ವಿಜಯಪುರ: ಉದ್ದೇಶಿತ ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು. ವಿದ್ಯುತ್ ಹಳೆ ಮಾರ್ಗದ ಸ್ಥಳಾಂತರ ಸೇರಿದಂತೆ ಇತರೆ ಎಲ್ಲ ಕಾಮಗಾರಿಗಳಿಗೆ ತ್ವರಿತವಾಗಿ ಟೆಂಡರ್ ಕರೆಯುವಂತೆ ಜಿಲ್ಲಾಧಿಕಾರಿ ಡಾ| ವಿ.ಬಿ.ದಾನಮ್ಮವರ ಸಂಬಂಧಿಸಿದ ಅಧಿಕಾರಿಗಳು, ಗುತ್ತಿಗೆದಾರರಿಗೆ ಸೂಚಿಸಿದರು.
ವಿಜಯಪುರ ಹೊರ ವಲಯದಲ್ಲಿ ಬುರಣಾಪುರ-ಮದಭಾವಿ ಪ್ರದೇಶದಲ್ಲಿ ಉದ್ದೇಶಿತ ವಿಜಯಪುರ ವಿಮಾನ ನಿಲ್ದಾಣ ಯೋಜನೆಯ ನಿರ್ಮಾಣ ಹಂತದ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಜಿಲ್ಲಾಧಿಕಾರಿಗಳು, ಕಾಮಗಾರಿಯಲ್ಲಿ ಯಾವುದೇ ಲೋಪ ಆಗದಂತೆ ಗುಣಮಟ್ಟದ ಕಾಮಗಾರಿ ನಡೆಸುವಂತೆ ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಮೊದಲ ಹಂತದಲ್ಲಿನ ರನ್ ವೇ, ಟ್ಯಾಕ್ಸಿ ವೇ, ಎಪ್ರಾನ್, ಇಸೋಲೇಶನ್ ಬೇ, ಕೂಡು ರಸ್ತೆ, ಒಳ ರಸ್ತೆಗಳು, ಪೆರಿಪೆರಲ್ ರಸ್ತೆಗಳು ಹಾಗೂ ಇತರೆ ಕಾಮಗಾರಿಯನ್ನು ಮತ್ತು ಎರಡನೇ ಹಂತದಲ್ಲಿನ ಟರ್ಮಿನಲ್ ಕಟ್ಟಡ, ಎಟಿಸಿ ಟಾವರ್, ಸಿ.ಎಫ್. ಆರ್. ಕಟ್ಟಡ, ಕಾಂಪೌಂಡ್ ಗೋಡೆ, ವಾಚ್ ಟಾವರ್, ಮೇಲ್ಮಟ್ಟದ ನೀರು ಸಂಗ್ರಹಾಲಯ, ಕೆಳಮಟ್ಟದ ನೀರು ಸಂಗ್ರಹಾಲಯ ನಿರ್ಮಾಣ ಕಾಮಗಾರಿಗಳ ಪರಿಶೀಲಿಸಿದರು.
ವಿಜಯಪುರ ವಿಮಾನ ನಿಲ್ದಾಣ ಯೋಜನೆ ಎರಡು ಹಂತದಲ್ಲಿ 220 ಕೋಟಿ ರೂ.ಗಳ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಮೊದಲ ಹಂತದಲ್ಲಿ 95 ಕೋಟಿ ರೂ. ಕಾಮಗಾರಿಗೆ 2021ರ ಜನವರಿ ತಿಂಗಳಲ್ಲಿ ಚಾಲನೆ ನೀಡಲಾಗಿದ್ದು, ಕಾಮಗಾರಿ ಮುಕ್ತಾಯಕ್ಕೆ 2022ರ ಮೇ ತಿಂಗಳವರೆಗೆ ವಿಸ್ತರಿಸಲಾಗಿದೆ. ಪ್ರಸ್ತುತ ಕಾಮಗಾರಿಯ ಭೌತಿಕ ಪ್ರಗತಿಯು ಶೇ.63.58 ರಷ್ಟಿದ್ದು, ಆರ್ಥಿಕ ಪ್ರಗತಿಯು ಶೇ.63.58 ರಷ್ಟಾಗಿದೆ ಎಂದು ಅಧಿಕಾರಿಗಳು ವಿವರ ನೀಡಿದರು.
ಎರಡನೇ ಹಂತದಲ್ಲಿ 125 ಕೋಟಿ ರೂ. ವೆಚ್ಚದಲ್ಲಿ ಸಿಟಿ ಸೈಡ್ ಕಾಮಗಾರಿ ಕೈಗೊಳ್ಳುವ ಜೊತೆಗೆ, ಮತ್ತೆ 3 ಉಪ ಕಾಮಗಾರಿಗಾಳಾಗಿ ವಿಂಗಡಿಸಲಾದೆ. ಉಪ ಕಾಮಗಾರಿ 1ರ ಅಂದಾಜು ಮೊತ್ತ 79 ಕೋಟಿ ರೂ. ಇದ್ದು, ಉದ್ದೇಶಿತ ಕಾಮಗಾರಿ ನಡೆಸಲಾಗಿದೆ. ಸದರಿ ಕಾಮಗಾರಿ 2022ರ ಮಾರ್ಚ್ ತಿಂಗಳಲ್ಲಿ ಆರಂಭಿಸಿದ್ದು ಕಾಮಗಾರಿ ಪೂರ್ಣಗೊಳಿಸಲು 15 ತಿಂಗಳು ಅವಧಿ ನಿಗದಿಪಡಿಸಲಾಗಿದೆ. ಪ್ಯಾಸೆಂಜರ್ ಟರ್ಮಿನಲ್ ಕಟ್ಟಡ, ಸಿಎಫ್ ಆರ್ ಕಟ್ಟಡ, ಇಎಸ್‌ಎಸ್ ಕಟ್ಟಡ, ಕೆಳಮಟ್ಟದ ನೀರು ಸಂಗ್ರಹಾಲಯ, ವಾಚ್ ಟಾವರ್ಸ್, ಆವರಣ ಗೋಡೆ ಸೇರಿದಂತೆ ಕಾಮಗಾರಿಯ ಪ್ರಸ್ತುತ ಹಂತದಲ್ಲಿ ಭೌತಿಕ ಪ್ರಗತಿಯು ಶೇ.4.93 ರಷ್ಟು ಆರ್ಥಿಕ ಪ್ರಗತಿಯು ಶೇ.4.93 ರಷ್ಟಾಗಿದೆ ಎಂದು ವಿವರಿಸಿದರು.
ಉಪ ಕಾಮಗಾರಿ 2ರ 27 ಕೋಟಿ ರೂ. ವೆಚ್ಚದಲ್ಲಿನ ವಿದ್ಯುತ್ ಮತ್ತು ನೀರು ಸರಬರಾಜು ಉಪ ಕಾಮಗಾರಿಗೆ ಸಂಬಂಧಿಸಿದಂತೆ ವಿದ್ಯುತ್ ಮಾರ್ಗಗಳನ್ನು ಸ್ಥಳಾಂತರಕ್ಕೆ ಕಾರ್ಯಾದೇಶ ನೀಡಲಾಗಿದೆ ಹಾಗೂ ಶೀಘ್ರದಲ್ಲಿ ಕೆಲಸ ಆರಂಭಿಸಲಾಗುವುದು. 24×7 ನೀರು ಸರಬರಾಜುಗೆ ಸಂಬಂಧಿಸಿದಂತೆ 5.94 ಕೋಟಿ ರೂ.ಗಳನ್ನು ಕೆಯುಡಬ್ಲ್ಯೂಎಸ್‌ಡಿಬಿ ಇಲಾಖೆಗೆ ಈಗಾಗಲೇ ಭರಣಾ ಮಾಡಲಾಗಿದೆ. ಸದರಿ ಕಾಮಗಾರಿ ಆರ್ಥಿಕ ಬಿಡ್ ಅನುಮೋದನೆಗೆ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.
24×7 ವಿದ್ಯುತ್ ಸರಬರಾಜು ಕಾಮಗಾರಿಯ ಅಂದಾಜು ಪತ್ರಿಕೆಯ ಆರ್ಥಿಕ ಬಿಡ್ ಅನುಮೋದನೆ ಹಂತ ದಲ್ಲಿರುತ್ತದೆ. ಉಪ ಕಾಮಗಾರಿ 3ರಲ್ಲಿ ಅಂದಾಜು ಮೊತ್ತ 19 ಕೋಟಿ ರೂ. ಗಳ ಏವಿಯೋನಿಕ್ಸ್ ಹಾಗೂ ಸೆಕ್ಯೂರಿಟಿ ಇಕ್ವಿಪ್‌ಮೆಂಟ್ಸ್ ವರ್ಕ್ಸ್ಕಾಮಗಾರಿಯ ಪ್ರಸ್ತುತ ಹಂತವು ಟೆಂಡರ್ ಪ್ರಕ್ರಿಯೆಯಲ್ಲಿದೆ. 120 ಕೋಟಿ ರೂ.ಗಳ ಹೆಚ್ಚುವರಿ ಮೊತ್ತದ ಎಟಿಆರ್ -72 ದಿಂದ ಏರಬಸ್-320ಗೆ ವಿಸ್ತರಣೆ ಕಾಮಗಾರಿಗೆ ಈಗ ಡಿಪಿಆರ್ ತಯಾರಿಸುವ ಕೆಲಸ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ʼಯೋಜನೆ ಜವಾಬ್ದಾರಿ ಹೊತ್ತಿರುವ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು, ಸಂಬಂಧಿಸಿದ ಗುತ್ತಿಗೆದಾರರು ಇದ್ದರು.