ಮಹಾನಗರ: ಕೆಎಸ್ಸಾರ್ಟಿಸಿ ಬಸ್‌ಗಳಲ್ಲಿ ನಡೆಯುತ್ತಿದ್ದ ಟಿಕೆಟ್ ತಪಾಸಣೆ ನಗರದಲ್ಲಿ ಓಡಾಡುವ ಸಿಟಿ ಬಸ್‌ಗಳಲ್ಲಿಯೂ ಬರಲಿದೆ. ಪ್ರಯಾಣಿಕರು ಟಿಕೆಟ್ ರಹಿತ ಪ್ರಯಾಣಿಸಿದರೆ ದಂಡ ಪಾವತಿ ಮಾಡಬೇಕಾಗಬಹುದು.
ನಗರದಲ್ಲಿ ಪ್ರತೀ ದಿನ ಓಡಾಡುವ ಹೆಚ್ಚಿನ ಸಿಟಿ ಬಸ್‌ಗಳಲ್ಲಿ ನಿರ್ವಾಹಕರು ಪ್ರಯಾಣಿಕರಿಗೆ ಟಿಕೆಟ್ ನೀಡುವುದಿಲ್ಲ. ಇದನ್ನು ತಡೆಯುವ ಉದ್ದೇಶದಿಂದ ಸಿಟಿ ಬಸ್‌ಗಳಲ್ಲಿ ಟಿಕೆಟ್ ಚೆಕ್ಕಿಂಗ್ ವ್ಯವಸ್ಥೆಯನ್ನು ಪರಿಚಯಿಸಲು ಇದೀಗ ಜಿಲ್ಲಾಡಳಿತ, ಸಾರಿಗೆ ಇಲಾಖೆ ಮುಂದಾಗಿದೆ. ಟಿಕೆಟ್ ತಪಾಸಣೆಗೆಂದು ಆರ್‌ಟಿಒ ತಂಡ ರಚನೆ ಮಾಡಲಿದ್ದು, ಅಗತ್ಯ ಬಿದ್ದರೆ ಹೊರ ಜಿಲ್ಲೆಗಳಿಂದಲೂ ಅಧಿಕಾರಿಗಳು ತಪಾಸಣೆಗೆ ಬರಲಿದ್ದಾರೆ. ಈ ತಂಡ ನಗರದಲ್ಲಿ ಸಂಚರಿಸುವ ಬಸ್‌ಗಳ ಮೇಲೆ ನಿಗಾ ವಹಿಸಲಿದೆ.
ಅರಿವು ಕಾರ್ಯಕ್ರಮ
ಟಿಕೆಟ್ ತಪಾಸಣೆ ನಡೆಸಿ, ದಂಡ ವಿಧಿಸುವ ಮುನ್ನ ಸುಮಾರು 4 ವಾರಗಳ ಕಾಲ ‘ಬಸ್ ಟಿಕೆಟ್ ಪಡೆದು ಪ್ರಯಾಣಿಸಿ’ ಎಂದು ಪ್ರಯಾಣಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಬಳಿಕ ಟಿಕೆಟ್ ತಪಾಸಣೆ ಜಾರಿಗೆ ಬರುತ್ತದೆ. ಸಿಟಿ ಬಸ್ ಮಾಲಕರ ಸಂಘದ ವತಿಯಿಂದ ಸ್ಟೇಟ್ಬ್ಯಾಂಕ್-ಅತ್ತಾವರ-ಮಂಗಳಾದೇವಿ (ರೂಟ್ ನಂ.27) ರೂಟ್‌ನಲ್ಲಿ ಈಗಾಗಲೇ ಟಿಕೆಟ್ ಚೆಕ್ಕಿಂಗ್ ವ್ಯವಸ್ಥೆ ಕಾರ್ಯನಿರ್ವಹಿಸುತ್ತಿದೆ. ಇಲ್ಲಿ ಕೇವಲ ನಿರ್ವಾಹಕರಿಗೆ ಅರಿವು ಮೂಡಿಸಲಾಗುತ್ತದೆ. ಇದೀಗ ಸಾರಿಗೆ ಇಲಾಖೆಯೇ ಈ ನಿರ್ಧಾರಕ್ಕೆ ಬಂದಿರುವುದರಿಂದ ಪ್ರಯಾಣಿಕರು ಕೂಡ ದಂಡ ತೆತ್ತಬೇಕಾಗಿ ಬರಬಹುದು.
Advertisement
ಶನಿವಾರ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಿಟಿ ಬಸ್ ಮಾಲಕರು, ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳ ಸಮಕ್ಷಮದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿದೆ. ಮುಂದಿನ ಕೆಲ ದಿನಗಳಲ್ಲಿಯೇ ನಡೆಯುವ ಆರ್‌ಟಿಒ ಸಭೆಯಲ್ಲಿ ನಿರ್ಣಯ ಕೈಗೊಂಡು ಕಾರ್ಯರೂಪಕ್ಕೆ ಬರಲಿದೆ.
Related Articles
Advertisement
ನಗರದಲ್ಲಿ ಓಡುವ ಕೆಲವು ಸಿಟಿ, ಸರ್ವಿಸ್ ಬಸ್ ಮಾಲಕರು ಬಸ್‌ಗಳನ್ನು ಲೀಸ್‌ಗೆ ನೀಡಿದ್ದು, ಮಾಲಕರು ನಿಯಮಗಳನ್ನು ಪಾಲನೆ ಮಾಡಬೇಕು. ಇಲ್ಲವಾದರೆ ಕಠಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಭೆಯಲ್ಲಿ ಮಾಲಕರಿಗೆ ಎಚ್ಚರಿಕೆ ನೀಡಲಾಯಿತು. ಸಿಟಿ ಬಸ್‌ಗಳ ಚಲನವಲನಗಳನ್ನು ತಿಳಿಯುವ ಉದ್ದೇಶದಿಂದ ಬಸ್‌ಗಳಲ್ಲಿ ಈಗಾಗಲೇ ಜಿಪಿಎಸ್ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಆದರೆ, ಕೆಲವೊಂದು ಬಸ್‌ಗಳಲ್ಲಿ ಈ ನಿಯಮ ಪಾಲನೆ ಮಾಡಲಾಗುತ್ತಿಲ್ಲ ಎಂದು ಬಗ್ಗೆ ಸಭೆಯಲ್ಲಿ ಮಾಲಕರ ಗಮನ ಸೆಳೆಯಲಾಯಿತು.
ಆರ್‌ಟಿಒ ಸಭೆಯಲ್ಲಿ ನಿರ್ಣಯ
ಸಿಟಿ ಬಸ್‌ಗಳಲ್ಲಿ ನಿರ್ವಾಹಕರು ಎಲ್ಲ ಪ್ರಯಾಣಿಕರಿಗೆ ಟಿಕೆಟ್ ನೀಡಬೇಕು ಮತ್ತು ಪ್ರಯಾಣಿಕರು ಟಿಕೆಟ್ ರಹಿತ ಪ್ರಯಾಣ ಮಾಡಬಾರದು ಎಂಬ ಉದ್ದೇಶದಿಂದ ಟಿಕೆಟ್ ಚೆಕ್ಕಿಂಗ್ ವ್ಯವಸ್ಥೆ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ. ಮುಂಬರುವ ಆರ್‌ಟಿಒ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗುವುದು.
– ಚಂದ್ರ ಉಪ್ಪಾರ, ಮಂಗಳೂರು ಪ್ರಾದೇಶಿಕ ಸಾರಿಗೆ ಅಧಿಕಾರಿ