ಬೆಂಗಳೂರು: ನಗರದಲ್ಲಿ ಹೆಚ್ಚಾಗುತ್ತಿರುವ ಅಪರಾಧಗಳ ತಡೆಗೆ ನಗರ ಪೊಲೀಸರು ಹೊಸ ಯೋಜನೆ ರೂಪಿಸಿದ್ದು, ಅಪರಾಧ ತಡೆ ಮಾತ್ರವಲ್ಲ, ಕ್ರಿಮಿನಲ್‌ಗಳನ್ನು ಬಂಧಿಸಲು ಸಹಾಯವಾಗಲು ಕೇಂದ್ರ ಸರ್ಕಾರ ಪರಿಚಯಿಸಿರುವ “ಮೊಬೈಲ್ ಕ್ರೈಂ ಆ್ಯಂಡ್ ಕ್ರಿಮಿನಲ್ ಟ್ರ್ಯಾಕಿಂಗ್ ನೆಟ್‌ವರ್ಕ್ ಸಿಸ್ಟಂ’ (ಎಂಸಿಸಿಟಿಎನ್‌ಎಸ್) ಎಂಬ ಆ್ಯಪ್ ಮತ್ತು ಫಿಂಗರ್ ಸ್ಕ್ಯಾನರ್ ಮೂಲಕ ಕಾರ್ಯಾಚರಣೆ ಆರಂಭಿಸಿದ್ದಾರೆ.
ಇತ್ತೀಚೆಗೆ ಕಳ್ಳತನ, ಸುಲಿಗೆ, ದರೋಡೆಗಳಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ಸಾಫ್ಟ್ವೇರ್ ಕಂಪನಿ ಸಿಬ್ಬಂದಿ ರಾತ್ರಿ ಹೆಚ್ಚಾಗಿ ಸಂಚರಿಸುತ್ತಿರುತ್ತಾರೆ. ಅದನ್ನೇ ಬಂಡವಾಳ ಮಾಡಿಕೊಂಡಿರುವ ಕಳ್ಳರು, ತಡರಾತ್ರಿ ಒಂಟಿಯಾಗಿ ಓಡಾಡುವವರನ್ನು ಅಡ್ಡಹಾಕಿ ಸುಲಿಗೆ ಮಾಡುತ್ತಿದ್ದಾರೆ. ಈ ವೇಳೆ ಕೊಲೆ, ದರೋಡೆಯಂತಹ ಕೃತ್ಯಗಳು ನಡೆಯುತ್ತಿವೆ.
ಹೀಗಾಗಿ ಕೇಂದ್ರ ಸರ್ಕಾರ ಹಳೇ ಆರೋಪಿ ಗಳ ಪತ್ತೆಗಾಗಿ ಎಂಸಿಸಿಟಿಎನ್‌ಎಸ್ ಎಂಬ ಆ್ಯಪ್ ಪರಿಚಯಿಸಿತ್ತು. ಈ ಮೂಲಕ ಹಳೇ ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳು ರಾತ್ರಿ ವೇಳೆ ಅನುಮಾನಾಸ್ಪದವಾಗಿ ಓಡಾಡುತ್ತಿದ್ದರೆ ಅವರನ್ನು ಹಿಡಿದು ತಪಾಸಣೆ ಮಾಡುವುದರ ಜತೆಗೆ ಅವರ ಕಾರ್ಯಚಟುವಟಿಕೆಗಳ ಬಗ್ಗೆಯೂ ಮಾಹಿತಿ ಸಂಗ್ರಹಿಸಬಹುದು. ಈ ಸಂಬಂಧ ಕಳೆದ 10 ದಿನಗಳಿಂದ ನಗರ ಪೊಲೀಸರು ಈ ಆ್ಯಪ್ ಮೂಲಕ ರಾತ್ರಿ ವೇಳೆ ಪ್ರಾಯೋಗಿಕವಾಗಿ ತಪಾಸಣೆ ಕೈಗೊಂಡಿ ದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಏನಿದು ಆ್ಯಪ್?: ಎಂಸಿಸಿಟಿಎನ್‌ಎಸ್ ಆ್ಯಪ್ ನಲ್ಲಿ ಈಗಾಗಲೇ ನಗರದಲ್ಲಿ ಅಪರಾಧ ಕೃತ್ಯ ಎಸಗಿರುವ ಎಲ್ಲ ಹಳೇ ಆರೋಪಿಗಳ ಬೆರಳಚ್ಚು ಸೇರ್ಪಡೆಯಾಗಿದೆ. ಎಲ್ಲ ಠಾಣೆಗಳ ವ್ಯಾಪ್ತಿಯಲ್ಲಿ ರಾತ್ರಿ ಗಸ್ತು ತಿರುಗುವ ಮತ್ತು ವಾಹನಗಳ ತಪಾಸಣೆ ನಡೆಸುವ ಪೊಲೀಸರ ಮೊಬೈಲ್‌ಗಳಲ್ಲಿ ಈ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಲಾಗಿದ್ದು, ಪ್ರತ್ಯೇಕ ಪಾಸ್‌ವರ್ಡ್ ಮತ್ತು ಯುಸರ್ ನೇಮ್ ಕೊಡಲಾಗಿದೆ. ಅಲ್ಲದೆ, ಒಂದು ಫಿಂಗರ್ ಸ್ಕ್ಯಾನರ್ ಕೂಡ ಕೊಡಲಾಗಿದೆ.
ಅಲ್ಲಲ್ಲಿ ಬ್ಯಾರಿಕೇಡ್ ಹಾಕಿ ವಾಹನಗಳ ತಪಾಸಣೆ ನಡೆಸುವ ಪೊಲೀಸರು, ಅನುಮಾನಾಸ್ಪದ ವ್ಯಕ್ತಿಗಳು ಕಂಡ ಕೂಡಲೇ ಅವರ ಬೆರಳಚ್ಚನ್ನು ಫಿಂಗರ್ ಸ್ಕ್ಯಾನರ್‌ನಲ್ಲಿ ಒತ್ತಲು ಹೇಳುತ್ತಾರೆ. ಒಂದು ವೇಳೆ ಆತನ ವಿರುದ್ಧ ಕಳ್ಳತನ, ದರೋಡೆ, ಸುಲಿಗೆ ಸೇರಿ ಬೇರೆ ಯಾವುದೇ ಅಪರಾಧಗಳಿದ್ದರೆ, ಆ್ಯಪ್‌ನಲ್ಲಿರುವ ಹಳೇ ಬೆರಳಚ್ಚು ಹಾಗೂ ಈಗಿನ ಬೆರಳಚ್ಚನ್ನು 2-5 ನಿಮಿಷದಲ್ಲಿ ಹೊಂದಾ ಣಿಕೆ ಮಾಡಿ ಸಂದೇಶ ನೀಡುತ್ತದೆ. ಆಗ ಪೊಲೀಸರು ಕೂಡಲೇ ಆತನನ್ನು ವಶಕ್ಕೆ ಪಡೆದುಕೊಂಡು ಆತ ಯಾವ ಕಾರ್ಯಕ್ಕಾಗಿ ರಾತ್ರಿ ವೇಳೆ ಓಡಾಡು ತ್ತಿದ್ದಾನೆ? ಎಲ್ಲಿಗೆ ಹೋಗುತ್ತಿದ್ದಾನೆ? ಎಂಬೆಲ್ಲ ಮಾಹಿತಿ ಪಡೆಯಬಹುದು.
ಅಲ್ಲದೆ, ಯಾವುದಾದರೂ ಪ್ರಕರಣದಲ್ಲಿ ಪಾಲ್ಗೊಂಡು ತಲೆಮರೆಸಿಕೊಂಡಿರುವ ಆರೋಪಿ ಯನ್ನು ಸುಲಭವಾಗಿ ಪತ್ತೆ ಹಚ್ಚಬಹುದು. ಹೀಗಾಗಿ ನಗರದ ಪ್ರತಿ ಠಾಣೆಗೆ ಐದು ಆ್ಯಪ್‌ಗಳು ಮತ್ತು ಸ್ಕ್ಯಾನರ್‌ಗಳನ್ನು ಕೊಡಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಆ್ಯಪ್ ಮತ್ತು ಫಿಂಗರ್ ಸ್ಕ್ಯಾನರ್ ಮೂಲಕ ಅನುಮಾನಾಸ್ಪದ ವ್ಯಕ್ತಿಗಳ ಬೆರಳಚ್ಚು ಪಡೆದು, ಅವರು ಈ ಹಿಂದೆ ಯಾವುದಾದರೂ ಅಪರಾಧದಲ್ಲಿ ಭಾಗಿಯಾಗಿದ್ದಾರೆಯೇ?ಎಂದು ಪರಿಶೀಲಿಸಿ ಮುಂದಿನ ಕ್ರಮಕೈಗೊಳ್ಳುತ್ತೇವೆ. ಆದರೆ, ಈ ಯಾರ ಬೆರಳಚ್ಚುಗಳನ್ನು ಸಂಗ್ರಹಿಸುವುದಿಲ್ಲ. ಆದರೆ, ಅಪರಾಧ ಪ್ರಕರಣಗಳಲ್ಲಿ ಬಂಧನಕ್ಕೊಳಗಾಗಿದ್ದರೆ ಸಂದೇಶ ನೀಡುತ್ತದೆ ಎಂದು ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸುಬ್ರಹ್ಮಣೇಶ್ವರ್ ರಾವ್ ಹೇಳಿದರು.
ಎಂಸಿಸಿಟಿಎನ್‌ಎಸ್ ಆ್ಯಪ್ ಮತ್ತು ಸ್ಕ್ಯಾನರ್ ಮೂಲಕ ರಾತ್ರಿ ವೇಳೆ ಅಪರಾಧ ಕೃತ್ಯ ಎಸಗಲು ಸಂಚು ರೂಪಿಸಿ ಓಡಾಡುವ ಹಳೇ ಆರೋಪಿಗಳ ಬಗ್ಗೆ ಮಾಹಿತಿ ಸಂಗ್ರಹಿಸಬಹುದು. ಈ ಮೂಲಕ ಅಪರಾಧ ತಡೆಗೆ ಅನುಕೂಲವಾಗುತ್ತದೆ. ಕೆಲ ಪ್ರಕರಣಗಳಲ್ಲಿ ಭಾಗಿ, ಮತ್ತೆ ಹೊಸ ಕೃತ್ಯ ಎಸಗಲು ಸಂಚು ರೂಪಿಸುವ ಆರೋಪಿಗಳು ಪತ್ತೆಯಾಗಿದ್ದಾರೆ. ●
ಸುಬ್ರಹ್ಮಣೇಶ್ವರ್ ರಾವ್, ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ
-ಮೋಹನ್ ಭದ್ರಾವತಿ