Advertisement

ತ್ಯಾಜ್ಯಮಯ ನಿವೇಶನ ಮಾಲೀಕರಿಗೆ ದಂಡ

11:54 AM May 04, 2019 | Team Udayavani |

ಹುಬ್ಬಳ್ಳಿ: ತ್ಯಾಜ್ಯವನ್ನು ಬಯೋ ಮೈನಿಂಗ್‌ ಮೂಲಕ ಸಂಸ್ಕರಿಸಿ ವರದಿ ನೀಡಬೇಕು. ತ್ಯಾಜ್ಯ ಸಂಗ್ರಹಕ್ಕೆ ತಾಣವಾಗುವ ಖಾಲಿ ನಿವೇಶನಗಳ ಮಾಲೀಕರಿಗೆ ನೋಟಿಸ್‌ ನೀಡಿ ದಂಡ ವಸೂಲಿ ಮಾಡಬೇಕೆಂದು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ರಾಜ್ಯ ಸಮಿತಿ ಅಧ್ಯಕ್ಷ ಸುಭಾಸ ಅಡಿ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಧಾರವಾಡದ ಮಹಾನಗರ ಪಾಲಿಕೆ ಕಚೇರಿಯಲ್ಲಿ ಘನತ್ಯಾಜ್ಯ ನಿರ್ವಹಣೆ ಕುರಿತು ನಡೆದ ಸಭೆಯಲ್ಲಿ ಮಾತನಾಡಿದ ಅವರು, ತ್ಯಾಜ್ಯ ಸಂಗ್ರಹ ಹಾಗೂ ವಿಲೇವಾರಿ ಆಗದಿರುವುದು ಪರಿಸರ ಮಾಲಿನ್ಯದೊಂದಿಗೆ ನಗರ ಸೌಂದರ್ಯ ಹಾಳು ಮಾಡುತ್ತದೆ. ರಸ್ತೆ ಪಕ್ಕದಲ್ಲಿ ಕಟ್ಟಡ ತ್ಯಾಜ್ಯ ಸೇರಿದಂತೆ ಇತರೆ ತ್ಯಾಜ್ಯ ಹಾಕುತ್ತಿದ್ದಾರೆ. ಖಾಲಿ ನಿವೇಶನಗಳಲ್ಲಿ ತ್ಯಾಜ್ಯ ಸಂಗ್ರಹವಾಗುತ್ತಿದೆ. ಈ ನಿವೇಶನಗಳನ್ನು ಸ್ವಚ್ಛವಾಗಿರಿಸಿಕೊಳ್ಳುವಲ್ಲಿ ಮಾಲೀಕರ ನಿರ್ಲಕ್ಷ್ಯವಿರುವುದರಿಂದ ಅವರಿಗೆ ನೋಟಿಸ್‌ ಜಾರಿ ಮಾಡಿ ದಂಡ ವಸೂಲಿ ಮಾಡುವಂತೆ ಹೇಳಿದ್ದಾರೆ.

ನಗರ ಪ್ರದೇಶಗಳಲ್ಲಿ ಬೇಕಾಬಿಟ್ಟಿಯಾಗಿ ತ್ಯಾಜ್ಯ ಸುರಿಯಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪಾಲಿಕೆ ಅಧಿಕಾರಿಗಳು ಪೊಲೀಸ್‌ ಇಲಾಖೆಯ ಸಹಕಾರ ಪಡೆಯಬೇಕು. ತ್ಯಾಜ್ಯವನ್ನು ನಿರ್ದಿಷ್ಟ ಪ್ರದೇಶಗಳಿಗೆ ಹಾಗೂ ಅನುಮತಿ ಪಡೆದ ವಾಹನಗಳಲ್ಲಿ ಸಾಗಾಣಿಕೆ ಮಾಡಬೇಕು. ಇದನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಬೇಕು. ಕಟ್ಟಡ ತ್ಯಾಜ್ಯ ನಿರ್ವಹಣಾ ಘಟಕ ಆರಂಭಕ್ಕೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ತ್ಯಾಜ್ಯ ನಿರ್ವಹಣೆ ಕುರಿತು ಪೌರಕಾರ್ಮಿಕರಿಗೆ ತರಬೇತಿ ನೀಡುವ ಮೂಲಕ ಪರಿಣಾಮಕಾರಿಯಾಗಿ ಕಾರ್ಯ ನಡೆಯುವಂತೆ ನೋಡಿಕೊಳ್ಳಬೇಕು. ಕಸ ವಿಂಗಡಣೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಿ ಪ್ರಾಥಮಿಕ ಹಂತದಲ್ಲೇ ವಿಂಗಡಣೆಯಾಗಬೇಕು. ಸ್ಯಾನಿಟರಿ ತ್ಯಾಜ್ಯ (ಸ್ಯಾನಿಟರಿ ಪ್ಯಾಡ್‌, ಡೈಪರ್‌) ವಿಲೇವಾರಿ ದೃಷ್ಟಿಯಿಂದ ಪೌಚ್‌ಗಳನ್ನು ನೀಡುವಂತೆ ವಿತರಕರಿಗೆ ಪಾಲಿಕೆಯಿಂದ ಸೂಚನೆ ನೀಡಬೇಕು. ಹೆಚ್ಚಿನ ಪ್ರಮಾಣದಲ್ಲಿ ತ್ಯಾಜ್ಯ ಉತ್ಪತ್ತಿಯಾಗುವ ಹೋಟೆಲ್, ಅಪಾರ್ಟ್‌ಮೆಂಟ್, ಕಲ್ಯಾಣ ಮಂಟಪ, ವಾಣಿಜ್ಯ ಸಂಕೀರ್ಣಗಳಲ್ಲಿ ಕಸ ನಿರ್ವಹಣಾ ಘಟಕ ಆರಂಭವಾಗಬೇಕು. ಈ ಕುರಿತು ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಬೇಕು ಎಂದು ಹೇಳಿದರು.

ಹೋಟೆಲ್ ಆವರಣಗಳಲ್ಲಿ ಕಾಂಪೋಸ್ಟ್‌ ಗೊಬ್ಬರ ತಯಾರಿಸುವ ಕುರಿತು ಪ್ರಾತ್ಯಕ್ಷಿಕೆ ಹಾಗೂ ಮಾರುಕಟ್ಟೆಯಲ್ಲಿ ಲಭ್ಯವಿರುವ ಯಂತ್ರಗಳ ಕುರಿತು ಮಾಹಿತಿ ನೀಡಲಾಯಿತು. ಪಾಲಿಕೆ ಆಯುಕ್ತ ಪ್ರಶಾಂತ ಮಿಶ್ರಾ, ಘನತ್ಯಾಜ್ಯ ನಿರ್ವಹಣಾ ವಿಭಾಗದ ಆರ್‌. ವಿಜಯಕುಮಾರ, ಹೋಟೆಲ್ ಅಸೋಸಿಯೇಶನ್‌, ಸರ್ಕಾರೇತರ ಸಂಸ್ಥೆ, ಸ್ತ್ರೀ ಶಕ್ತಿ ಸಂಘದ ಸದಸ್ಯರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next