ಮಸ್ಕಿ: ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಂಡ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಮಾರ್ಚ್ ತಿಂಗಳ ಅಂತ್ಯದೊಳಗೆ ಪೂರ್ಣಗೊಳಿಸಬೇಕು ಎಂದು ತಾಪಂ ಸಹಾಯಕ ನಿರ್ದೇಶಕ ಶಿವಾನಂದರೆಡ್ಡಿ ಹೇಳಿದರು.
ಅಡವಿಭಾವಿ (ಮಸ್ಕಿ) ಗ್ರಾಪಂ ವ್ಯಾಪ್ತಿಯ ವಿವಿಧ ಹಳ್ಳಿಗಳಿಗೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿ ಮಾತನಾಡಿದರು.
ಅಡವಿಭಾವಿಯಲ್ಲಿ ಕೈಗೊಂಡ ಎರಡು ಭೋಜನಾಲಯ ಆದಷ್ಟು ಬೇಗ ಪೂರ್ಣಗೊಳಿಸಬೇಕು. ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಂಡರೆ ಜಿಪಂಗೆ ಹೊಸದಾಗಿ ಪ್ರಸ್ತಾವನೆ ಸಲ್ಲಿಸಲು ಅನುಕೂಲವಾಗಲಿದೆ ಎಂದರು.
ಉಸ್ಕಿಹಾಳ ಮಾರ್ಗದಲ್ಲಿ ಮಾರಲದಿನ್ನಿ ಜಲಾಶಯದ ಹಳ್ಳಕ್ಕೆ ನಿರ್ಮಿಸಿರುವ ವೆಂಟಡ್ ಚೆಕ್ ಡ್ಯಾಂ (ಸೇತುವೆ) ವಿಶಿಷ್ಟವಾಗಿದೆ. ಜಿಪಂ ಸಿಇಒ ತಾಲೂಕಿಗೆ ಭೇಟಿ ನೀಡಿದಾಗ ಸೇತುವೆ ವೀಕ್ಷಣೆಗೆ ಸಮಯ ನಿಗದಿಪಡಿಸಬೇಕು. 15 ಲಕ್ಷ ರೂ. ವೆಚ್ಚದಲ್ಲಿ ಪೂರ್ಣಗೊಂಡಿರುವ ಸೇತುವೆಗೆ ಹೆಚ್ಚುವರಿಯಾಗಿ 14 ಲಕ್ಷ ರೂ. ಬಿಡುಗಡೆಗೆ ಜಿಪಂಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ನೀರಿನ ತೊಟ್ಟಿಗಳಿಗೆ ಸಕಾಲದಲ್ಲಿ ನೀರು ಪೂರೈಸಲು ಮುತುವರ್ಜಿ ವಹಿಸಬೇಕು. ಇಂಗು ಗುಂಡಿಗಳಿಂದ ಗ್ರಾಮಗಳಲ್ಲಿ ಸ್ವತ್ಛತೆ ಎದ್ದು ಕಾಣುತ್ತಿದೆ ಎಂದರು.
ಈ ವೇಳೆ ಗ್ರಾಪಂ ಅಭಿವೃದ್ಧಿ ಅಧಿಕಾರಿ ಸುರೇಶ ಪಾಟೀಲ್, ಬಿಎಫ್‌ಟಿ ದುರುಗೇಶ ಸೇರಿದಂತೆ ಇತರರಿದ್ದರು.