ಮುಧೋಳ: ಟ್ರ್ಯಾಕ್ಟರ್ ಹಾಗೂ ಟಂಟಂಗಳಲ್ಲಿ ಕರ್ಕಶ ಶಬ್ದದಿಂದ ಜನರಿಗೆ ಆಗುವ ತೊಂದರೆ ತಪ್ಪಿಸಲು ತಾಲೂಕಿನ ಗ್ರಾಮ ಪಂಚಾಯತಗಳು ದಂಡ ವಿಧಿಸಿ ವಾಹನವನ್ನು ವಶಕ್ಕೆ ಪಡೆಯುವ ನಿಯಮ ಜಾರಿಗೆ ತಂದಿವೆ. ಕಬ್ಬು ತುಂಬಿದ ಟ್ರ್ಯಾಕ್ಟರ್‌ನಲ್ಲಿ ಜೋರಾಗಿ ಹಾಡು ಹಾಕಿಕೊಂಡು ಹೊರಟರೆ ಗ್ರಾಮಸ್ಥರಿಗೆ ಇನ್ನಿಲ್ಲದ ಕಿರಿಕಿರಿ ಉಂಟಾಗುತ್ತದೆ.
ಹಾಡಿನ ಸದ್ದಿನಿಂದಾಗಿ ಹಿಂದುಗಡೆ ಬರುವ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತದೆ. ಈ ಸಮಸ್ಯೆ ಮನವರಿಕೆ ಮಾಡಿಕೊಂಡಿರುವ ಇಂಗಳಗಿ ಗ್ರಾಮಸ್ಥರು ಟ್ರ್ಯಾಕ್ಟರ್ ಹಾಗೂ ಟಂಟಂಗಳು ಗ್ರಾಮದಲ್ಲಿ ಚಲಿಸುವಾಗ ಹಾಡು ಹಚ್ಚಿಕೊಂಡು ಸಾಗಬಾರದು ಎಂಬ ಸ್ಥಳೀಯ ನಿಯಮ ಮಾಡಿಕೊಂಡಿದ್ದಾರೆ. ಒಂದು ವೇಳೆ ಗ್ರಾಮದ ಹಿರಿಯರು ಮಾಡಿರುವ ನಿಯಮಮುರಿದರೆ ಅಂತಹ ವಾಹನಗಳ ಚಾಲಕ ಅಥವಾ ಮಾಲೀಕರಿಗೆ 5 ಸಾವಿರ ರೂ. ದಂಡ ಹಾಗೂ ಎರಡು ದಿನ ವಾಹನವನ್ನು ವಶಕ್ಕೆ ಪಡೆಯಲಾಗುತ್ತಿದೆ.
ಸರ್ವಾನುಮತದ ನಿಯಮ: ಕಳೆದ ಮೂರ್‍ನಾಲ್ಕು ತಿಂಗಳುಗಳ ಹಿಂದೆ ಗ್ರಾಮದಲ್ಲಿ ಟ್ರ್ಯಾಕ್ಟರ್ ಹಾಗೂ ಟಂಟಂಗಳು ಅನಗತ್ಯವಾಗಿ ಜೋರಾಗಿ ಹಾಡನ್ನು ಹಾಕಿಕೊಂಡು ಓಡಿಸಲಾಗುತ್ತಿದ್ದು. ಈ ರೀತಿ ಮಾಡುವುದರಿಂದ ಗ್ರಾಮದಲ್ಲಿ ಶಬ್ದ ಮಾಲಿನ್ಯದೊಂದಿಗೆ ಜನರಿಗೆ ಇನ್ನಿಲ್ಲದಂತೆ ಕಿರಿಕಿರಿಯುಂಟಾಗಿತ್ತು. ಈ ಹಿನ್ನೆಲೆ ಗ್ರಾಮಸ್ಥರೆಲ್ಲ ಸೇರಿ ಅನಗತ್ಯವಾಗಿ ಹಾಡು ಹಾಕಿಕೊಂಡು ಸುತ್ತಾಡುವ ವಾಹನದ ಮಾಲೀಕರು ಅಥವಾ ಚಾಲಕರಿಗೆ ದಂಡ ವಿಧಿಸುವ ನಿಯಮ ಜಾರಿಗೆ ತಂದಿದ್ದಾರೆ.
ಗ್ರಾಮದ ಅಭಿವೃದ್ಧಿಗೆ ಬಳಕೆ: ಇಂಗಳಗಿ ಗ್ರಾಪಂನಿಂದ ಇದೂವರೆಗೂ ಒಟ್ಟು ನಾಲ್ಕು ವಾಹಗಳಿಗೆ ದಂಡ ವಿಧಿಸಿದ್ದು, ದಂಡದಿಂದ ಸಂಗ್ರಹವಾಗುವ ಹಣವನ್ನು ಗ್ರಾಮದ ದೇವಸ್ಥಾನ ಜೀರ್ಣೋದ್ಧಾರ, ರಸ್ತೆ ದುರಸ್ತಿ ಸೇರಿದಂತೆ ಗ್ರಾಮದ ವಿವಿಧ ಮೂಲಭೂತ ಕಾರ್ಯಗಳಿಗೆ ಬಳಕೆ ಮಾಡಿಕೊಳ್ಳುತ್ತಾರೆ.
ಹಲಗಲಿಯಲ್ಲಿಯೂ ಇದೆ ಎಚ್ಚರಿಕೆ ಫಲಕ: ಟ್ರ್ಯಾಕ್ಟರ್ ಹಾಗೂ ಟಂಟಂಗಳಲ್ಲಿ ಹಾಡು ಹಾಕಬಾರದು ಎಂಬ ನಿಯಮವನ್ನು ತಾಲೂಕಿನ ಹಲಗಲಿಯಲ್ಲಿಯೂ ಅಳವಡಿಸಲಾಗಿದೆ. ಗ್ರಾಮ ಪ್ರವೇಶಿಸುವ ಹದ್ದಿಯಲ್ಲಿ ಎಚ್ಚರಿಕೆ ಫಲಕ ಅಳವಡಿಸಿದ್ದು, ಜೋರಾಗಿ ಹಾಡು ಹಾಕಬಾರದು ಎಂದು ಸೂಚಿಸಲಾಗಿದೆ.
ಗ್ರಾಮಸ್ಥರ-ಹಿರಿಯರು ಹಾಗೂ ಪಂಚಾಯತ್ ಸದಸ್ಯರ ಸರ್ವಾನುಮತದಿಂದ ಅನಗತ್ಯವಾಗಿ ಓಡಾಡುವ ವಾಹನಗಳಿಗೆ ದಂಡ ವಿಧಿಸುವ ನಿಯಮವನ್ನು ಜಾರಿಗೆ ತರಲಾಗಿದೆ. ಇದರಿಂದ ಗ್ರಾಮದಲ್ಲಿ ಶಬ್ದ ಮಾಲಿನ್ಯದ ಜತೆಯಲ್ಲಿ ಅನಗತ್ಯ ಕಿರಿಕಿರಿ ತಪ್ಪಿದಂತಾಗಿದೆ. ಆ ಹಣವನ್ನು ಗ್ರಾಮದ ಅಭಿವೃದ್ಧಿ ಕಾರ್ಯಕ್ಕೆ ಬಳಸಲಾಗುತ್ತಿದೆ
. –ಕಲ್ಮೇಶ ಚಿನ್ನಣ್ಣವರ, ಗ್ರಾಮ ಪಂಚಾಯತ ಸದಸ್ಯ ಇಂಗಳಗಿ
-ಗೋವಿಂದಪ್ಪ ತಳವಾರ