ಕುದೂರು: ಹೆಲ್ಮೆಟ್ ಇಲ್ಲದ ದ್ವಿಚಕ್ರ ವಾಹನ ಸವಾರರಿಗೆ ದಂಡ ವಿಧಿಸುತ್ತಿರುವ ಕುದೂರು ಠಾಣೆ ಪಿಎಸ್‌ಐ ಕಿರಣ್, ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಸಾಕಷ್ಟು ಅಕ್ರಮಗಳಿಗೆ ಕಡಿವಾಣ ಹಾಕಿದ್ದಾರೆ.
ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಿದ್ದಾರೆ. ವಾಹನ ಸವಾರರಿಗೆ ಕಳೆದ 15 ದಿನಗಳಿಂದ ಹೆಲ್ಮೆಟ್ ಧರಿಸಿ ಪ್ರಾಣ ರಕ್ಷಿಸಿಕೊಳ್ಳಿ ಎಂಬ ವಾಕ್ಯದಂತೆ ವಿಶೇಷವಾಗಿ ಅರಿವು ಮೂಡಿಸಿದ್ದರು. ಹೆಲ್ಮೆಟ್ ಇಲ್ಲದ ದ್ವಿಚಕ್ರ ವಾಹನ ಸವಾರರಿಗೆ ಕುದೂರು ಪೊಲೀಸ್ ಠಾಣೆಯ ಪಿಎಸ್‌ಐ ಕಿರಣ್ ಹಾಗೂ ಸಿಬ್ಬಂದಿ ದಂಡ ವಿಧಿಸಿದ್ದಾರೆ.
ದ್ವಿಚಕ್ರ ವಾಹನಗಳ ತಪಾಸಣೆ: ಈ ವೇಳೆ ಸುದ್ದಿಗಾರರೊದಿಗೆ ಮಾತನಾಡಿ, ಹೆಲ್ಮೆಟ್ ಧರಿಸದೇ ವಾಹನ ಚಾಲನೆ ಮಾಡುವುದರಿಂದ ಅಪಘಾತಗಳು ನಡೆದ ಸಂದರ್ಭದಲ್ಲಿ ತಲೆಗೆ ಪೆಟ್ಟು ಬಿದ್ದು, ಮರಣ ಹೊಂದುವವರ ಸಂಖ್ಯೆ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಕಳೆದ ಅ.20ರಿಂದ ಪ್ರತಿಯೊಬ್ಬ ವಾಹನ ಸವಾರರು ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕಿದ್ದು, ಹೆಲ್ಮೆಟ್ ಇಲ್ಲದೆ ವಾಹನ ಚಾಲನೆ ಮಾಡುವವರಿಗೆ 1000 ರೂ. ದಂಡ ವಿಧಿಸಬಹುದಾಗಿದೆ. ಈ ನಿಟ್ಟಿನಲ್ಲಿ ದ್ವಿಚಕ್ರ ವಾಹನಗಳ ತಪಾಸಣೆ ನಡೆಸಲಾಗುತ್ತದೆ ಎಂದು ತಿಳಿಸಿದರು,
ಸಾರ್ವಜನಿಕರಿಗೆ ತೊಂದರೆ: ಹೆಲ್ಮೆಟ್ ಧರಿಸುವಂತೆ ಇನ್ನು ಕೆಲವು ದಿನಗಳ ಕಾಲ ಪೊಲೀಸರು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡಬೇಕು. ಒಂದೇ ಬಾರಿ ಕಟ್ಟು ನಿಟ್ಟಿನ ಕಾನೂನು ತಂದರೆ ಸಾರ್ವಜನಿಕರಿಗೆ ಬಹಳಷ್ಟು ತೊಂದರೆಯಾಗುತ್ತದೆ. ಈ ಬಗ್ಗೆ ಪೊಲೀಸ್ ಇಲಾಖೆ ಚಿಂತನೆ ನೆಡೆಸಬೇಕು ಎಂದು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.
ವಾಹನ ಸವಾರರೆಲ್ಲಾ ಒಂದು ಸಾವಿರ ದಂಡ ಕಟ್ಟುವ ಬದಲು ಹೆಲ್ಮೆಟ್ ಹಾಕಿಕೊಂಡೆ ಹೋಗೋಣ ಎಂಬ ಮನಸ್ಥಿತಿಗೆ ಬಂದಿದ್ದಾರೆ. ರಸ್ತೆ ಸಂಚಾರದ ಬಗ್ಗೆ ಅರಿವು ಮೂಡಿಸಿ, ಹೆಲ್ಮೆಟ್ ಹಾಕದವರಿಗೆ ದಂಡ ಕೂಡ ವಿಧಿಸಲಾಗುತ್ತಿದೆ.
ಹೆಲ್ಮೆಟ್ ಕಡ್ಡಾಯ ಸರಿಯಿದೆ: ಸವಾರರ ಹಿತದೃಷ್ಟಿಯಿಂದ ಹೆಲ್ಮೆಟ್ ಕಡ್ಡಾಯ ಮಾಡಿರುವುದು ಉತ್ತಮ ವಿಚಾರವಾಗಿದೆ. ಸರಿಯಾಗಿ ವಾಹನ ಚಲಾಯಿಸಿದರೂ ಹಿಂದೆ ಮುಂದೆ ಬರುವ ಇತರೆ ವಾಹನ ಸವಾರರು ಸರಿಯಾಗಿ ಬರುತ್ತಾರೂ ಇಲ್ಲವೂ ಗೊತ್ತಾಗುತ್ತಿಲ್ಲ. ಬೈಕ್‌ನಿಂದ ಬಿದ್ದ ಕೂಡಲೇ ತಲೆಗೆ ಮೊದಲು ಪೆಟ್ಟಾಗುತ್ತದೆ. ಹೆಲ್ಮಟ್ ಧರಿಸಿದ್ದರೆ ಪ್ರಾಣ ರಕ್ಷಿಸಿಕೊಳ್ಳಬಹುದು ಎಂದು ತಾಪಂ ಮಾಜಿ ಅಧ್ಯಕ್ಷ ಕೆ.ಆರ್.ಯತಿರಾಜು ತಿಳಿಸಿದ್ದಾರೆ.