಿದ್ದು ಹಾಗೂ ತಕ್ಷಣ ದುರಸ್ತಿ ಮಾಡಿಸದೇ ಇದ್ದರೆ ಕೆರೆಯ ಕೆಳಭಾಗದಲ್ಲಿದ್ದ ಇಪ್ಪತ್ತು ಎಕರೆಗೂ ಅಧಿಕ ಪ್ರದೇಶದ ಅಡಕೆ ತೋಟ, ಭತ್ತದ ಗದ್ದೆಗೆ ಹಾನಿ ಉಂಟಾಗುವ ಸಾಧ್ಯತೆ ಇತ್ತು.
Related Articles
Advertisement
ಇದೀಗ ಶೇ.90ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ವಾರಾಂತ್ಯದಲ್ಲಿ ಕಾಮಗಾರಿ ಪೂರ್ಣವಾಗಲಿದೆ. ಕೆರೆಯ ನೀರನ್ನೂ ಉಳಿಸಿ ಒಡ್ಡಿನ ದುರಸ್ತಿ ಮಾಡಿದ್ದು ಗ್ರಾಮಸ್ಥರ ಹರ್ಷಕ್ಕೆ ಕಾರಣವಾಗಿದೆ.