Advertisement

ಕಾರ್ಮಿಕ ಸಂಘಟನೆ ಸಂವಿಧಾನ ಬದ್ಧ

05:24 PM May 13, 2019 | Team Udayavani |

ಕಾರವಾರ: ಕಾರ್ಮಿಕರ ಸಂಘಟನೆಯು ಸಂವಿಧಾನ ಬದ್ಧವಾಗಿದ್ದು ಕಾನೂನಾತ್ಮಕ ಹೋರಾಟದಿಂದ ಹಕ್ಕನ್ನು ಪಡೆದುಕೊಳ್ಳಬೇಕು. ಕಾರ್ಮಿಕರ ಶೋಷಣೆ ವಿರುದ್ಧದ ಹೋರಾಟಕ್ಕೆ ಸಂವಿಧಾನ ಬದ್ಧವಾದ ಹಕ್ಕನ್ನು ಪಡೆದುಕೊಳ್ಳಲು, ಸಂಘಟನಾತ್ಮಕ ಹೋರಾಟ ಕಾರ್ಮಿಕ ಸಂಘಟನೆಗೆ ಅನಿವಾರ್ಯ ಎಂದು ಕರ್ನಾಟಕ ಉಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಾಧೀಶ ಎಚ್.ಎನ್‌. ನಾಗಮೋಹನದಾಸ್‌ ಅಭಿಪ್ರಾಯಪಟ್ಟರು.

Advertisement

ಇಲ್ಲಿನ ಗುರುಭವನದ ಸಭಾಂಗಣದಲ್ಲಿ ಕಾರವಾರ ಸಿವಿಲ್ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜ್‌ ಗುತ್ತಿಗೆ ಕಾರ್ಮಿಕರ ಸಂಘದ ಆಶ್ರಯದಲ್ಲಿ ರವಿವಾರ ನಡೆದ ಕಾರ್ಮಿಕರ ಹಕ್ಕು-ಕಾನೂನಾತ್ಮಕ ಚಿಂತನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಪಂಚದಲ್ಲಿ ಅಭಿವೃದ್ಧಿ ಹಾಗೂ ಸಂಪತ್ತಿನ ಉತ್ಪತ್ತಿಗೆ ಕಾರ್ಮಿಕರ ಶ್ರಮ, ಕಾಯಕ ಕಾರಣ. ಆದರೆ ಕಾರ್ಮಿಕರ ಜೀವನ ಅಭಿವೃದ್ಧಿಗೆ ಅನ್ಯಾಯ ವಾಗುತ್ತಿರುವುದು ವಿಷಾದಕರ. ಸಂವಿಧಾನ ಮತ್ತು ಕಾರ್ಮಿಕರ ಕಾನೂನು ಕಾರ್ಮಿಕರ ಪರವಾಗಿದ್ದರೂ, ಆಡಳಿತ ವ್ಯವಸ್ಥೆಯಿಂದ, ಸರ್ಕಾರದಲ್ಲಿರುವವರು ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ಇದು ಅತ್ಯಂತ ವಿಷಾದಕರ ಸಂಗತಿಯಾಗಿದೆ ಎಂದರು.

ಇಂತಹ ಕಾರ್ಮಿಕ ವಿರೋಧಿ ನೀತಿ ವಿರುದ್ಧ ಸಂಘಟನಾತ್ಮಕ ಹೋರಾಟ ಅನಿವಾರ್ಯವಾಗಿದೆ. ಕಾರ್ಮಿಕರು ಹೋರಾಟದಿಂದಲೇ ಅವರ ಬದುಕು, ಸೌಲಭ್ಯ ಪಡೆದುಕೊಂಡಿರುವುದು ಇತಿಹಾಸದಿಂದ ತಿಳಿದುಬರುತ್ತದೆ ಎಂದರು. ಕಾರ್ಮಿಕರ ವಿರೋಧಿ ನೀತಿ ಇದ್ದಂತಹ ಸಂದರ್ಭದಲ್ಲಿ ಹೋರಾಟದಿಂದಲೇ ಕಾನೂನು ಬದಲಾವಣೆ ಮಾಡಲು ಸಾಧ್ಯ. ಇವೆಲ್ಲಕ್ಕೂ ಕಾರ್ಮಿಕರು ಕಾನೂನು ಜ್ಞಾನ ವೃದ್ಧಿಸಿಕೊಂಡರೆ ಮಾತ್ರ ಸಾಧ್ಯ ಎಂದು ಹೇಳಿದರು.

ಕಾರವಾರ ಜಿಲ್ಲಾ ಕಾನೂನು ಸೇವೆಗಳ ಸಮಿತಿ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಟಿ. ಗೋವಿಂದಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ ಅನ್ಯಾಯಕ್ಕೊಳಗಾದ‌ ಕಾರ್ಮಿಕರು ಹೋರಾಟದ ಮೂಲಕ ಕಾನೂನಾತ್ಮಕ ಹಕ್ಕನ್ನು ಪಡೆದುಕೊಳ್ಳಬೇಕು. ಜಿಲ್ಲಾ ಕಾನೂನು ಸೇವೆಗಳ ಸಮಿತಿಯು ಇಂತಹ ಶೋಷಣೆಗೊಳಗಾದ ಕಾರ್ಮಿಕರ ಹಿತರಕ್ಷಣೆ ಕಾಪಾಡುವುದರಲ್ಲಿ ಬದ್ಧವಾಗಿದ್ದು ಕಾರ್ಮಿಕರು ಅರ್ಜಿ ದಾಖಲಿಸುವುದರ ಮೂಲಕ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು ಎಂದು ಹೇಳಿದರು.

Advertisement

ವಿಶೇಷ ಆಮಂತ್ರಿತರಾಗಿ ಆಗಮಿಸಿದ ಕುರಿತು ಶಿರಸಿಯ ಹಿರಿಯ ವಕೀಲರ ಹಾಗೂ ಸ್ಪಂದನ ಲೀಗಲ್ ಅಕಾಡೆಮಿ ಅಧ್ಯಕ್ಷ ಎ.ರವೀಂದ್ರ ನಾಯ್ಕ ಕಾರ್ಮಿಕರ ಹಕ್ಕುಗಳು ಹಾಗೂ ಸಮಸ್ಯೆಗಳ ಪರಿಹಾರ ಕುರಿತು ವಿವರಿಸಿದರು.

ಸಂಘದ ಪದಾಧಿಕಾರಿಗಳಾದ ಕಿಶನ್‌ ಬಾರಿಕ್‌, ದಿಪ್ತಿ ನಾಯ್ಕ, ಪ್ರವೀಣ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.

ಕಾರವಾರ ಸಿವಿಲ್ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜು ಗುತ್ತಿಗೆ ನೌಕರರ ಕಾರ್ಮಿಕರ ಸಂಘದ ಅಧ್ಯಕ್ಷ ವಿಲ್ಸನ್‌ ಫರ್ನಾಂಡಿಸ್‌ ಸ್ವಾಗತಿಸಿದರು. ಖೈರೂನ್ನಿಸಾ ಶೇಖ್‌ ಕಾರ್ಯಕ್ರಮ ನಿರೂಪಿಸಿದರು. ತೃಪ್ತಿ ಕೊಡಾರಕರ ವಂದಿಸಿದರು.

ಗುತ್ತಿಗೆ ನೌಕರರಿಗೆ ಸೌಲಭ್ಯಕ್ಕೆ ಮನವಿ
ಕಾರವಾರ: ಕಾರವಾರ ಮೆಡಿಕಲ್ ಕಾಲೇಜು ಗುತ್ತಿಗೆ ನೌಕರರ (ಕಾರ್ಮಿಕರ) ಸಂಘದ ವತಿಯಿಂದ ಇಲ್ಲಿನ ಗುತ್ತಿಗೆ ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ ನಿವೃತ್ತ ನ್ಯಾಯಾಧಿಧೀಶ ಎಚ್.ಎನ್‌. ನಾಗಮೋಹನ್‌ ದಾಸ್‌ ಸಮ್ಮುಖದಲ್ಲಿ ಮನವಿ ನೀಡಲಾಯಿತು. ಮೆಡಿಕಲ್ ಕಾಲೇಜು ಅಧಿಧೀನದಲ್ಲಿನ ಆಸ್ಪತ್ರೆಯ ಗುತ್ತಿಗೆ ಕಾರ್ಮಿಕರಿಗೆ ಹಾಗೂ ಮೆಡಿಕಲ್ ಕಾಲೇಜು ಗುತ್ತಿಗೆ ನೌಕರರಿಗೆ ಕಾರ್ಮಿಕರ ಕಾಯಿದೆ ಅಡಿಯಲ್ಲಿ ಸಿಗುವ ಎಲ್ಲಾ ಸೌಲಭ್ಯಗಳನ್ನು ಮಂಜೂರು ಮಾಡಿಸಿಕೊಡಬೇಕೆಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಟಿ. ಗೋವಿಂದಯ್ಯಗೆ ಸಂಘದ ಅಧ್ಯಕ್ಷ ವಿಲ್ಸನ್‌ ಹಾಗೂ ಕಾರ್ಮಿಕರು ಮನವಿ ಅರ್ಪಿಸಿದರು. ಸ್ಪಂದನ ಲೀಗಲ್ ಆಕಾಡೆಮಿ ಶಿರಸಿ ಅಧ್ಯಕ್ಷ ಎ.ರವೀಂದ್ರ ನಾಯ್ಕ, ಸಂಘದ ಅಧ್ಯಕ್ಷ ವಿಲ್ಸನ್‌ ಫರ್ನಾಂಡಿಸ್‌ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next